ಕಲಬುರಗಿ: ಆರು ತಿಂಗಳ ವೇತನ ತುರ್ತಾಗಿ ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ವಿವಿಧ ಹಂತದ ನೌಕರರು ಶುಕ್ರವಾರ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
‘ನರೇಗಾ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು, ಸರ್ಕಾರದ ಹಂತದಲ್ಲಿ ಸ್ಥಗಿತಗೊಂಡಿರುವ ನರೇಗಾ ನೌಕರರ ಸೊಸೈಟಿ ರಚನೆ ಮಾಡಬೇಕು. ವೇತನವನ್ನು ತುರ್ತಾಗಿ ಪಾವತಿಸಬೇಕು’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘2024ರ ಡಿಸೆಂಬರ್ ತಿಂಗಳಿಂದ ಈತನಕ ನರೇಗಾ ನೌಕರರಿಗೆ ವೇತನ ಪಾವತಿಸಿಲ್ಲ. ಇದರಿಂದ ಕೆಳ ಹಂತದಲ್ಲಿ ಕೆಲಸ ಮಾಡುವ ನಮಗೆ ಜೀವನ ನಿರ್ವಹಣೆ ಕಷ್ಟವಾಗಿದೆ. ಸಾಲ ಜೀವನ ಸಾಗಿಸುವಂತಾಗಿದೆ. ನಮ್ಮ ವೇತನವನ್ನು ಕೂಡಲೇ ಪಾವತಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿಶಂಕರ ಲಾವಟೆ ಮಾತನಾಡಿ, ‘ನಾವೆಲ್ಲ 10, 12 ವರ್ಷಗಳಿಂದ ನರೇಗಾ ಯೋಜನೆ ಅನುಷ್ಠಾನಕ್ಕೆ ದುಡಿಯುತ್ತಿದ್ದೇವೆ. ಜಿಲ್ಲಾ ಹಂತ, ತಾಲ್ಲೂಕು ಹಂತದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದೇವೆ. ಕಳೆದ ಐದಾರು ತಿಂಗಳಿನಿಂದ ನಮಗೆ ಸಂಬಳ ಕೊಟ್ಟಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಸವಾಲಾಗಿದೆ. ನಮ್ಮ ವೇತನ ಕೂಡಲೇ ಪಾವತಿಗೆ ಸರ್ಕಾರ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.
ಬಳಿಕ ಈ ಸಂಬಂಧ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಬರೆದ ಮನವಿಯನ್ನು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಗದೇವಪ್ಪ ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ರೋಷನ್ ಬಿ.ಕೆ., ಸಂಘದ ರಾಜ್ಯ ಪ್ರತಿನಿಧಿ ರಾಜು ವಂಟಿ, ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಹರೀಶ ಎಸ್., ರಾಹುಲ್ ಕೆ., ಸತೀಶ, ಮಲ್ಲಿಕಾರ್ಜುನ, ಮಲ್ಲು, ರವಿಕುಮಾರ, ಶ್ರೀಶಧರ, ಜಗದೀಶ ಎಂ., ಯೋಗೇಶ ಚೌಧರಿ ಸೇರಿದಂತೆ 100ಕ್ಕೂ ಅಧಿಕ ನೌಕರರು ಪಾಲ್ಗೊಂಡಿದ್ದರು.
‘₹3.70 ಕೋಟಿ ಬಾಕಿ ವೇತನ ಬಾಕಿ’
‘ಕಲಬುರಗಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ 151 ಗ್ರಾಮ ಕಾಯಕ ಮಿತ್ರರಾಗಿ 116 ತಾಂಡಾ ರೋಜಗಾರ ಮಿತ್ರರಾಗಿ 16 ಬಿಎಫ್‌ಟಿಗಳಾಗಿ 67 ಸೇರಿದಂತೆ ಒಟ್ಟು 215 ನೌಕರರು ದುಡಿಯುತ್ತಿದ್ದಾರೆ. ಈ ನೌಕರರ ವೇತನ ₹9900ರಿಂದ ಆರಂಭವಾಗಿ ₹48 ಸಾವಿರದವರೆಗೆ ಇದೆ. ಇವರಿಗೆ 2024ರ ಡಿಸೆಂಬರ್‌ನಿಂದ ಈತನಕ ಸಂಬಳ ಬಂದಿಲ್ಲ. 2024ರ ಡಿಸೆಂಬರ್‌ನಿಂದ 2025ರ ಏಪ್ರಿಲ್ ತನಕ ₹3.70 ಕೋಟಿ ವೇತನ ಪಾವತಿಗೆ ಬಾಕಿ ಉಳಿದಿದೆ. ಮೇ ತಿಂಗಳದ್ದೂ ಸೇರಿದರೆ ₹ 4.44 ಕೋಟಿಯಷ್ಟಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.