ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ವಿವಿಧ ತಾಲ್ಲೂಕು, ಗ್ರಾಮಗಳಲ್ಲಿ 870 ಸಾರ್ವಜನಿಕ ಗಣಪತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು, ವಿಸರ್ಜನೆ ಸಂದರ್ಭದಲ್ಲಿ ಮೆರವಣಿಗೆ ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್ ಸ್ಪಷ್ಟಪಡಿಸಿದರು.
ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೆರವಣಿಗೆ ನಡೆಸುವುದಿಲ್ಲ ಎಂದು ಸಂಘಟಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧೆಡೆ ಐದು, ಏಳು, ಒಂಬತ್ತು ಹಾಗೂ ಹನ್ನೊಂದು ದಿನಗಳಿಗೆ ವಿಸರ್ಜನೆ ನಡೆಯುತ್ತಿದೆ. ಐದು ಜನರು ಮಾತ್ರ ವಿಸರ್ಜನೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ’ ಎಂದರು.
ಮರಳು ಸಾಗಾಟದ ಮಾಹಿತಿ ನೀಡಿ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ನಡೆಸುತ್ತಿರುವುದು ಗಮನಕ್ಕೆ ಬಂದರೆ ತಕ್ಷಣ ಪೊಲೀಸ್ ಅಧಿಕಾರಿಗಳ ತಮನಕ್ಕೆ ತರಬೇಕು. ಅಕ್ರಮ ಸಾಗಾಟ ನಡೆದಿದ್ದರೆ ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ನನಗೂ ಮಾಹಿತಿ ಬಂದಿದೆ ಎಂದು ಹೇಳಿದರು.
31 ಜನರಿಂದ ಪ್ಲಾಸ್ಮಾ: ಜಿಲ್ಲೆಯ ವಿವಿಧ ಠಾಣೆಗಳ 31 ಜನ ಪೊಲೀಸರು ಕೋವಿಡ್‌ನಿಂದ ಗುಣಮುಖರಾಗಿದ್ದು, ತಮ್ಮ ಪ್ಲಾಸ್ಮಾವನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ. ಪ್ಲಾಸ್ಮಾ ಪಡೆಯಲು ಕೋವಿಡ್ ಸೋಂಕಿತರು ಮುಂದಾದರೆ ಕೊಡಲು ನಮ್ಮ ಪೊಲೀಸರು ಸಿದ್ಧರಿದ್ದಾರೆ ಎಂದರು.
ಇಲ್ಲಿಯವರೆಗೆ 140 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದ್ದು, ಅವರ ಪೈಕಿ 94 ಜನ ಗುಣಮುಖರಾಗಿದ್ದಾರೆ. ಉಳಿದವರೂ ಚೇತರಿಸಿಕೊಳ್ಳುತ್ತಿದ್ದಾರೆ. ಅದೃಷ್ಟವಶಾತ್ ಯಾರೊಬ್ಬರೂ ಐಸಿಯುನಲ್ಲಿ ಇಲ್ಲ ಎಂದು ಡಾ.ಸಿಮಿ ತಿಳಿಸಿದರು.
‘ಐಎಫ್‌ಎಸ್ ಮಾಡುವ ಆಸೆಯಿತ್ತು’
ಕೇರಳದ ಪಟ್ಟಣಂತಿಟ್ಟ ಜಿಲ್ಲೆಯವರಾದ ಡಾ.ಸಿಮಿ ಮರಿಯಮ್ ಅವರಿಗೆ ಭಾರತೀಯ ವಿದೇಶಾಂಗ ಸೇವೆಯನ್ನು ಮಾಡುವ ಅವಕಾಶವಿತ್ತು. ಆದರೆ, ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಐಎಫ್‌ಎಸ್ ಮಾಡಲು ರ‍್ಯಾಂಕಿಂಗ್ ಸಿಗದೇ ಇದ್ದುದರಿಂದ ಐಪಿಎಸ್ ಆಯ್ಕೆ ಮಾಡಿದ್ದಾಗಿ ತಿಳಿಸಿದರು.
ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂದೆ–ತಾಯಿಗೆ ನಾನು ಒಬ್ಬಳೇ ಮಗಳು. ನನ್ನ ಪತಿ ಐಎಫ್‌ಎಸ್ ಮಾಡಿ ವಿದೇಶಾಂಗ ಸೇವೆಯಲ್ಲಿದ್ದಾರೆ. ಐಪಿಎಸ್ ಹುದ್ದೆ ದೊರೆತಾಗ ಕೇರಳದ ಬಳಿಕ ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿದ್ದೆ. ಕೇರಳದಲ್ಲಿ ಹುದ್ದೆಗಳು ಭರ್ತಿಯಾಗಿದ್ದವು. ಪಕ್ಕದ ರಾಜ್ಯ ಕರ್ನಾಟಕವೇ ಸಿಕ್ಕಿದ್ದರಿಂದ ಖುಷಿಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಡಿವೈಎಸ್ಪಿಯಾಗಿ ಕೆಲಸ ಮಾಡಿದ್ದರಿಂದ ಈ ಭಾಗದ ಬಗ್ಗೆ ಮಾಹಿತಿ ಇದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.