ADVERTISEMENT

ಭಾರತದಲ್ಲಿ ಶೀಘ್ರ ವಿದೇಶಿ ವಿವಿ ಕ್ಯಾಂಪಸ್‌: ಪ್ರೊ. ವಿಷ್ಣುಕಾಂತ್ ಚಟ್ಪಲ್ಲಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:32 IST
Last Updated 21 ಡಿಸೆಂಬರ್ 2025, 6:32 IST
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ‘ಶಿಕ್ಷಣದಲ್ಲಿನ ಇತ್ತೀಚಿನ ಬೆಳವಣಿಗೆಗಳು: ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತ ಒಂದು ದಿನದ ಕಾರ್ಯಾಗಾರವನ್ನು ಪ್ರೊ. ವಿಷ್ಣುಕಾಂತ್ ಚಟ್ಪಲ್ಲಿ ಉದ್ಘಾಟಿಸಿದರು
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ಆಯೋಜಿಸಿದ್ದ ‘ಶಿಕ್ಷಣದಲ್ಲಿನ ಇತ್ತೀಚಿನ ಬೆಳವಣಿಗೆಗಳು: ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತ ಒಂದು ದಿನದ ಕಾರ್ಯಾಗಾರವನ್ನು ಪ್ರೊ. ವಿಷ್ಣುಕಾಂತ್ ಚಟ್ಪಲ್ಲಿ ಉದ್ಘಾಟಿಸಿದರು   

ಕಲಬುರಗಿ: ‘ಭಾರತದಲ್ಲಿ ನಡೆಯುತ್ತಿರುವ ಶಿಕ್ಷಣದ ಅಂತರರಾಷ್ಟ್ರೀಕರಣ ಮತ್ತು ಎನ್‍ಇಪಿ, ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್‍ಗಳನ್ನು ಸ್ಥಾಪಿಸಲು ಅವಕಾಶ ಮಾಡಿಕೊಟ್ಟಿದೆ’ ಎಂದು ಗದಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ವಿಷ್ಣುಕಾಂತ್ ಚಟ್ಪಲ್ಲಿ ಹೇಳಿದರು.

ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ಧಾರವಾಡದ ಬಹುಶಿಸ್ತಿನ ಅಭಿವೃದ್ಧಿ ಸಂಶೋಧನಾ ಕೇಂದ್ರ (ಸಿಎಂಡಿಆರ್‌)ದ ಸಹಯೋಗದಲ್ಲಿ ಆಯೋಜಿಸಿದ್ದ ‘ಶಿಕ್ಷಣದಲ್ಲಿನ ಇತ್ತೀಚಿನ ಬೆಳವಣಿಗೆಗಳು: ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತ ಒಂದು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶೀಘ್ರದಲ್ಲೇ ಸುಮಾರು 10 ವಿದೇಶಿ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಕ್ಯಾಂಪಸ್‍ಗಳನ್ನು ತೆರೆಯಲಿವೆ. ಈ ನೀತಿಯು ಭಾರತೀಯ ವಿಶ್ವವಿದ್ಯಾಲಯಗಳು ಜಾಗತಿಕ ಕ್ಯಾಂಪಸ್‍ಗಳನ್ನು ಪ್ರಾರಂಭಿಸಲು ಸಹ ಅನುವು ಮಾಡಿಕೊಟ್ಟಿದೆ’ ಎಂದರು.

ADVERTISEMENT

‘21ನೇ ಶತಮಾನದ ಶಿಕ್ಷಣ ವ್ಯವಸ್ಥೆಯ ಸವಾಲುಗಳನ್ನು ಎದುರಿಸಲು ನಿಯಂತ್ರಕ ವ್ಯವಸ್ಥೆಯನ್ನು ಪುನರ್‌ರಚಿಸುವ ಅವಶ್ಯಕತೆಯಿದೆ. ಅದರಂತೆ, ವಿಕಸಿತ ಭಾರತ ಶಿಕ್ಷಾ ಅಧಿಷ್ಠಾನ ಮಸೂದೆಯ ಮೂಲಕ ಉನ್ನತ ಶಿಕ್ಷಣದ ಮೂರು ಪ್ರಮುಖ ಸಂಸ್ಥೆಗಳನ್ನು ಒಂದೇ ನಿಯಂತ್ರಕ ಪ್ರಾಧಿಕಾರವಾಗಿ ವಿಲೀನಗೊಳಿಸಲಾಗುತ್ತಿದೆ’ ಎಂದು ಹೇಳಿದರು.

ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಮಾತನಾಡಿ, ‘2047ರ ವೇಳೆಗೆ, ಭಾರತವು ತನ್ನದೇ ಆದ ತಂತ್ರಜ್ಞಾನ, ಸ್ವಂತ ನೀತಿಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಕೈಗಾರಿಕೆಗಳೊಂದಿಗೆ ರಾಷ್ಟ್ರವನ್ನು ನಿರ್ಮಿಸುವ ಸಲುವಾಗಿ ಶಾಲಾ ಶಿಕ್ಷಣದಿಂದಲೇ ಕೌಶಲ ಹೊಂದಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕಾಗುತ್ತದೆ. ಉನ್ನತ ಶಿಕ್ಷಣದಲ್ಲಿ ದಾಖಲಾತಿಯನ್ನು ಪ್ರಸ್ತುತ ಶೇ 28ರಿಂದ ಶೇ 50ಕ್ಕೆ ಹೆಚ್ಚಿಸುವ ಅವಶ್ಯಕತೆಯಿದೆ’ ಎಂದರು.

ಸಿಯುಕೆ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಮಾತನಾಡಿದರು.

ನಂತರದ ಗೋಷ್ಠಿಯಲ್ಲಿ ಪ್ರೊ. ತಿಯಾಗು ಶಾಲಾ ಶಿಕ್ಷಣದ ಭವಿಷ್ಯ ಕುರಿತು ಮಾತನಾಡಿದರು. ಬೆಂಗಳೂರಿನ ಸಿಇಎಸ್ಎಸ್ ನಿರ್ದೇಶಕ ಪ್ರೊ.ಗೌರೀಶ ಅವರು ಕಲಿಯುವವರ ಪ್ರೊಫೈಲ್ ಹೇಗೆ ಬದಲಾಗುತ್ತಿದೆ ಮತ್ತು ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದರ ಕುರಿತು ವಿವರಿಸಿದರು.

ಕಾರ್ಯಾಗಾರದ ಉದ್ದೇಶದ ಬಗ್ಗೆ ಸಿಎಂಡಿಆರ್‌ನ ಪ್ರೊ. ಬ್ರಹ್ಮಾನಂದಂ ವಿವರಿಸಿದರು. ರಾಗಿಣಿ ನಿರೂಪಿಸಿದರು. ಪ್ರೊ. ನಯನತಾರಾ ವಂದಿಸಿದರು.

ಪ್ರೊ.ಚನ್ನವೀರ ಆರ್.ಎಂ, ಕಾರ್ಯಕ್ರಮದ ಸಂಯೋಜಕ ಪ್ರೊ. ಪ್ರಶಾಂತ, ಡಾ.ಜಗದೀಶ ಬಿರಾದಾರ, ಕೇಂದ್ರೀಯ ವಿಶ್ವವಿದ್ಯಾಲಯ, ಶರಣಬಸವ ವಿಶ್ವವಿದ್ಯಾಲಯ ಮತ್ತು ಖಾಜಾ ಬಂದಾನವಾಜ್‌ ವಿಶ್ವವಿದ್ಯಾಲಯದ ಅಧ್ಯಾಪಕರು, ಮಾಲ್ಗುಡಿ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿಗಳು ಮತ್ತು ಶಿಕ್ಷಕರು, ಅಪ್ಪಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.