ADVERTISEMENT

ನಾಗರಾಳ ಜಲಾಶಯ: 4200 ಕ್ಯೂಸೆಕ್ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:07 IST
Last Updated 22 ಸೆಪ್ಟೆಂಬರ್ 2025, 5:07 IST
ಚಿಂಚೋಳಿ ತಾಲ್ಲೂಕಿನ ಕೊಟಗಾ ಗ್ರಾಮದ ಬಳಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಜ್ ಕಂ ಬ್ಯಾರೇಜು ತುಂಬಿ ಹರಿಯುತ್ತಿರುವುದು
ಚಿಂಚೋಳಿ ತಾಲ್ಲೂಕಿನ ಕೊಟಗಾ ಗ್ರಾಮದ ಬಳಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಬ್ರಿಜ್ ಕಂ ಬ್ಯಾರೇಜು ತುಂಬಿ ಹರಿಯುತ್ತಿರುವುದು   

ಚಿಂಚೋಳಿ: ತಾಲ್ಲೂಕಿನ ನಾಗರಾಳ ಜಲಾಶಯದ ಹಿಂಭಾಗದಲ್ಲಿ ಭಾನುವಾರ ಮಧ್ಯಾಹ್ನ ಭಾರಿ ಮಳೆಯಾಗಿದ್ದರಿಂದ ಜಲಾಶಯಕ್ಕೆ ದಾಖಲೆಯ ಪ್ರಮಾಣದಲ್ಲಿ ಒಳಹರಿವು ಹೆಚ್ಚಿದೆ.

ಗರಿಷ್ಠ 491 ಮೀಟರ್ ನೀರು ಸಂಗ್ರಹದ ಸಾಮರ್ಥ್ಯದ ಜಲಾಶಯದಲ್ಲಿ ಭಾನುವಾರ 490.12 ಮೀಟರ್ ನೀರಿನ ಮಟ್ಟವಿತ್ತು. ಮೂರು ಗೇಟ್‌ಗಳ ಮೂಲಕ 4,200 ಕ್ಯೂಸೆಕ್‌ ನೀರು ನದಿಗೆ ಬಿಟ್ಟಿದ್ದರೂ ಜಲಾಶಯದ ನೀರಿನ ಮಟ್ಟ ತಗ್ಗಿಲ್ಲ. ಹೀಗಾಗಿ ನದಿಗೆ ನೀರು ಬಿಡುಗಡೆಯ ಪ್ರಮಾಣ ಹೆಚ್ಚಳವಾಗಲಿದೆ’ ಎಂದು ಎಇಇ ಅಮೃತ ಪವಾರ ಮತ್ತು ಎಇ ವಿನಾಯಕ ಚವ್ಹಾಣ ತಿಳಿಸಿದ್ದಾರೆ.

‘ಮುಲ್ಲಾಮಾರಿ ನದಿಗೆ ಕೊಟಗಾ ಗ್ರಾಮದಲ್ಲಿ ನಿರ್ಮಿಸಿದ ಬಾಂದಾರು ಸೇತುವೆ (ಬ್ರಿಜ್ ಕಂ. ಬ್ಯಾರೇಜು)ತುಂಬಿ ಹರಿಯುತ್ತಿದೆ’ ಎಂದು ಕೊಟಗಾ ಗ್ರಾಮದ ಮುಖಂಡ ಗೌಡಪ್ಪ ಪಾಟೀಲ ಪ್ರಜಾವಾಣಿಗೆ ತಿಳಿಸಿದರು.

ಐನಾಪುರ, ಕೊಟಗಾ, ಖಾನಾಪುರ, ಭೂಂಯಾರ್, ರಾಣಾಪುರ, ಚಂದನಕೇರಾ, ಚೇಂಗಟಾ, ಸುಲೇಪೇಟ, ಹೂವಿನಭಾವಿ, ಕನಕಪುರ, ಚಿಂಚೋಳಿ, ಚಂದಾಪುರ, ಐನೋಳ್ಳಿ ದೇಗಲಮಡಿ ಮೊದಲಾದ ಕಡೆ ಭಾರಿ ಮಳೆಯಾಗಿದೆ. ಇದರಿಂದ ನಾಲಾ, ನದಿ, ತೊರೆಗಳು ಉಕ್ಕಿ ಹರಿಯುತ್ತಿವೆ.

‘ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ, ಕನಕಪುರ, ಗೌಡನಹಳ್ಳಿ, ನೀಮಾಹೊಸಳ್ಳಿ, ಚಂದಾಪುರ, ಅಣವಾರ, ಗರಗಪಳ್ಳಿ, ಬುರುಗಪಳ್ಳಿ ಮೊದಲಾದ ಸೇತುವೆಗಳು ಮುಳುಗಡೆಯಾಗಲಿವೆ. ನದಿ ಪಾತ್ರದ ಜನರು ಎಚ್ಚರಿಕೆ ವಹಿಸಬೇಕು’ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.