ADVERTISEMENT

ಚಿಂಚೋಳಿ | ಮಿಂಚಿ ಮರೆಯಾಗುವ ನೆಲಗಂಗಿ..

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 15:47 IST
Last Updated 21 ಜುಲೈ 2020, 15:47 IST
ಚಿಂಚೋಳಿ ತಾಲ್ಲೂಕು ನೆಲಗಂಗಿ ತಾಂಡಾ ಬಳಿಯ ನೆಲಗಂಗಿ ಜಲಪಾತ
ಚಿಂಚೋಳಿ ತಾಲ್ಲೂಕು ನೆಲಗಂಗಿ ತಾಂಡಾ ಬಳಿಯ ನೆಲಗಂಗಿ ಜಲಪಾತ   

ಚಿಂಚೋಳಿ: ಮಳೆಗಾಲದಲ್ಲಿ ಮಿಂಚಿ ಮರೆಯಾಗುವ ತಾಲ್ಲೂಕಿನ ನೆಲಗಂಗಿ ತಾಂಡಾ ಬಳಿಯ ‘ನೆಲಗಂಗಿ ಜಲಪಾತ’ವು ನಯನ ಮನೋಹರವಾಗಿದೆ.

ನೆಲಗಂಗಿ ತಾಂಡಾದಿಂದ ಕೇವಲ 200 ಮೀಟರ್ ಅಂತರದಲ್ಲಿರುವ ಶಿವರಾಮ ನಾಯಕ ತಾಂಡಾದ ಮಾರ್ಗದಲ್ಲಿ ಬರುವ ಈ ಪುಟ್ಟ ಜಲಪಾತಕ್ಕೆ ಸಲಗರ ಬಸಂತಪುರ ಹಾಗೂ ಬೆನಕೆಪಳ್ಳಿ ಕಡೆಯಿಂದ ಮಳೆನೀರು ತೊರೆಯಲ್ಲಿ ಹರಿದು ಬಂದು 20ರಿಂದ 25 ಅಡಿ ಎತ್ತರದಿಂದ ಧುಮ್ಮಿಕ್ಕುವ ಸೊಬಗು ಮನಮೋಹಕವಾಗಿದೆ.

ಸ್ಥಳೀಯರ ಪಾಲಿಗೆ ಪೂಜನೀಯ ತಾಣವೂ ಆಗಿರುವ ಈ ನೆಲಗಂಗಿ, ತಾಂಡಾವಾಸಿಗಳಿಗೆ ವಿಸ್ಮಯತಾಣವೂ ಆಗಿದೆ. ಬಿರು ಬೇಸಿಗೆಯಲ್ಲಿ ಸ್ಥಳೀಯರ ದಾಹ ನೀಗಿಸುವ ಜಲದಾತೆಯಾಗಿದ್ದಾಳೆ.

ADVERTISEMENT

ದೊಡ್ಡ ಕಲ್ಲು ಬಂಡೆಗಳ ಕೆಳಭಾಗದಿಂದ ಜಿನುಗುವ ಸಿಹಿ ನೀರು ಕುಡಿಯಲು ತುಂಬ ಹಿತಕಾರಿಯಾಗಿದೆ. ಹಬ್ಬ ಹರಿದಿನ ಹಾಗೂ ಶುಭ ಕಾರ್ಯಗಳಿಗೆ ಪೂಜೆಗೆ ಜನರು ಇಲ್ಲಿಂದಲೇ ನೀರು ಒಯ್ಯುತ್ತಾರೆ. ಬಿರು ಬೇಸಿಗೆಯಲ್ಲಿಯೂ ಇದು ಬತ್ತುವುದಿಲ್ಲ ಎನ್ನುತ್ತಾರೆ ತಾಂಡಾದ ಯುವ ಮುಖಂಡ ರವಿ ಮೋತಿರಾಮ ನಾಯಕ್.

ಹಸಿರು ಮೈದುಂಬಿಕೊಂಡ ಗಿಡಗಳ ಚಿಕ್ಕ ಕಾಡು ಹಾಗೂ ರೈತರ ಜಮೀನಿನ ಬೆಳೆಗಳು ಜಲಪಾತದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಹಿರಿಯರೊಂದಿಗೆ ಪುಟಾಣಿಗಳು ನೋಡಿ ಆನಂದಿಸಲು ಅತ್ಯಂತ ಸೂಕ್ತವಾಗಿದೆ.

ಈ ಜಲಪಾತದ ಕೆಳಭಾಗದಲ್ಲಿ 200 ಮೀಟರ್ ಅಂತರದಲ್ಲಿ ದೊಡ್ಡದಾದ ಕಂದರವಿದ್ದು ಪ್ರಕೃತಿ ಸೌಂದರ್ಯಕ್ಕೆ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.