
ಆಳಂದ: ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ದರೋಡೆಕೋರರ ಗುಂಪೊಂದು ಮನೆಗಳಿಗೆ ನುಗ್ಗಿ ಮನೆಯಲ್ಲಿದ್ದ ಹಣ, ಒಡವೆ ಹಾಗೂ ಕಿರಾಣಿ ಅಂಗಡಿಯಲ್ಲಿದ್ದ ಸಾಮಗ್ರಿ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಆರು ಜನ ಮುಸುಕುಧಾರಿಗಳು ಮಧ್ಯರಾತ್ರಿ ಮನೆ ದರೋಡೆಗೆ ತೆರಳುವ ದೃಶ್ಯ ಮುಖ್ಯರಸ್ತೆಯ ಮನೆ, ಅಂಗಡಿಯಲ್ಲಿ ಹಾಕಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗ್ರಾಮದ ಚಾಂದಸಾಬ ಮಡ್ಡಿ ಎಂಬುವರ ಮನೆಗೆ ನುಗ್ಗಿದ ಕಳ್ಳರ ತಂಡ, ಅಲಮಾರ್ ಮುರಿದು ಅದರಲ್ಲಿದ್ದ ₹50 ಸಾವಿರ ನಗದು, 10 ಗ್ರಾಂ ಚಿನ್ನ ದೋಚಿದ್ದಾರೆ. ಅಮಿತ್ ನಾಗೂರೆ ಅವರ ಕಿರಾಣಿ ಅಂಗಡಿಯಲ್ಲಿದ್ದ ಅಂದಾಜು ₹45 ಸಾವಿರಕ್ಕೂ ಹೆಚ್ಚು ನಗದು ಹಾಗೂ ಬಾದಾಮಿ, ಕಾಜೂ ಮತ್ತಿತರ ತಿನಿಸು ದೋಚಿದ್ದಾರೆ.
ವಿಜಯಕುಮಾರ ಟಪ್ಪಾ ಎಂಬುವರ ಮನೆಯಲ್ಲಿದ್ದ ಪೆಟ್ಟಿಗೆ ಒಡೆದು 10 ಗ್ರಾಂ ಚಿನ್ನ ಹಾಗೂ ₹20 ಸಾವಿರ ನಗದು ಹಾಗೂ ಬೆಲೆಬಾಳುವಬಟ್ಟೆ ದೋಚಿಕೊಂಡು ಹೋಗಿದ್ದಾರೆ. ಗ್ರಾಮದ ನಾಗೂರೆ ಮನೆಯ ಸುತ್ತಲಿನ ಇನ್ನು ಎರಡು ಮನೆಗಳ ಮುಂದಿನ ಅಂಗಡಿ ಬಾಗಿಲು ಒಡೆದು ಕಳವು ಮಾಡಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಮೀಪದ ಜನರ ಓಡಾಟ ಕೇಳಿ ಬಂದಿದ್ದರಿಂದ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಮುಂದೆ ಅಂಬೇಡ್ಕರ್ ಸರ್ಕಲ್ ಹತ್ತಿರ ದರೋಡೆಕೋರರ ಸುಳಿವು ಕಂಡು ಜನ ಎಚ್ಚರಗೊಂಡಿದ್ದಾರೆ. ಸಮೀಪದ ಮನೆಗಳ ಜನ ಹೊರಬರುತ್ತಲೆ ದರೋಡೆಕೋರರು ಅಲ್ಲಿಂದ ಕತ್ತಲಲ್ಲಿ ಪರಾರಿಯಾಗಿದ್ದಾರೆ. ಜನರು ಬೆನ್ನಟ್ಟುವ ಪ್ರಯತ್ನ ಸಹ ಮಾಡಿದ್ದಾರೆ.
ಮುಸುಕುಧಾರಿಗಳಾದ ಆರು ಜನರು ಮುಖ್ಯರಸ್ತೆಯಲ್ಲಿ ಕೈಯಲ್ಲಿ ಕಲ್ಲು ಹಿಡಿದು ಓಡಾಡಿದ ದೃಶ್ಯಗಳು ಸಿಸಿಟಿವಿಕ್ಯಾಮೆರಾಲ್ಲಿ ಸೆರೆಯಾಗಿದ್ದು, ಸ್ಥಳಕ್ಕೆ ಬುಧವಾರ ಬೆಳಿಗ್ಗೆ ನಿಂಬರ್ಗಾ ಪೊಲೀಸರು ಮತ್ತು ಕಲಬುರಗಿಯಿಂದ ಶ್ವಾನದಳ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.
ಬೆರಳಚ್ಚು ತಜ್ಞರು ಸಹ ವಿವಿಧ ಮನೆಗಳಿಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಡಿವೈಎಸ್‌ಪಿ ತಮ್ಮರಾಯ ಪಾಟೀಲ, ಸಿಪಿಐ ಪ್ರಕಾಶ ಯಾತನೂರು, ಪಿಎಸ್‌ಐ ಇಂದುಮತಿ ಪಾಟೀಲ ಸ್ಥಳಕ್ಕೆ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.