ADVERTISEMENT

ಕಲಬುರ್ಗಿ | ‘ಪರಿಹಾರ ಪಡೆಯಲು ಗ್ರಾಹಕರ ಹಿತರಕ್ಷಣಾ ಕಾಯ್ದೆ ಉಪಕಾರಿ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 16:14 IST
Last Updated 24 ಡಿಸೆಂಬರ್ 2019, 16:14 IST
‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ಗೆ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್ ನ್ಯಾಯಾಲಯದ ನ್ಯಾಯಾಧೀಶ ಅರವಿಂದ ಎನ್.ವಿ. ಚಾಲನೆ ನೀಡಿದರು. ವೈಜನಾಥ ಝಳಕಿ ಹಾಗೂ ಇತರರು ಇದ್ದರು
‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ಗೆ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್ ನ್ಯಾಯಾಲಯದ ನ್ಯಾಯಾಧೀಶ ಅರವಿಂದ ಎನ್.ವಿ. ಚಾಲನೆ ನೀಡಿದರು. ವೈಜನಾಥ ಝಳಕಿ ಹಾಗೂ ಇತರರು ಇದ್ದರು   

ಕಲಬುರ್ಗಿ: ಗ್ರಾಹಕರಿಗೆ ಸಮರ್ಪಕ ಸೇವೆ ದೊರೆಯದಿದ್ದಾಗ ಸೂಕ್ತ ಪರಿಹಾರ ಪಡೆಯಲು ಗ್ರಾಹಕರ ಹಿತರಕ್ಷಣಾ ಕಾಯ್ದೆ ತುಂಬಾ ಉಪಯುಕ್ತವಾಗಿದ್ದು, ವಿದ್ಯಾರ್ಥಿಗಳು ಈ ಕಾಯ್ದೆಯ ಮಹತ್ವ ಹಾಗೂ ಅದರ ಉಪಯೋಗವನ್ನು ತಿಳಿಯುವುದಲ್ಲದೇ ನೊಂದ ಗ್ರಾಹಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕು ಎಂದು ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್ ನ್ಯಾಯಾಲಯದ ನ್ಯಾಯಾಧೀಶ ಅರವಿಂದ ಎನ್.ವಿ. ಕರೆ ನೀಡಿದರು.

ಮಂಗಳವಾರ ನಗರದ ಸರ್ಕಾರಿ ಪದವಿಪೂರ್ವ ಬಾಲಕೀಯರ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸರ್ಕಾರಿ ಪದವಿ ಪೂರ್ವ ಬಾಲಕೀಯರ ಕಾಲೇಜು ಹಾಗೂ ಮಹಾತ್ಮ ಗಾಂಧೀಜಿ ಗ್ರಾಹಕರ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ನಡೆದ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು.

ಮಹಾತ್ಮ ಗಾಂಧೀಜಿ ಗ್ರಾಹಕರ ಹಿತರಕ್ಷಣಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ, ವಕೀಲ ವೈಜನಾಥ ಎಸ್. ಝಳಕಿ ಮಾತನಾಡಿ, ‘ಗ್ರಾಹಕರ ಹಿತರಕ್ಷಣಾ ಕಾಯ್ದೆ–2019 ನೊಂದ ಗ್ರಾಹಕರಿಗೆ ಆಪ್ತರಕ್ಷಕನಂತೆ ಕಾರ್ಯನಿರ್ವಹಿಸುತ್ತದೆ. ತಿದ್ದುಪಡಿ ಕಾಯ್ದೆಯ ಪ್ರಕಾರ ಒಂದು ಕೋಟಿ ರೂಪಾಯಿವರೆಗಿನ ಪರಿಹಾರದ ಪ್ರಕರಣಗಳನ್ನು ಜಿಲ್ಲಾ ಮಟ್ಟದಲ್ಲಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಬಹುದಾಗಿದೆ. ಹಿಂದೆ ಜಿಲ್ಲಾ ಮಟ್ಟದಲ್ಲಿ ₹ 20 ಲಕ್ಷದವರೆಗೆ ಮಾತ್ರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿತ್ತು’ ಎಂದರು.

ADVERTISEMENT

ಗ್ರಾಹಕರು ₹ 5 ಲಕ್ಷವರೆಗಿನ ಪರಿಹಾರ ಕೋರಿಕೆ ಅರ್ಜಿಗಳಿಗೆ ಯಾವುದೇ ಶುಲ್ಕ ಪಾವತಿಸುವ ಅವಶ್ಯಕತೆ ಇಲ್ಲ. ಗ್ರಾಹಕರ ಹಿತರಕ್ಷಣಾ ಕಾಯ್ದೆ ಗ್ರಾಹಕ ಸ್ನೇಹಿ ಕಾಯ್ದೆಯಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ಹೊಸದಾಗಿ ತಿದ್ದುಪಡಿಗೊಂಡ ಮೋಟಾರು ವಾಹನ ಕಾಯ್ದೆ–2019ರ ಬಗ್ಗೆಯೂ ಝಳಕಿ ತಿಳಿಹೇಳಿದರು.

ಸರ್ಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುಭಾಷಚಂದ್ರ ಗಾಯಕವಾಡ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದ್ದರು.

ಉಪನ್ಯಾಸಕ ಶಂಕರರೆಡ್ಡಿ ನಿರೂಪಿಸಿದರು. ಉಪನ್ಯಾಸಕ ಎಚ್.ಎಸ್. ಬಿರಾದಾರ ವಂದಿಸಿದರು. ವಿದ್ಯಾರ್ಥಿನಿ ಮಾಧವಿ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.