ADVERTISEMENT

ಕಲಬುರ್ಗಿ–ಮಂಗಳೂರು ಮಧ್ಯೆ ವಿಮಾನ ಆರಂಭಿಸಿ: ನಳಿನ್‌ಕುಮಾರ್‌ ಕಟೀಲ್‌ ಪತ್ರ

ಸಚಿವರಿಗೆ ನಳಿನ್‌ಕುಮಾರ್‌ ಕಟೀಲ್‌ ಪತ್ರ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 16:43 IST
Last Updated 26 ಮಾರ್ಚ್ 2021, 16:43 IST
ನಳಿನ್‌ಕುಮಾರ್ ಕಟೀಲ್
ನಳಿನ್‌ಕುಮಾರ್ ಕಟೀಲ್   

ಕಲಬುರ್ಗಿ: ಕಲಬುರ್ಗಿ– ಮಂಗಳೂರು ಮಧ್ಯೆ ಬೆಂಗಳೂರು ಮಾರ್ಗವಾಗಿ ವಿಮಾನ ಸಂಚಾರ ಆರಂಭಿಸಬೇಕು ಎಂದು ಕೋರಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರುಕೇಂದ್ರ ನಾಗರಿಕ ವಿಮಾನ ಯಾನ ಖಾತೆ ಸಚಿವ ಹರದೀಪ್‌ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.

ಕಲಬುರ್ಗಿಯ ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ಸದಾನಂದ ಪೆರ್ಲ ಅವರು ಸಲ್ಲಿಸಿದ ಮನವಿಗೆ ಸ್ಪಂದಿಸಿದ ನಳಿನ್‍ಕುಮಾರ್ ಅವರು, ಈ ಪತ್ರ ಬರೆದಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಿಂದ ಅಪಾರ ಸಂಖ್ಯೆಯ ಜನರು ಕರಾವಳಿ ಜಿಲ್ಲೆಗಳಿಗೆ ಶಿಕ್ಷಣ, ಉದ್ಯಮ, ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕಾರ್ಯಗಳಿಗೆ ಭೇಟಿ ನೀಡುತ್ತಾರೆ. ಈ ಮಾರ್ಗವು ಬಲು ದೂರವಾದ್ದರಿಂದ ಬಸ್‌ ಸಂಚಾರ ಸಂಕಷ್ಟವಾಗಿದೆ. ಅಲ್ಲದೇ,ಮಳೆಗಾಲದಲ್ಲಿ ಭೂಕುಸಿತ ಮತ್ತು ರಸ್ತೆಗಳ ದುಸ್ಥಿತಿಯೂ ಪ್ರವಾಸಕ್ಕೆ ಅಡ್ಡಿಯಾಗುತ್ತಿದೆ. ಸುಗಮ ಸಂಚಾರಕ್ಕಾಗಿ ಕಲಬುರ್ಗಿಯಿಂದ ಬೆಂಗಳೂರು ಅಲ್ಲಿಂದ ಮಂಗಳೂರಿಗೆ ವಿಮಾನ ಸಂಚಾರ ಆರಂಭಿಸಬೇಕು ಎಂದೂ ಮಂಗಳೂರು ಸಂಸದರೂ ಆದ ಕಟೀಲ್ ಅವರು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಕಲಬುರ್ಗಿಯಿಂದ ಮಂಗಳೂರಿಗೆ ಈಗಾಗಲೇ 10 ಬಸ್‌ಗಳು ದಿನವೂ ಸಂಚರಿಸುತ್ತವೆ. ಪ್ರಯಾಣಿಕರ ದಟ್ಟಣೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಬಸ್‌ನಲ್ಲಿ ಕನಿಷ್ಠ 14 ತಾಸು ನಿರಂತರ ಪ್ರಯಾಣ ಮಾಡಬೇಕಾಗುತ್ತದೆ. ವಿಮಾನ ಆರಂಭಗೊಂಡಲ್ಲಿ ಕೇವಲ ಎರಡೂವರೆ ಗಂಟೆಯಲ್ಲಿ ಮಂಗಳೂರು ತಲುಪಬಹುದು. ಇದರಿಂದ ಸಮಯ ಹಾಗೂ ಶ್ರಮದ ಉಳಿತಾಯವಾಗುತ್ತದೆ. ಆದ್ದರಿಂದ ಈ ಮನವಿಯಲ್ಲಿ ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದೂ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.