ADVERTISEMENT

‘ಕಾನೂನು ಸುವ್ಯವಸ್ಥೆ ಬಲಗೊಳಿಸಲು ಶ್ರಮಿಸುವೆ’

ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 16:40 IST
Last Updated 4 ಆಗಸ್ಟ್ 2020, 16:40 IST
ಕಲಬುರ್ಗಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರಿಗೆ ನಿಕಟಪೂರ್ವ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮಂಗಳವಾರ ಅಧಿಕಾರ ಹಸ್ತಾಂತರಿಸಿದರು
ಕಲಬುರ್ಗಿ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ಅವರಿಗೆ ನಿಕಟಪೂರ್ವ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಮಂಗಳವಾರ ಅಧಿಕಾರ ಹಸ್ತಾಂತರಿಸಿದರು   

ಕಲಬುರ್ಗಿ: ‘ಜಿಲ್ಲೆಯಲ್ಲಿ ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಪೊಲೀಸ್‌ ಸಿಬ್ಬಂದಿಗೂ ಕೋವಿಡ್‌ ಸೋಂಕು ಹರಡಿದ್ದು, ಈ ಆತಂಕದ ಮಧ್ಯೆಯೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಗೊಳಿಸಲು ಶ್ರಮಿಸುತ್ತೇನೆ’ ಎಂದು ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ಭರವಸೆ ನೀಡಿದರು.

ನಿಕಟಪೂರ್ವ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರಿಂದ ಮಂಗಳವಾರ ಅಧಿಕಾರ ಸ್ವೀಕರಿಸಿದ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನಾಲ್ಕೈದು ದಿನಗಳ ಕಾಲ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿವರ ಪಡೆದುಕೊಳ್ಳುತ್ತೇನೆ. ಲಭ್ಯವಿರುವ ಸಿಬ್ಬಂದಿಯನ್ನು ಬಳಸಿಕೊಂಡು ಬಂದೋಬಸ್ತ್ ಮಾಡುತ್ತೇನೆ. ಕೊರೊನಾದಿಂದ ಬಳಲುತ್ತಿರುವ ಸಿಬ್ಬಂದಿಗೆ ಸೂಕ್ತ ವೈದ್ಯಕೀಯ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ಡಾ.ಸಿಮಿ ಮರಿಯಮ್ ಅವರು ಮೂಲತಃ ಕೇರಳ ರಾಜ್ಯದ ಪತ್ತಣಂತಿಟ್ಟ ಜಿಲ್ಲೆಯವರು. 2015ನೇ ಸಾಲಿನ ಕರ್ನಾಟಕ ಕೇಡರ್‌ನ ಐಪಿಎಸ್‌ ಅಧಿಕಾರಿ. ಕೆಲ ಕಾಲ ಬಳ್ಳಾರಿ ಜಿಲ್ಲೆಯ ಕಮಲಾಪುರ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಕಲಬುರ್ಗಿ ಎಸ್ಪಿಯಾಗುವುದಕ್ಕೂ ಮುನ್ನ ಬೆಂಗಳೂರಿನ ಅಪರಾಧ ವಿಭಾಗದ ಸಹಾಯಕ ಪೊಲೀಸ್‌ ಮಹಾನಿರ್ದೇಶಕಿಯಾಗಿ ಕೆಲಸ ನಿರ್ವಹಿಸಿದ್ದಾರೆ.

ADVERTISEMENT

ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಕಾರ್ಕಳದ ನಕ್ಸಲ್ ನಿಗ್ರಹ ಪಡೆಯ ಎಸ್ಪಿಯನ್ನಾಗಿ ವರ್ಗಾಯಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಯಡಾ ಮಾರ್ಟಿನ್, ‘ಕಲಬುರ್ಗಿ ಜಿಲ್ಲೆಯಲ್ಲಿನ ಸೇವೆ ಖುಷಿ ನೀಡಿದೆ. ಅವಕಾಶ ಸಿಕ್ಕರೆ ಮುಂದೊಂದು ದಿನ ಜಿಲ್ಲೆಯಲ್ಲಿ ಕೆಲಸ ಮಾಡುತ್ತೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.