ADVERTISEMENT

ಸಾಮಾಜಿಕ ಬಿಕ್ಕಟ್ಟಿಗೆ ಸಾಹಿತಿಗಳಿಂದ ಸಿಗದ ಸ್ಪಂದನೆ: ದಿನೇಶ್ ಅಮಿನ್ ಮಟ್ಟು ಬೇಸರ

ಪತ್ರಕರ್ತ ಸಾಹಿತಿಗಳ ಸಮಾವೇಶದಲ್ಲಿ ದಿನೇಶ್ ಅಮಿನ್ ಮಟ್ಟು ವಿಷಾದ

​ಪ್ರಜಾವಾಣಿ ವಾರ್ತೆ
Published 12 ಜುಲೈ 2022, 15:48 IST
Last Updated 12 ಜುಲೈ 2022, 15:48 IST
ಪತ್ರಕರ್ತ ಸಾಹಿತಿಗಳ ಸಮಾವೇಶದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಮಾತನಾಡಿದರು. ಬಾಬುರಾವ ಯಡ್ರಾಮಿ, ಸದಾನಂದ ಜೋಶಿ, ಸಿದ್ದೇಶ್ವರಪ್ಪ, ಡಾ. ಸ್ವಾಮಿರಾವ ಕುಲಕರ್ಣಿ, ಡಾ.ಎಸ್‌.ಬಿ. ಕಾಮರಡ್ಡಿ ಇದ್ದರು
ಪತ್ರಕರ್ತ ಸಾಹಿತಿಗಳ ಸಮಾವೇಶದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಮಾತನಾಡಿದರು. ಬಾಬುರಾವ ಯಡ್ರಾಮಿ, ಸದಾನಂದ ಜೋಶಿ, ಸಿದ್ದೇಶ್ವರಪ್ಪ, ಡಾ. ಸ್ವಾಮಿರಾವ ಕುಲಕರ್ಣಿ, ಡಾ.ಎಸ್‌.ಬಿ. ಕಾಮರಡ್ಡಿ ಇದ್ದರು   

ಕಲಬುರಗಿ: ‘ನಾಡು, ನುಡಿಗೆ ಧಕ್ಕೆಯಾದಾಗ ಕೆಲ ದಶಕಗಳ ಹಿಂದೆ ಸಾಹಿತಿಗಳು ಬೀದಿಗಿಳಿದು ಹೋರಾಡುತ್ತಿದ್ದರು. ಆದರೆ, ಇಂದಿನ ದಿನಗಳಲ್ಲಿ ದೇಶ ಹಾಗೂ ರಾಜ್ಯ ಹಲವು ಬಿಕ್ಕಟ್ಟು ಎದುರಿಸುತ್ತಿದ್ದರೂ ಸಾಹಿತಿಗಳು ಸ್ಪಂದಿಸುತ್ತಿಲ್ಲ’ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ವಿಷಾದಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕವು ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪತ್ರಕರ್ತ, ಸಾಹಿತಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ತಮ್ಮ ಬರಹ ಮತ್ತು ಚಲನಚಿತ್ರಗಳ ಮೇಲೆ ಆಗುವ ಸಾಧಕ–ಬಾಧಕಗಳನ್ನು ಲೆಕ್ಕಿಸದೇ ಡಾ. ರಾಜ್‌ಕುಮಾರ್ ಸೇರಿದಂತೆ ಹಲವು ಸಾಹಿತಿಗಳು, ಕಲಾವಿದರು ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದ್ದರು. ಜನರು ಎದುರಿಸುತ್ತಿರುವ ಬಿಕ್ಕಟ್ಟಿಗೆ ಅವರು ಸ್ಪಂದಿಸಿದ್ದರು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಾಹಿತಿಗಳು ಪ್ರತಿಭಟಿಸಲಿಲ್ಲ’ ಎಂದರು.

ADVERTISEMENT

ತಮ್ಮ ಪತ್ರಿಕಾ ವೃತ್ತಿಯ ದಿನಗಳನ್ನು ನೆನಪಿಸಿಕೊಂಡ ಅವರು, ‘ನಾನು ತುಮಕೂರಿನಲ್ಲಿ ಪ್ರಜಾವಾಣಿ ವರದಿಗಾರನಾಗಿದ್ದ ವೇಳೆ ರಸ್ತೆ ಗುಂಡಿಯ ಬಗ್ಗೆ ಸುದ್ದಿ ಬರೆದರೆ, ಸಂಜೆಯೇ ಆ ಗುಂಡಿ ಮುಚ್ಚಲಾಗುತಿತ್ತು. ಆದರೆ, ಈಗ ಎಷ್ಟು ಬರೆದರೂ ಸ್ಪಂದನೆ ಸಿಗುತ್ತಿಲ್ಲ’ ಎಂದರು.

ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ಮಾತನಾಡಿ, ‘ಧೀಮಂತ ಪತ್ರಕರ್ತರಾದ ಡಿ.ವಿ. ಗುಂಡಪ್ಪನವರು ಬಡತನ ಅನುಭವಿಸಿದರೂ ನಂಬಿದ ನಂಬಿದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಅವರ ಬಡತನ ಕಂಡು ಅಭಿಮಾನಿಗಳು ಕಾರ್ಯಕ್ರಮ ಏರ್ಪಡಿಸಿ ₹ 1 ಲಕ್ಷ ಹಮ್ಮಿಣಿ ಅರ್ಪಿಸಿದರೂ ಅದನ್ನು ಗುಂಡಪ್ಪ ಅವರು ಗೋಖಲೆ ಸಂಸ್ಥೆಗೆ ದಾನ ಮಾಡಿದರು. ಅಂದು ಸಂಜೆ ಗುಂಡಪ್ಪ ಅವರ ಮನೆಗೆ ಬಂದ ಪತ್ರಕರ್ತರಿಗೆ ಚಹಾ ಮಾಡಿಕೊಡಲೂ ಸಕ್ಕರೆ ಇರಲಿಲ್ಲ. ಅಂಗಡಿಯಿಂದ ಉದ್ರಿ ತಂದು ಚಹಾ ಕೊಡಬೇಕಾಯಿತು’ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ಪತ್ರಕರ್ತರು ತಮ್ಮ ಕೆಲಸದ ಮಧ್ಯೆಯೇ ಕಥೆ, ಕವಿತೆ ರಚಿಸುತ್ತಾರೆ. ಅವರ ಪ್ರತಿಭೆ ಬೆಳಕಿಗೆ ತರಲು ಸಮಾವೇಶ ಆಯೋಜಿಸಲಾಗಿದೆ’ ಎಂದರು.

ಎಲುಬು ಮತ್ತು ಕೀಲು ತಜ್ಞ ಡಾ.ಎಸ್‌.ಬಿ. ಕಾಮರಡ್ಡಿ, ವಾರ್ತಾ ಇಲಾಖೆ ಉಪನಿರ್ದೇಶಕ ಸಿದ್ದೇಶ್ವರಪ್ಪ, ಹಿರಿಯ ಪತ್ರಕರ್ತ ಸದಾನಂದ ಜೋಶಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಖಜಾಂಚಿ ಅಶೋಕ ಕಪನೂರ, ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಡಾ.ಯಶವಂತರಾಯ ಅಷ್ಠಗಿ ಇದ್ದರು.

ಉಪನ್ಯಾಸ, ಕವಿಗೋಷ್ಠಿ

ಸಮಾವೇಶದಲ್ಲಿ ವಿವಿಧ ವಿಚಾರಗಳ ಕುರಿತು ಉಪನ್ಯಾಸ, ಕವಿಗೋಷ್ಠಿ ನಡೆದವು.

ಸಂವಹನ ಮಾಧ್ಯಮ ಮತ್ತು ಕನ್ನಡ ಅಭಿವೃದ್ಧಿ ಕುರಿತು ಡಾ. ಶ್ರೀನಿವಾಸ ಸಿರನೂರಕರ್ ಉಪನ್ಯಾಸ ಮಂಡಿಸಿದರು. ಪತ್ರಿಕೆ ಮತ್ತು ಸೃಜನಶೀಲ ಸಾಹಿತ್ಯ ಕುರಿತು ಶೇಷಮೂರ್ತಿ ಅವಧಾನಿ ಮಾತನಾಡಿದರು. ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಮಹಿಪಾಲರೆಡ್ಡಿ ಮುನ್ನೂರ ವಹಿಸಿದ್ದರು.

ನಂತರ ನಡೆದ ಗೋಷ್ಠಿಯಲ್ಲಿ ಮಾಧ್ಯಮ–ಸಾಹಿತ್ಯ: ಕುಸಿಯುತ್ತಿರುವ ಮೌಲ್ಯಗಳು ಕುರಿತು ಡಾ. ಶಿವರಂಜನ್ ಸತ್ಯಂಪೇಟೆ ಉಪನ್ಯಾಸ ನೀಡಿದರು.

---

ಓದುಗರೇ ಪತ್ರಿಕೆಯ ಮಾಲೀಕರಾದಾಗ ಮಾತ್ರ ಜನಪರ ಸುದ್ದಿ ಬರೆಯಬಹುದು. ಜಾಹೀರಾತುಗಳನ್ನು ನಂಬಿ ಪತ್ರಿಕೆ ನಡೆಸಿದರೆ,, ಅಂತಿಮವಾಗಿ ಓದುಗರ ಬದಲು ಜಾಹೀರಾತು ನೀಡಿದ ಸಂಸ್ಥೆಗಳ ಹಿತಾಸಕ್ತಿ ಕಾಯುವುದು ಅನಿವಾರ್ಯ ಆಗುತ್ತದೆ.

- ದಿನೇಶ್ ಅಮಿನ್ ಮಟ್ಟು,ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.