ಕಲಬುರಗಿಯ ರಾಜಾಪುರದ ಜಮೀನಿನ ತೊಗರಿ ಬೆಳೆಗಳ ನಡುವೆ ಉಳಮೆಯಲ್ಲಿ ತೊಡಗಿದ ರೈತ
–ಪ್ರಜಾವಾಣಿ ಚಿತ್ರ
ಕಲಬುರಗಿ: ‘ಕೃಷಿ ಉತ್ತಮ, ವ್ಯಾಪಾರ ಮಧ್ಯಮ, ನೌಕರಿ ಕನಿಷ್ಠ...’ ಎಂಬ ಮಾತೊಂದಿದೆ. ಇದು ಅಕ್ಷರಶಃ ಕೃಷಿಯ ಮಹತ್ವಕ್ಕೆ ಕೈಗನ್ನಡಿ ಹಿಡಿಯುತ್ತದೆ.
ಭಾರತ ಕೃಷಿ ಪ್ರಧಾನ ದೇಶ. ಇಲ್ಲಿ ಕೋಟ್ಯಂತರ ಜನರಿಗೆ ಕೃಷಿಯೇ ಮೂಲಕಸುಬು. ಹೀಗಾಗಿಯೇ ರೈತರನ್ನು ದೇಶದ ಬೆನ್ನೆಲಬು ಎಂದು ಕರೆಯಲಾಗುತ್ತದೆ.
ಕೃಷಿ ಇತರ ವೃತ್ತಿಗಳಿಗಿಂತಲೂ ಭಿನ್ನ. ಸಾಕಷ್ಟು ದೈಹಿಕ ದುಡಿಮೆ, ಅಪಾರ ತಾಳ್ಮೆ, ಭೂಮಾತೆ ಮೇಲೆ ಅಚಲ ವಿಶ್ವಾಸ ಬೇಡುವ ಕ್ಷೇತ್ರ. ಕೃಷಿಕರದ್ದು ಇತರ ವೃತ್ತಿಗಳಂತೆ ಅಲ್ಲ; ನಿವೃತ್ತಿ ಇಲ್ಲದ ಕಾಯಕ.
ಕೃಷಿಯು ದೇಶದ ಜನಸಂಖ್ಯೆಯ ಅರ್ಧದಷ್ಟು ಜನರ ಕೈಗಳಿಗೆ ದುಡಿಮೆ ನೀಡಿರುವ ಕ್ಷೇತ್ರ. ದೇಶದ ಅಭಿವೃದ್ಧಿಯ ಪ್ರಮುಖ ಚಾಲಕಶಕ್ತಿ. ಈ ಕ್ಷೇತ್ರದಲ್ಲಿ ದುಡಿಯುವ ರೈತರು ಬರೀ ಕೃಷಿಕರಲ್ಲ; ಅನ್ನ ಉತ್ಪಾದಕರು. ಅನ್ನದಾತರು ದೇಶದ ಜನರ ಹಸಿವು ನೀಗುವ ‘ತಾಯಿ’.
ಬದಲಾದ ಸ್ವರೂಪ....
ಆರಂಭದಲ್ಲಿ ಕೃಷಿಯು ಸ್ವಯಂ ಬದುಕಿನ ಆಧಾರವಾಗಿತ್ತು. ರೈತರು ತಮ್ಮ ಬದುಕಿಗೆ ಬೇಕಾದದ್ದನ್ನು ಬೆಳೆಯುತ್ತಿದ್ದರು. ಅಗತ್ಯವಿರುವ ವಸ್ತುಗಳ ಖರೀದಿ ವಹಿವಾಟಿಗೂ ಆಹಾರ ಧಾನ್ಯಗಳನ್ನೇ ಬಳಸುತ್ತಿದ್ದರು. ಆದರೆ, ಜನಸಂಖ್ಯೆ ಹೆಚ್ಚಿದಂತೆಲ್ಲ ಆಹಾರ ಅಭದ್ರತೆ ಕಾಡತೊಡಗಿತು. ಇಳುವರಿ ಹೆಚ್ಚಿಸುವುದು, ಅದಕ್ಕಾಗಿ ರಾಸಾಯನಿಕಗಳ ಬಳಕೆ, ಹೈಬ್ರಿಡ್ ತಳಿಗಳ ಉಪಯೋಗ ಹೆಚ್ಚುತ್ತಲೇ ಹೋಯಿತು.
ತಾಂತ್ರಿಕತೆ ಅಳವಡಿಸಿಕೊಂಡ ರೈತರು, ಹೆಚ್ಚಿನ ಉತ್ಪಾದನೆಗೆ ಒತ್ತು ನೀಡಿದರು. ಅದರ ಮುಂದುವರಿದ ಭಾಗವಾಗಿ ಇದೀಗ ಸ್ಮಾರ್ಟ್ ಕೃಷಿ ಪ್ರಚಲಿತಕ್ಕೆ ಬರುತ್ತಿದೆ. ಜೊತೆಗೆ ಕೃಷಿಯು ಮಾರುಕಟ್ಟೆ ಆಧಾರಿತ ಉದ್ಯಮವಾಗಿ ಬೆಳೆಯುತ್ತಿದೆ. ಅದಾಗ್ಯೂ, ದೇಶಕ್ಕೆ ಅನ್ನ ನೀಡುವ ರೈತನ ಮೊಗದಲ್ಲಿನ ಆತಂಕದ ಕಾರ್ಮೋಡ ಮಾತ್ರ ಕರಗಿಲ್ಲ.
ಇಳುವರಿ ಹೆಚ್ಚಳದ ಮಾಯಾಮೃಗ ಮಣ್ಣಿನ ಸತ್ವ ಕಳೆದಿದೆ. ಹವಾಮಾನ ವೈಪರೀತ್ಯ ರೈತರ ಆತಂಕ ಹೆಚ್ಚಿಸಿದೆ. ಒಂದೆಡೆ ಕೃಷಿ ಪರಿಕರ, ಬಿತ್ತನೆ ಬೀಜ, ರಸಗೊಬ್ಬರಗಳ ದರಗಳು ಏರುತ್ತಲೇ ಸಾಗಿವೆ. ಮತ್ತೊಂದೆಡೆ ಕೃಷಿ ಉತ್ಪನ್ನಗಳನ್ನು ‘ಮಾರುಕಟ್ಟೆ’ ಎಂಬ ತಕ್ಕಡಿ ಕವಡೆ ಕಾಸಿನ ಕಿಮ್ಮತ್ತಿಗೆ ತೂಗುತ್ತಿದೆ. ಇದು ರೈತರನ್ನು ಹೈರಾಣಾಗಿಸಿದೆ. ಈ ಸಂದಿಗ್ಧವನ್ನು ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್. ಕೆನಡಿ ಬಹು ಮಾರ್ಮಿಕವಾಗಿ ಬಣ್ಣಿಸಿದ್ದರು. ‘ಎಲ್ಲವನ್ನೂ ಚಿಲ್ಲರೆ ಮಾರುಕಟ್ಟೆ ದರದಲ್ಲಿ ಕೊಳ್ಳುವ, ಎಲ್ಲವನ್ನೂ ಸಗಟು ದರದಲ್ಲಿ ಮಾರುವ ಹಾಗೂ ಇವೆರಡಕ್ಕೂ ಎರಡೂ ವಹಿವಾಟಿಗೂ ತೆರಿಗೆ ಪಾವತಿಸುವ ನಮ್ಮ ಆರ್ಥಿಕತೆಯಲ್ಲಿ ಏಕೈಕ ವ್ಯಕ್ತಿ ಅನ್ನದಾತ’ ಎಂದು ಹೇಳಿದ್ದರು. ಈ ನಡುವೆ ಕೃಷಿಗಾಗಿ ಮಾಡಿದ ಸಾಲದ ಚಿಂತೆ ಬಿಸಿರಕ್ತದ ಯುವ ರೈತರನ್ನೂ ಚಿತೆಗೆ ದೂಡುತ್ತಿದೆ.
ಅಂಜದ, ಅಳುಕದ ಧೀರ...
ಬದಲಾಗುತ್ತಿರುವ ಹವಾಮಾನ, ತಾಂತ್ರಿಕತೆ, ಬೆಳೆಗಳು, ತಳಿಗಳು, ಅತಿವೃಷ್ಟಿ, ಅನಾವೃಷ್ಟಿ, ಜಾಗತೀಕರಣದಂತಹ ಸರಣಿ ಸವಾಲುಗಳ ನಡುವೆಯೂ ನೇಗಿಲ ಯೋಗಿ ಕಾಯಕ ಮರೆತಿಲ್ಲ. ಸಮಸ್ಯೆಗಳಿಗೆ ಹೆದರಿ ಉಳಿಮೆ ಬಿಟ್ಟಿಲ್ಲ. ಬಿಸಿಲಿಗೆ ಬಳಲಿದಂತೆ ಕಂಡರೂ ಮಳೆ ಸುರಿವ ಭರವಸೆಯೊಂದಿಗೆ ಕಡು ಬಿಸಿಲಿನಲ್ಲೇ ಉಳುಮೆ ಮಾಡಿ ನೆಲ ಹದಗೊಳಿಸುತ್ತಾನೆ. ಕಾದ ನೆಲಕ್ಕೆ ಮಳೆ ಹನಿಗಳ ಸ್ಪರ್ಶವಾದೊಡನೆ ಬೀಜ ಊರುತ್ತಾನೆ, ಬರಡು–ಬರಡಾಗಿ ಕಾಣಿಸುವ ನೆಲದ ತುಂಬೆಲ್ಲ ಹಸಿರು ನಳನಳಿಸುವಂತೆ ಮಾಡುತ್ತಾನೆ.
ಧಾರಾಕಾರ ಮಳೆಯಲ್ಲಿ ನೆನೆಯುತ್ತಲೇ ಬೆಳೆಗಳ ಆರೈಕೆ ಮಾಡುತ್ತಾನೆ. ಥರಗುಟ್ಟುವ ಚಳಿಗೆ ನಡುಗಿದಂತೆ ಕಂಡರೂ ರೈತ, ಭೂಮಿ ಬಿಟ್ಟು ಮನೆ ಸೇರಲ್ಲ. ಬೆವರು ಸುರಿಸುತ್ತಲೇ ಬೆಳೆಗಳ ಬೆಳೆದು ಕೋಟ್ಯಂತರ ಜನರ ತಟ್ಟೆಗಳಿಗೆ ಅರೆಕಾಸಿನ ಮೌಲ್ಯಕ್ಕೆ ನಿತ್ಯ ಅನ್ನ ಇಡುತ್ತಲೇ ಇದ್ದಾನೆ, ಇರುತ್ತಾನೆ! ಅಂಥ ಅನ್ನದಾತ ಮುಗಿದ ಕೈಗಳ ನಿತ್ಯ ನಮನಕ್ಕೆ ಅರ್ಹ. ರಾಷ್ಟ್ರೀಯ ರೈತ ದಿನದ ನೆಪದಲ್ಲಿ ಅನ್ನದಾತನಿಗೊಂದು ಸಲಾಂ.
ರಾಷ್ಟ್ರೀಯ ರೈತ ದಿನದ ಹಿನ್ನೆಲೆ...
‘ರೈತರ ಚಾಂಪಿಯನ್’ ಖ್ಯಾತಿಯ ನಾಯಕ ದೇಶದ ಮಾಜಿ ಪ್ರಧಾನಿ ಚೌಧರಿ ಚರಣಸಿಂಗ್ ಅವರ ಜನ್ಮದಿನವಾದ ಡಿ.23ರಂದು ರಾಷ್ಟ್ರೀಯ ರೈತರ ದಿನ ಆಚರಿಸಲಾಗುತ್ತದೆ. 2001ರಿಂದ ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಿಂದ ಇದನ್ನು ಆಚರಿಸಲಾಗುತ್ತಿದೆ. ಸಮಾಜಕ್ಕೆ ರೈತರು ನೀಡಿದ ಅನನ್ಯ ಕೊಡುಗೆ ಸ್ಮರಿಸಲು ಹಾಗೂ ಅನ್ನದಾತರನ್ನು ಗೌರವಿಸುವುದು ಈ ದಿನಾಚರಣೆಯ ಉದ್ದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.