
ಕಲಬುರಗಿ: ‘ಕಲಬುರಗಿ ರೈಲ್ವೆ ನಿಲ್ದಾಣವನ್ನು ಕಲಬುರಗಿ ರೈಲ್ವೆ ವಲಯವನ್ನಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಕೈ ಬಿಟ್ಟಿದೆ’ ಎಂದು ರಾಜ್ಯದ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬುಧವಾರ ಸದಸ್ಯ ಶಶೀಲ್ ಜಿ.ನಮೋಶಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಲಬುರಗಿ ರೈಲ್ವೆ ನಿಲ್ದಾಣವನ್ನು ಕಲಬುರಗಿ ರೈಲ್ವೆ ವಲಯವನ್ನಾಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವನೆ ಗಮನಕ್ಕೆ ಬಂದಿದೆ. ಕಲಬುರಗಿ ರೈಲ್ವೆ ವಲಯ ರಚನೆಯ ಸಂಬಂಧ ಮುಖ್ಯಮಂತ್ರಿಗಳು 2020ರ ಆ.26ರಂದು ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆದಿದ್ದರು. ಅಂದಿನ ರೈಲ್ವೆ ಸಚಿವರು ಅದೇ ತಿಂಗಳ 29ರಂದು, ‘ಕಲಬುರಗಿ ನೂತನ ರೈಲ್ವೆ ವಿಭಾಗದ ರಚನೆಯ ಪ್ರಸ್ತಾವನೆ ಕೈಬಿಡಲಾಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ರೈಲ್ವೆ ಯೋಜನೆಗಳು ಬೃಹತ್ ಗಾತ್ರ ಯೋಜನೆಗಳಾಗಿದ್ದು, ಈ ಯೋಜನೆಗಳನ್ನು ಇಲಾಖೆಯಿಂದ ಯೋಜನವಾರು ಕೈಗೆತ್ತಿಕೊಳ್ಳಲಾಗುತ್ತದೆಯೇ ಹೊರತು ವಿಧಾಸಭಾ ಕ್ಷೇತ್ರಗಳವಾರು ತೆಗೆದುಕೊಳ್ಳುವುದಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಯಾವುದೇ ಹೊಸ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದಿಲ್ಲ’ ಎಂದು ಹೇಳಿದ್ದಾರೆ.
‘ಗಿಣಿಗೇರ–ರಾಯಚೂರು, ಬಾಗಲಕೋಟೆ–ಕುಡಚಿ, ಗದಗ–ವಾಡಿ ಮಾರ್ಗಗಳ ಯೋಜನೆ, ಚಿತ್ತಾಪುರ, ಅಫಜಲಪುರ ಮತ್ತು ಮದರ್ ಥೆರೆಸಾ ಶಾಲೆ ಸಮೀಪದ ಲೆವೆಲ್ ಕ್ರಾಸಿಂಗ್ ಗೇಟ್‌ನ ಮೇಲ್ಸೇತುವೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದಿದ್ದಾರೆ.
‘ಬೀದರ್‌ನಿಂದ ಆರಂಭಿಸಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ಯಾಸೆಂಜರ್ ರೈಲು ಸಂಚಾರ ಆರಂಭಕ್ಕೆ ಇಲ್ಲಿಯವರೆಗೆ ಯಾವುದೇ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿಲ್ಲ’ ಎಂದು ತಿಳಿಸಿದ್ದಾರೆ.
ಹೋರಾಟಗಾರರ ಬೇಸರ: ‘2014ರಲ್ಲಿ ಮಂಜೂರಾಗಿದ್ದ ಕಲಬುರಗಿ ವಿಭಾಗಗಳ ರಚನೆ ಸಂಬಂಧ ಅಧಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಬಜೆಟ್‌ನಲ್ಲಿ ಘೋಷಿಸಿ, ಅಧಿಕೃತ ಆದೇಶ ಹೊರಡಿಸಿದ್ದರು. ಆರಂಭಿಕ ಹಂತದಲ್ಲಿ ಅನುದಾನ ಸಹ ನೀಡಲಾಗಿತ್ತು. ಹತ್ತಾರು ಎಕರೆ ಜಮೀನನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಕೇಂದ್ರ ಸರ್ಕಾರ ಪ್ರಸ್ತಾವನೆ ಕೈಬಿಟ್ಟು ಬಳಿಕ, ರಾಜ್ಯ ಸರ್ಕಾರ ಹಾಗೂ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಜಾರಿಗೆ ಯತ್ನಿಸುವರು ಎಂಬ ನಿರೀಕ್ಷೆ ಹುಸಿಯಾಗಿದೆ’ ಎಂದು ರೈಲ್ವೆ ವಿಭಾಗ ಸ್ಥಾಪನೆಯ ಹೋರಾಟಗಾರರು ಬೇಸರ ವ್ಯಕ್ತಪಡಿಸಿದರು.
‘ನೀರು ಪೂರೈಕೆ: ಶೇ 20ರಷ್ಟು ಪೈಪ್‌ಲೈನ್ ಜೋಡಣೆ’
‘ಕಲಬುರಗಿ ನಗರದಲ್ಲಿ ನಡೆಯುತ್ತಿರುವ 24X7 ಕುಡಿಯುವ ನೀರು ಪೂರೈಸುವ ಕಾಮಗಾರಿ 2025ರಲ್ಲಿ ಪೂರ್ಣಗೊಳ್ಳಲಿದೆ’ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬುಧವಾರ ಸದಸ್ಯ ಬಿ.ಜಿ.ಪಾಟೀಲ ಅವರ ಪ್ರಶ್ನೆಗೆ ಉತ್ತರಸಿದ ಸಚಿವರು, ‘2020ರಲ್ಲಿ ಹೈದರಾಬಾದ್ ಮೂಲದ ಎಲ್ ಆಂಡ್ ಟಿ ಕಂಪನಿಗೆ ₹837.43 ಕೋಟಿ ಮೊತ್ತದಡಿ ಕುಡಿಯುವ ನೀರು ಪೂರೈಸು ಕಾಮಗಾರಿಯ ಗುತ್ತಿಗೆಗೆ ನೀಡಲಾಗಿದೆ. ಐದು ವರ್ಷಗಳಲ್ಲಿ ನಗರಾದ್ಯಂತ ಕಾಮಗಾರಿ ಹಾಗೂ ನಂತರ 7 ವರ್ಷ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ’ ಎಂದರು.
‘ಕಾಮಗಾರಿ ಪ್ರಗತಿಯಲ್ಲಿದ್ದು, ಶೇ.20ರಷ್ಟು ಕೊಳವೆ ಮಾರ್ಗ ಅಳವಡಿಕೆ ಪೂರ್ಣಗೊಂಡಿದೆ. ಆರ್ಥಿಕ ಪ್ರಗತಿ ಶೇ.14.18ರಷ್ಟು ಸಾಧಿಸಲಾಗಿದೆ. 2025ರ ಜೂನ್ ಒಳಗೆ ಪೂರ್ಣಗೊಳ್ಳುವ ಭರವಸೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.