ADVERTISEMENT

ಚೆಕ್‌ಡ್ಯಾಂ ಗೇಟ್ ತೆರೆಯಲು ನಿರ್ಲಕ್ಷ್ಯ: ನೀರು ನುಗ್ಗಿ ಬೆಳೆ ಹಾನಿ

ಸಣ್ಣ ನೀರಾವರಿ ಇಲಾಖೆ ವಿರುದ್ಧ ಹಣ್ಣಿಕೇರ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:07 IST
Last Updated 12 ಜೂನ್ 2025, 16:07 IST
ವಾಡಿ ಸಮೀಪದ ಹಣ್ಣಿಕೇರಾ ಗ್ರಾಮದ ಜಮೀನುಗಳಿಗೆ ಅಪಾರ ಪ್ರಮಾಣದ ಮಳೆ ನೀರು ನುಗ್ಗಿರುವುದು.
ವಾಡಿ ಸಮೀಪದ ಹಣ್ಣಿಕೇರಾ ಗ್ರಾಮದ ಜಮೀನುಗಳಿಗೆ ಅಪಾರ ಪ್ರಮಾಣದ ಮಳೆ ನೀರು ನುಗ್ಗಿರುವುದು.   

ವಾಡಿ: ಚಿತ್ತಾಪುರ ತಾಲ್ಲೂಕಿನ ಹಣ್ಣಿಕೇರಾ ಗ್ರಾಮದ ಹೊರವಲಯದಲ್ಲಿ ನಿರ್ಮಿಸಿದ್ದ ಚೆಕ್‌ಡ್ಯಾಂ ಗೇಟ್ ತೆರೆಯದೇ ನಿರ್ಲಕ್ಷ್ಯ ವಹಿಸಿದ್ದರಿಂದ ನೂರಾರು ಎಕರೆ ಜಮೀನುಗಳಿಗೆ ಮಳೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.

ಗುರುವಾರ ಮಧ್ಯಾಹ್ನ ಧಾರಾಕಾರವಾಗಿ ಮಳೆ ಸುರಿದಿದ್ದು, ಚೆಕ್‌ಡ್ಯಾಂ ತುಂಬಿ ಪಕ್ಕದ ಸುಮಾರು 20ಕ್ಕೂ ಅಧಿಕ ರೈತರ ನೂರಾರು ಎಕರೆ ಜಮೀನಿಗೆ ಮಳೆನೀರು ನುಗ್ಗಿದೆ. ಕೆಲವೆಡೆ ಮೊಳಕಾಲುವರೆಗೆ ನೀರು ನಿಂತ ಪರಿಣಾಮ ಕಳೆದ ವಾರ ಬಿತ್ತನೆ ಮಾಡಿದ್ದ ವಾಣಿಜ್ಯ ಬೆಳೆ ಹತ್ತಿ ನೀರು ಪಾಲಾಗಿ ರೈತರ ಕಣ್ಣೀರಿಗೆ ಕಾರಣವಾಯಿತು. ದುಬಾರಿ ಹಣ ನೀಡಿ ದೂರದೂರಿನಿಂದ ಹತ್ತಿ ಬೀಜ ಖರೀದಿಸಿ, ಬಿತ್ತಿದ್ದ ಹತ್ತಿ ಬೀಜ ಹಾಗೂ ಶ್ರಮ ಎಲ್ಲವೂ ನೀರು ಪಾಲಾಗಿದೆ ಎಂದು ರೈತರು ಗೋಳಾಡಿದರು.

ಅಧಿಕಾರಿಗಳ ನಿರ್ಲಕ್ಷ್ಯ: ಮಳೆ ನೀರು ಸಂಗ್ರಹಕ್ಕೆ ನಿರ್ಮಿಸಿದ್ದ ದೊಡ್ಡ ಚೆಕ್‌ಡ್ಯಾಂ ಮೊನ್ನೆ ಸುರಿದ ಮಳೆಯಿಂದ ತುಂಬಿತ್ತು. ಸದ್ಯ ಇರುವ 40 ಗೇಟ್‌ಗಳನ್ನು ತೆರೆದು ನೀರು ಹೊರಬಿಡುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ರೈತರು ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಗೇಟ್ ತೆರೆಯದೆ ನಿರ್ಲಕ್ಷ್ಯ ವಹಿಸಿದ್ದಾರೆ. ಭಾರೀ ಮಳೆಯ ಮುನ್ಸೂಚನೆ ಇದ್ದರೂ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳು, ರೈತರ ಜೀವನದ ಜತೆ ಚೆಲ್ಲಾಟವಾಡಿದ್ದಾರೆ ಎಂದು ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ದುಬಾರಿ ಹಣ ಕೊಟ್ಟು 5 ಎಕರೆಯಲ್ಲಿ 12 ಪಾಕೆಟ್ ಹತ್ತಿ ಹಾಕಿದ್ದೆ. ಆದರೆ ಗುರುವಾರ ಮಳೆ ಸುರಿದಿದ್ದು ಬ್ಯಾರೇಜ್ ಗೇಟ್ ತೆಗೆಯದ ಕಾರಣ ಹೊಲಕ್ಕೆ ನೀರು ನುಗ್ಗಿ ಇಡೀ ಬೀಜ ನೀರು ಪಾಲಾಗಿವೆ. ಬೀಜ, ರಸಗೊಬ್ಬರ ಹಾಗೂ ಬಿತ್ತನೆಗಾಗಿ ಹಾಕಿದ ಹಣ ಎಲ್ಲವೂ ನೀರು ಪಾಲಾಗಿದೆ ಎಂದು ಹಣ್ಣಿಕೇರಾ ರೈತ ರಫೀಕ್ ಸಾಬ್ ಅವರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಸಣ್ಣ ನೀರಾವರಿ ಇಲಾಖೆ ಅಧಿಕಾರಿ ನಿರ್ಲಕ್ಷ್ಯದಿಂದ ಬಿತ್ತಿದ ಹೊಲಕ್ಕೆ ನೀರು ನುಗ್ಗಿದೆ. ಈಗ ನೀರು ಖಾಲಿಯಾದ ಬಳಿಕ ಪುನಃ ಬಿತ್ತನೆ ಮಾಡಬೇಕು. ಇದಕ್ಕೆ ಯಾರು ಹೊಣೆ? ಎಂದು ಹಣ್ಣಿಕೇರಾ ರೈತರಾದ ಸಾಬಣ್ಣ ಅಳ್ಳೊಳ್ಳಿ, ಅಬ್ದುಲ್ ಸಾಬ್ ಕೊಳ್ಳಿ, ಬಸವರಾಜ ಸಂಗನ, ಕೋರಿಸಿದ್ದ ಗಂಜಿ ಹಾಗೂ ಶಂಕರ ಚವ್ಹಾಣ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.