ADVERTISEMENT

ಕಾಳಗಿ: ಅವ್ಯವಸ್ಥೆಯ ತಾಣವಾದ ಬಸ್‌ ನಿಲ್ದಾಣ

ಕಾಳಗಿ: ಸ್ವಚ್ಛತೆ, ಶೌಚಾಲಯ ಸಮಸ್ಯೆ; ಬಸ್ಸುಗಳ ಮಾಹಿತಿ ಕೊರತೆ

ಗುಂಡಪ್ಪ ಕರೆಮನೋರ
Published 5 ಅಕ್ಟೋಬರ್ 2020, 3:23 IST
Last Updated 5 ಅಕ್ಟೋಬರ್ 2020, 3:23 IST
ಕಾಳಗಿ ಬಸ್ ನಿಲ್ದಾಣದಲ್ಲಿ ಬಿಡಾಡಿ ದನಗಳ ಓಡಾಟ
ಕಾಳಗಿ ಬಸ್ ನಿಲ್ದಾಣದಲ್ಲಿ ಬಿಡಾಡಿ ದನಗಳ ಓಡಾಟ   

ಕಾಳಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಇಲ್ಲಿನ ಬಸ್ ನಿಲ್ದಾಣವು ಅವ್ಯವಸ್ಥೆಯ ಆಗರವಾಗಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ತಾಲ್ಲೂಕು ಕೇಂದ್ರವಾಗಿರುವ ಕಾಳಗಿ ಪಟ್ಟಣವು ಕಲಬುರ್ಗಿ, ಚಿಂಚೋಳಿ, ಸೇಡಂ, ಕಮಲಾಪುರ, ಚಿತ್ತಾಪುರ ಮತ್ತು ಚಿಟಗುಪ್ಪ ನಗರಗಳ ಮಾರ್ಗ ಮಧ್ಯೆ ಬರುವ ಊರಾಗಿದ್ದು, ಈ ಎಲ್ಲ ನಗರಗಳೂ 40 ಕಿ.ಮೀ ಅಂತರದಲ್ಲಿವೆ. ಅಲ್ಲದೆ ಸುತ್ತಲಿನ ಸುಮಾರು 70 ಹಳ್ಳಿಗಳ ಜನರ ದೈನಂದಿನ ವ್ಯವಹಾರಕ್ಕೆ ಕಾಳಗಿ ಕೇಂದ್ರಸ್ಥಾನವಾಗಿದೆ. ಹಾಗೆಯೇ ಈ ಭಾಗದ ಜನರು ಕಲಬುರ್ಗಿ, ಬೀದರ್, ಹುಮನಾಬಾದ, ತಾಂಡೂರ್ ಮತ್ತು ಹೈದರಾಬಾದ್‌ಗೆ ತೆರಳಲು ಕಾಳಗಿ ಸಂಪರ್ಕ ಮಾಡಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಇಲ್ಲಿ ಪ್ರಯಾಣಿಕರು ಜಾಸ್ತಿ. ಆದರೆ ಈ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬಂದರೆ ಇಲ್ಲಿನ ಅವ್ಯವಸ್ಥೆ ಅವರನ್ನು ದಂಗುಬಡಿಸುತ್ತದೆ.

ಬಸ್ ನಿಲ್ದಾಣ ಸ್ವಚ್ಛಗೊಳಿಸಲು ಯಾವೊಬ್ಬ ವ್ಯಕ್ತಿ ಇಲ್ಲಿಲ್ಲ. 4– 5 ಮಾನಸಿಕ ಅಸ್ವಸ್ಥರಾದ ಜನರು ಇಲ್ಲಿಯೆ ವಾಸಿಸುತ್ತಾರೆ. ಎಲ್ಲೆಂದರಲ್ಲಿ ಅವರ ಗಂಟುಮೂಟೆಗಳೇ ಕಂಡುಬರುತ್ತವೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಯೋಗ್ಯ ಜಾಗವೇ ಇಲ್ಲ. ಬಸ್ಸಿನ ಆಗಮನ-ನಿರ್ಗಮನ ಮಾರ್ಗ ಸೂಚಿಸುವ ನಾಮಫಲಕ ಇಲ್ಲ.

ADVERTISEMENT

ಮಹಿಳೆಯರ ಮೂತ್ರಾಲಯವನ್ನು ಸ್ವಚ್ಛಗೊಳಿಸುವರೇ ಇಲ್ಲ. ಶೌಚಾಲಯವಂತೂ ಮೊದಲೇ ಇಲ್ಲ. ಇನ್ನು ಬಸ್ ನಿಲ್ದಾಣಕ್ಕೆ ಹೆಸರೇ ಇಲ್ಲ. ಈ ಎಲ್ಲದರ ಮಧ್ಯೆಪ್ರಯಾಣಿಕರನ್ನು ಹೊತ್ತು ಸಂಚರಿಸುವ ಬಸ್‌ಗಳಿಗೆ ಒಂದುಕಡೆ ಬಿಡಾಡಿ ದನಗಳ ಅಡ್ಡಿ, ಮತ್ತೊಂದಡೆ ಖಾಸಗಿ ವಾಹನಗಳ ಕಾಟ ವಿಪರಿತವಾಗಿ ಕಾಡುತ್ತಿದೆ.

ಬಸ್ ನಿಲ್ದಾಣದಲ್ಲಿ ಕೊಳವೆಬಾವಿ ಕಾಮಗಾರಿಯ ಸಿಮೆಂಟ್ ಕಲ್ಲುಗಳು 7 ತಿಂಗಳಿಂದ ಬಿದ್ದಲ್ಲೇ ಬಿದ್ದಿವೆ. ಬಸ್ ಘಟಕ ಇಲ್ಲೇ ಇದ್ದರೂ ಯಾವ ಬಸ್ಸು ಎಷ್ಟೊತ್ತಿಗೆ ಬರುತ್ತೆ, ಎಲ್ಲಿಗೆ ಹೋಗುತ್ತೆ ಎಂಬ ಮಾಹಿತಿ ಲಭ್ಯವಿಲ್ಲ. ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಮಾತ್ರ ಕಲಬುರ್ಗಿಗೆ ಇಲ್ಲಿನ ಬಸ್ ಗಳು ಸಂಚರಿಸುತ್ತವೆ. ಬಸ್ಸಿನ ಬಗ್ಗೆ ಏನಾದರು ಮಾಹಿತಿ ಕೇಳಬೇಕೆಂದರೆ ಬಸ್ ಘಟಕದ ವ್ಯವಸ್ಥಾಪಕರು ಸಿಗುತ್ತಿಲ್ಲ. ಮೊಬೈಲ್ ಕರೆ ಮಾಡಿದರೆ ಸುಳ್ಳು ಮಾಹಿತಿ ನೀಡಿ ಪ್ರಯಾಣಿಕರನ್ನು ತೊಂದರೆಗೆ ಸಿಲುಕಿಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಪ್ರತಾಪರೆಡ್ಡಿ ತಿಳಿಸಿದ್ದಾರೆ.

ಈ ಕುರಿತು ಬಸ್ ಘಟಕದ ವ್ಯವಸ್ಥಾಪಕ ಯಶ್ವಂತ ಯಾತನೂರ ಅವರನ್ನು ಪ್ರಶ್ನಿಸಿದಾಗ, ‘ನನ್ನ ಕೆಲಸವನ್ನು ನಾನು ಮಾಡಿದ್ದೇನೆ. ಉಳಿದದ್ದು ಡಿಟಿಒ ಅವರದು’ ಎಂದು ಪ್ರತಿಕ್ರಿಯಿಸಿದರು.

ಒಟ್ಟಾರೆ ಇಲ್ಲಿಯ ಬಸ್ ನಿಲ್ದಾಣ ಬೇಕಾಬಿಟ್ಟಿಯ ತಾಣವಾಗಿದ್ದು ಹೇಳೋರು ಕೇಳೋರು ಇಲ್ಲ ದಂತಾಗಿದೆ ಎಂದು ಪ್ರಯಾಣಿಕರು ‘ಪ್ರಜಾವಾಣಿ’ಗೆ ಗೋಳು ತೋಡಿಕೊಂಡು ಸಂಬಂಧಿತ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.