ADVERTISEMENT

ಗುಲಾಬಿ ಹೂ ಕೊಟ್ಟು ಹೆಲ್ಮೆಟ್‌ ಹಾಕ್ಕೋರಿ ಅಂದ್ರು...

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 15:00 IST
Last Updated 22 ಸೆಪ್ಟೆಂಬರ್ 2019, 15:00 IST
ಕಲಬುರ್ಗಿಯ ಲಾಹೋಟಿ ಪೆಟ್ರೋಲ್‌ ಪಂಪ್‌ ವ್ಯವಸ್ಥಾಪಕ ಓಂಪ್ರಕಾಶ್‌ ತೋಸ್ನಿವಾಲ್‌ ಅವರು ಮಹಿಳೆಯೊಬ್ಬರಿಗೆ ಹೂ ನೀಡಿ ಹೆಲ್ಮೆಟ್‌ ಧರಿಸಿ ಸಂಚರಿಸುವಂತೆ ಮನವಿ ಮಾಡಿದರು
ಕಲಬುರ್ಗಿಯ ಲಾಹೋಟಿ ಪೆಟ್ರೋಲ್‌ ಪಂಪ್‌ ವ್ಯವಸ್ಥಾಪಕ ಓಂಪ್ರಕಾಶ್‌ ತೋಸ್ನಿವಾಲ್‌ ಅವರು ಮಹಿಳೆಯೊಬ್ಬರಿಗೆ ಹೂ ನೀಡಿ ಹೆಲ್ಮೆಟ್‌ ಧರಿಸಿ ಸಂಚರಿಸುವಂತೆ ಮನವಿ ಮಾಡಿದರು   

ಕಲಬುರ್ಗಿ: ಬೈಕ್‌, ಸ್ಕೂಟರ್‌ಗೆ ಪೆಟ್ರೋಲ್‌ ಹಾಕಿಸಿಕೊಳ್ಳಲು ನಗರದ ಲಾಹೋಟಿ ಪೆಟ್ರೋಲ್‌ ಪಂಪ್‌ಗೆ ಬಂದ ಗ್ರಾಹಕರಿಗೆ ಅಚ್ಚರಿ ಕಾದಿತ್ತು. ಪಂಪ್‌ ಮಾಲೀಕರು ಹಾಗೂ ಸಿಬ್ಬಂದಿ ಗುಲಾಬಿ ಹೂವನ್ನು ನೀಡುತ್ತಲೇ ಹೆಲ್ಮೆಟ್‌ ಹಾಕಿಕೊಳ್ಳುವ ಮೂಲಕ ಸಂಭವನೀಯ ಅವಘಡಗಳಿಂದ ಪಾರಾಗಿರಿ ಎಂದು ಮನವಿ ಮಾಡಿದರು.

ಭಾನುವಾರ ಈ ವಿನೂತನ ಜಾಗೃತಿಯ ಮೂಲಕ ಪೆಟ್ರೋಲ್‌ ಪಂಪ್‌ನವರು ಗ್ರಾಹಕರ ಗಮನ ಸೆಳೆದರು.

ಕಲಬುರ್ಗಿ ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಅವರು ನಗರದ ಪೆಟ್ರೋಲ್‌ ಪಂಪ್‌ ಮಾಲೀಕರ ಸಭೆ ನಡೆಸಿ ಹೆಲ್ಮೆಟ್ ಧರಿಸಿದವರ ವಾಹನಗಳಿಗೆ ಮಾತ್ರ ಪೆಟ್ರೋಲ್‌ ಹಾಕಬೇಕು ಎಂದು ಸೂಚಿಸಿದ್ದರು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದಕ್ಕೂ ಮುನ್ನ ಪೆಟ್ರೋಲ್‌ ಪಂಪ್‌ ಸಿಬ್ಬಂದಿ ಗ್ರಾಹಕರಿಗೆ ನಯವಾಗಿಯೇ ಹೆಲ್ಮೆಟ್‌ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಮುಂದಾಗಿದ್ದಾರೆ.

ADVERTISEMENT

ಸೆಪ್ಟೆಂಬರ್‌ 1ರಿಂದಲೇ ರಾಷ್ಟ್ರೀಯ ಮೋಟಾರು ವಾಹನ ಕಾಯ್ದೆಯನ್ನು ತಿದ್ದುಪಡಿ ಮಾಡಿ ರಸ್ತೆ ನಿಯಮಗಳನ್ನು ಉಲ್ಲಂಘನೆ ಮಾಡುವವರಿಗೆ ಭಾರಿ ಪ್ರಮಾಣದ ದಂಡ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ರಾಜ್ಯ ಸರ್ಕಾರ ದಂಡದ ಪ್ರಮಾಣದಲ್ಲಿ ಶೇ 50ರಷ್ಟು ಕಡಿಮೆ ಮಾಡಿ ಕಾಯ್ದೆ ಜಾರಿಗೊಳಿಸಿದೆ. ಹೆಲ್ಮೆಟ್‌ ಹಾಕದೇ ವಾಹನ ಚಲಾಯಿಸಿದರೆ ಪೊಲೀಸರು ₹ 500 ದಂಡ ವಿಧಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.