ಕಲಬುರಗಿ: ‘ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಜೀವನದಲ್ಲಿ ಮುಂದೆ ಸಾಗಬೇಕು. ಎತ್ತರಕ್ಕೆ ಬೆಳೆಯಬೇಕು. ಹೆತ್ತ ತಂದೆ–ತಾಯಿ ನನ್ನ ಮಗ, ಮಗಳು ಎಂದು ಸಮಾಜಕ್ಕೆ ಪರಿಚಯ ಮಾಡಿಕೊಡುವ ರೀತಿಯಲ್ಲಿ ಸಾಧನೆ ಮಾಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಪ್ರಯುಕ್ತ ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ‘ಮೋದಿ@75 ಉದ್ಯೋಗ ಮಹೋತ್ಸವ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸತತ ಮೂರನೇ ಬಾರಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಸ್ವತಃ ಜನಸೇವಕ ಎಂದು ಹೇಳಿದ್ದಾರೆ. ಅದರಂತೆ ದಿನದ 17–18 ಗಂಟೆ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನು ಒಳಗೊಂಡಂತೆ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಕೊಡುವ ಸದುದ್ದೇಶದಿಂದ ದೇಶವನ್ನು ಮುನ್ನಡೆಸುತ್ತಿದ್ದಾರೆ’ ಎಂದರು.
‘ಮೋದಿ ಅವರ ಜನ್ಮದಿನ ನಿಮಿತ್ತ ಬಿಜೆಪಿ ವತಿಯಿಂದ ಸೇವಾ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಚಂದು ಪಾಟೀಲ ಮತ್ತು ಕೈಲಾಸ ಪಾಟೀಲ ಅವರು ಯುವ ಜನತೆಗೆ ಕೆಲಸ ಕೊಡಿಸುವ ಉದ್ದೇಶದಿಂದ ಉದ್ಯೋಗ ಮಹೋತ್ಸವ ಆಯೋಜಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಚೌದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಮಾತನಾಡಿ, ‘ಮನುಷ್ಯ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ದೇವರಲ್ಲಿ ಭಕ್ತಿ, ಕಾಯಕದಲ್ಲಿ ಶ್ರದ್ಧೆ, ನಿಷ್ಠೆ ಇರಬೇಕು. ಅದರಂತೆ ಮೋದಿ ಅವರು ಭ್ರಷ್ಟಾಚಾರ ರಹಿತ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
ಬಿಜೆಪಿ ನಗರ ಅಧ್ಯಕ್ಷ ಚಂದು ಬಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯರಾದ ಬಿ.ಜಿ.ಪಾಟೀಲ, ಶಶೀಲ್ ಜಿ.ನಮೋಶಿ, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ ಗುತ್ತೇದಾರ, ಮಾಜಿ ಸಚಿವ ಬಾಬುರಾವ ಚವ್ಹಾಣ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ, ಎಚ್‌ಕೆಇ ಸೊಸೈಟಿ ಜಂಟಿ ಕಾರ್ಯದರ್ಶಿ ಕೈಲಾಸ ಬಿ.ಪಾಟೀಲ, ಬಿಜೆಪಿ ಗ್ರಾಮೀಣ ಅಧ್ಯಕ್ಷ ಅಶೋಕ ಬಗಲಿ, ಮುಖಂಡರಾದ ನಿತೀನ್ ಗುತ್ತೇದಾರ, ಶಿವರಾಜ ಪಾಟೀಲ ರದ್ದೇವಾಡಗಿ, ಅರುಣಕುಮಾರ ಪಾಟೀಲ ಕೋಡಲಹಂಗರಗಾ ಇದ್ದರು.
ಅಭ್ಯರ್ಥಿಗಳ ಸಂದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಉದ್ಯೋಗ ಮಹೋತ್ಸವವನ್ನು ಅಚ್ಚುಕಟ್ಟಾಗಿ ಸಂಘಟಿಸಲಾಗಿತ್ತು. 3 ಸಾವಿರಕ್ಕೂ ಅಧಿಕ ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡಿದ್ದರು. ಹೆಸರು ನೋಂದಣಿಗಾಗಿ ಕಲ್ಯಾಣಮಂಟಪದ ಆವರಣದಲ್ಲಿ ಹಲವು ಕೌಂಟರ್‌ಗಳನ್ನು ತೆರೆಯಲಾಗಿತ್ತು. ನಂತರ ಅವರ ವಿದ್ಯಾಹರ್ತೆಗೆ ಅನುಗುಣವಾಗಿ ಕಲ್ಯಾಣ ಮಂಟಪದಲ್ಲಿ ಸ್ಥಾಪಿಸಿದ್ದ ವಿವಿಧ ಕಂಪನಿಗಳ ಮಳಿಗೆಗಳತ್ತ ಕಳುಹಿಸಲಾಯಿತು. ಹೆಚ್ಚಿನ ಜನ ಬಂದಿದ್ದರಿಂದ ಅಭ್ಯರ್ಥಿಗಳು ಅವಸರ ಮಾಡಿದರು. ಈ ವೇಳೆ ಚಂದು ಪಾಟೀಲ ಅವರು ಮೈಕ್ ಮೂಲಕ ‘ಹೆಸರು ನೋಂದಾಯಿಸಿದ ಪ್ರತಿಯೊಬ್ಬರಿಗೂ ಸಂದರ್ಶನ ನಡೆಸಲಾಗುವುದು. ಊಟ ನೀರಿನ ವ್ಯವಸ್ಥೆ ಕೂಡ ಮಾಡಲಾಗಿದೆ. ಯಾರೂ ಅವಸರ ಮಾಡಬಾರದು’ ಎಂದು ಕೋರಿದರು. ವಿವಿಧ ಕಂಪನಿಗಳ ಪ್ರತಿನಿಧಿಗಳು ಒಟ್ಟು 32 ಮಳಿಗೆಗಳಲ್ಲಿ ಅಭ್ಯರ್ಥಿಗಳ ಸಂದರ್ಶನ ನಡೆಸಿದರು. 490 ಜನರಿಗೆ ಉದ್ಯೋಗ: ಇಡೀ ದಿನ ನಡೆದ ಸಂದರ್ಶನದಲ್ಲಿ 2 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ವಿವಿಧ ಕಂಪನಿಗಳು 52 ಅಂಗವಿಕಲ ಅಭ್ಯರ್ಥಿಗಳು ಸೇರಿ 490 ಜನರಿಗೆ ಉದ್ಯೋಗ ನೀಡಿರುವುದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.