ADVERTISEMENT

‘ಧರ್ಮದ ಆಧಾರದ ಪೌರತ್ವವೇ ಸಂವಿಧಾನ ವಿರೋಧಿ’

ಕಲಬುರ್ಗಿ ನಾಗರಿಕ ಹೋರಾಟ ಸಮಿತಿಯಿಂದ ಸಿಎಎ ವಿರೋಧಿ ಜಾಗೃತಿ ಸಭೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 14:34 IST
Last Updated 12 ಜನವರಿ 2020, 14:34 IST
ಸಿಎಎ, ಎನ್‌ಆರ್‌ಸಿ ಕುರಿತ ಸಮಾವೇಶದಲ್ಲಿ ಡಾ.ಎಂ.ಚಂದ್ರ ಪೂಜಾರಿ ಮಾತನಾಡಿದರು. ಎಚ್‌.ವಿ.ದಿವಾಕರ್‌, ಮಹೇಶ ರಾಠೋಡ, ಜಹಿರುದ್ದೀನ್‌ ಅಲಿ ಖಾನ್, ಕೆ.ಉಮಾ, ವಿ. ನಾಗಮ್ಮಾಳ್‌ ಇದ್ದರು
ಸಿಎಎ, ಎನ್‌ಆರ್‌ಸಿ ಕುರಿತ ಸಮಾವೇಶದಲ್ಲಿ ಡಾ.ಎಂ.ಚಂದ್ರ ಪೂಜಾರಿ ಮಾತನಾಡಿದರು. ಎಚ್‌.ವಿ.ದಿವಾಕರ್‌, ಮಹೇಶ ರಾಠೋಡ, ಜಹಿರುದ್ದೀನ್‌ ಅಲಿ ಖಾನ್, ಕೆ.ಉಮಾ, ವಿ. ನಾಗಮ್ಮಾಳ್‌ ಇದ್ದರು   

ಕಲಬುರ್ಗಿ: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಪೌರತ್ವ (ತಿದ್ದುಪಡಿ) ಕಾಯ್ದೆಯು ಧರ್ಮದ ಆಧಾರದಲ್ಲಿ ಪಾಕಿಸ್ತಾನ, ಅಪಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಬಂದವರಿಗೆ‍ಪೌರತ್ವ ನೀಡಲು ಮುಂದಾಗಿರುವ ಕ್ರಮವೇ ಸಂವಿಧಾನ ವಿರೋಧಿಯಾದುದು. ಈ ಮೂಲಕ ಬಿಜೆಪಿ ಸರ್ಕಾರ ತನ್ನ ಕೋಮುವಾದಿ ಅಜೆಂಡಾ ಅನುಷ್ಠಾನಕ್ಕೆ ಮುಂದಾಗಿದೆ ಎಂದು ಚಿಂತಕ ಡಾ.ಎಂ.ಚಂದ್ರ‍ಪೂಜಾರಿ ಟೀಕಿಸಿದರು.

ನಗರದಲ್ಲಿ ಭಾನುವಾರ ನಾಗರಿಕ ಹೋರಾಟ ಸಮಿತಿಯಿಂದ ಸಿಎಎ, ಎನ್‌ಆರ್‌ಸಿ ಕುರಿತು ಏರ್ಪಡಿಸಿದ್ದ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ‘ಸಿಎಎಯಿಂದ ಇಲ್ಲಿನ ಜನರ ಪೌರತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಸರ್ಕಾರ ಹಸಿ ಸುಳ್ಳು ಹೇಳುತ್ತಿದೆ. ಎಲ್ಲರೂ ತಮ್ಮ ತಂದೆ ತಾಯಿಯ ವಾಸಸ್ಥಳ ಹಾಗೂ ಜನ್ಮದಾಖಲೆಗಳನ್ನು ಕೊಡಬೇಕಾಗುತ್ತದೆ. ಆದರೆ, ದೇಶದಲ್ಲಿ 48 ಕೋಟಿ ಭೂರಹಿತರಿದ್ದಾರೆ. 10 ಕೋಟಿ ಜನ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಆರು ಕೋಟಿ ಅಲೆಮಾರಿಗಳಿದ್ದಾರೆ. 45 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಇವರೆಲ್ಲ ಸೇರಿ ಶೇ 70ರಷ್ಟಿದ್ದಾರೆ. ಇವರ ಬಳಿ ಸರ್ಕಾರ ಬಯಸುವ ದಾಖಲೆಗಳು ದೊರೆಯುತ್ತವೆಯೇ’ ಎಂದು ಪ್ರಶ್ನಿಸಿದರು.

‘2010ರಲ್ಲಿ ಒಂದು ಬಾರಿ ರಾಷ್ಟ್ರೀಯ ಪೌರತ್ವ ನೋಂದಣಿ ನಡೆದಿತ್ತು. 15 ಪ್ರಶ್ನೆಗಳನ್ನು ಕೇಳಲಾಗಿತ್ತು. ಆದರೆ, ಅದರಿಂದ ಯಾರಿಗೂ ತೊಂದರೆಯಾಗಿಲ್ಲ. ಇಂದಿನ ಕೇಂದ್ರ ಸರ್ಕಾರ 20 ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಎನ್‌ಆರ್‌ಸಿಗೆ ಮುಂದಾಗಿದೆ. ತಂದೆ–ತಾಯಿಯ ವಾಸಸ್ಥಳ ಯಾವುದು. ಅವರ ಜನ್ಮದಿನಾಂಕ ಯಾವುದು ಎಂಬಂತಹ ಪ್ರಶ್ನೆಗಳು ಇದರಲ್ಲಿ ಸೇರಿವೆ. ಅನಕ್ಷರಸ್ಥ ತಂದೆ–ತಾಯಿ ಜನ್ಮದಾಖಲೆಗಳನ್ನು ಎಲ್ಲಿಂದ ತರಲು ಸಾಧ್ಯ’ ಎಂದು ಪ್ರಶ್ನಿಸಿದ ಅವರು, ಸೂಕ್ತ ದಾಖಲೆ ಹಾಜರುಪಡಿಸಲು ಸಾಧ್ಯವಾಗದಾದಾಗ ನಮ್ಮನ್ನು ‘ಸಂಶಯದ ನಾಗರಿಕ’ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಬಹುದಾಗಿದೆ. ನಮ್ಮ ನಾಗರಿಕತ್ವದ ದಾಖಲೆಗಳನ್ನು ಕೇಳುವ ಜನಪ್ರತಿನಿಧಿಗಳ ಬದ್ಧತೆಯನ್ನು ನಾವು ಪ್ರಶ್ನೆ ಮಾಡಿದ್ದೇವೆಯೇ’ ಎಂದರು.

ADVERTISEMENT

ಹೈದರಾಬಾದ್‌ನ ಸಿಯಾಸತ್‌ ಉರ್ದು ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕ ಜಹಿರುದ್ದೀನ್‌ ಅಲಿ ಖಾನ್‌ ಮಾತನಾಡಿ, ‘ಕೇಂದ್ರದ ಬಿಜೆಪಿ ಸರ್ಕಾರವು ಕುಸಿಯುತ್ತಿರುವ ಜಿಡಿಪಿ, ಹೆಚ್ಚುತ್ತಿರುವ ನಿರುದ್ಯೋಗ, ಬೆಲೆ ಏರಿಕೆಯಂಥ ಸಮಸ್ಯೆಗಳನ್ನು ತಡೆಯಲು ವಿಫಲವಾಗಿದೆ. ಅದನ್ನು ಮರೆಮಾಚಲು ಇದೀಗ ಸಿಎಎ, ಎನ್‌ಆರ್‌ಸಿಯಂತಹ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತರೆ ಅವರು ಸರ್ಕಾರವನ್ನು ಪ್ರಶ್ನಿಸಲು ಶುರು ಮಾಡುತ್ತಾರೆ. ಅವರಿಗೆ ಶಿಕ್ಷಣ ವಂಚಿತರನ್ನಾಗಿಸುವ ಕುತಂತ್ರ ಹೂಡಿರುವ ಸರ್ಕಾರ 38 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿದೆ’ ಎಂದು ಟೀಕಿಸಿದರು.

ಸೋಷಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ ಕಮ್ಯುನಿಸ್ಟ್ ಪಕ್ಷದ (ಎಸ್‌ಯುಸಿಐ–ಸಿ) ರಾಜ್ಯ ಕಾರ್ಯದರ್ಶಿ ಕೆ. ಉಮಾ ಮಾತನಾಡಿ, ‘ಜನರನ್ನು ಒಡೆದು ಆಳುವ ನೀತಿಯನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಬಿಜೆಪಿ ಟೀಕಿಸುತ್ತದೆ. ಆದರೆ, ವಾಸ್ತವವಾಗಿ 1923ರಲ್ಲಿ ಭಾರತವನ್ನು ಏಕ ಧರ್ಮದ ಆಳ್ವಿಕೆಯಲ್ಲಿ ತರುವ ಹುನ್ನಾರವನ್ನು ಹಿಂದೂ ಮಹಾಸಭಾ ಮಾಡಿತ್ತು. ಮಹಾಸಭಾ ಮುಖಂಡ ವಿ.ಡಿ. ಸಾವರ್ಕರ್‌ ಮೊಹಮ್ಮದ್‌ ಅಲಿ ಜಿನ್ನಾ ನೇತೃತ್ವದಲ್ಲಿ ಪಾಕಿಸ್ತಾನವಾಗಿದ್ದಕ್ಕೆ ಜಿನ್ನಾರನ್ನು ಅಭಿನಂದಿಸಿದ್ದರು. ಪಾಕಿಸ್ತಾನದಂತೆ ಭಾರತವೂ ಹಿಂದೂ ರಾಷ್ಟ್ರವಾಗಬೇಕು ಎಂದು ಬಯಸಿದ್ದರು. ಹಾಗಿದ್ದರೆ ಜನರನ್ನು ವಿಭಜಿಸುವವರು ಯಾರು’ ಎಂದು ಪ್ರಶ್ನಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಾಗರಿಕರ ಹೋರಾಟ ಸಮಿತಿ ಸಂಚಾಲಕ ಎಚ್‌.ವಿ.ದಿವಾಕರ್, ‘ದುಡಿಯುವ ವರ್ಗದ ಸಂಕಟಗಳಿಗೂ ಎಂದಿಗೂ ಕಿವಿಯಾಗದ ಸರ್ಕಾರ ದಿಢೀರ್‌ ಎಂದು ಪೌರತ್ವ ಕಾಯ್ದೆಯ ತಿದ್ದುಪಡಿ ಮಾಡಿ ಜನರನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡಿ ಅಂತಿಮವಾಗಿ ಜನರ ಏಕತೆ ಮುರಿಯಲು ಮುಂದಾಗಿದೆ. ಸಿಎಎ, ಎನ್‌ಆರ್‌ಸಿ ಬಗ್ಗೆ ಜನರಲ್ಲಿ ಇರುವ ಗೊಂದಲಗಳನ್ನು ನಿವಾರಿಸಲು ಸರ್ಕಾರ ಇಂದಿಗೂ ಮುಂದಾಗಿಲ್ಲ. ಬರೀ ಹಾರಿಕೆ ಉತ್ತರಗಳನ್ನೇ ನೀಡುತ್ತಿದೆ’ ಎಂದು ಟೀಕಿಸಿದರು.

ಭಾರತೀಯ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಸಹ ಕಾರ್ಯದರ್ಶಿ ಮಹೇಶ ರಾಠೋಡ, ಹೋರಾಟ ಸಮಿತಿ ಕೋರ್‌ ಕಮಿಟಿ ಸದಸ್ಯ ಆರಿಫುದ್ದೀನ್‌, ಸಂಜಯ ಮಾಕಲ್, ಜ್ಞಾನಮಿತ್ರ ಸ್ಯಾಮ್ಯುವೆಲ್, ವಿ.ನಾಗಮ್ಮಾಳ್, ಇಸಾಬುದ್ದೀನ್, ಅಬ್ದುಲ್‌ ಹಮೀದ್‌, ಯೂನುಸ್‌ ಅಲಿ, ಸೈಯದ್‌ ಶಫಿ, ವಿ.ಜಿ.ದೇಸಾಯಿ, ಎಸ್‌.ಎಂ.ಶರ್ಮಾ, ಮಹಮ್ಮದ್‌ ಇಕ್ಬಾಲ್‌ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.