ADVERTISEMENT

ಪ್ರವಾಸೋದ್ಯಮ ಅಭಿವೃದ್ಧಿ: ಇಚ್ಛಾಶಕ್ತಿ ಕೊರತೆ

ಇಂದು ವಿಶ್ವ ಪ್ರವಾಸೋದ್ಯಮ ದಿನ; ಆಗಿದ್ದು ಚಿಟಿಕೆಯಷ್ಟು, ಆಗಬೇಕಾದದ್ದು ಬಹಳಷ್ಟು

ಮನೋಜ ಕುಮಾರ್ ಗುದ್ದಿ
Published 27 ಸೆಪ್ಟೆಂಬರ್ 2022, 12:07 IST
Last Updated 27 ಸೆಪ್ಟೆಂಬರ್ 2022, 12:07 IST
ಕಲಬುರಗಿಯ ಬಹಮನಿ ಕೋಟೆಯ ಒಳಗೆ ಮನೆ ನಿರ್ಮಿಸಿಕೊಂಡಿರುವು
ಕಲಬುರಗಿಯ ಬಹಮನಿ ಕೋಟೆಯ ಒಳಗೆ ಮನೆ ನಿರ್ಮಿಸಿಕೊಂಡಿರುವು   

ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯು ಬೌದ್ಧ, ಜೈನ, ಹಿಂದು, ಮುಸ್ಲಿಂ, ಲಿಂಗಾಯತ ಮತ–ಧರ್ಮಗಳ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದು, ಅಶೋಕ ಸಾಮ್ರಾಟ್‌ನಿಂದ ಮೊದಲುಗೊಂಡು ಶಾತವಾಹನರು, ರಾಷ್ಟ್ರಕೂಟರು, ಚಾಲುಕ್ಯರು, ವಿಜಯನಗರ ಅರಸರು, ಬಹಮನಿಗಳು, ಹೈದರಾಬಾದ್ ನಿಜಾಮನ ಆಡಳಿತಕ್ಕೆ ಒಳಪಟ್ಟಿತ್ತು.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲುಕಿನ ಸನ್ನತಿ, ಕನಗನಹಳ್ಳಿಯಲ್ಲಿ ದೊರೆತ ಅಧೋಲೋಕ ಮಹಾಚೈತ್ಯ ಬೌದ್ಧ ನೆಲೆ, ರಾಷ್ಟ್ರಕೂಟರು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ್ದ ಸೇಡಂ ತಾಲ್ಲೂಕಿನ ಮಳಖೇಡದ (ಮಾನ್ಯಕೇಟ) ಐತಿಹಾಸಿಕ ಕೋಟೆ ವಿಶಿಷ್ಟವಾಗಿದೆ.

ಬಹಮನಿ ಅರಸರು ನಿರ್ಮಿಸಿದ ಕಲಬುರಗಿ ನಗರದ ಬಹಮನಿ ಕೋಟೆ, ಅದರೊಳಗಿನ ಪ್ರಸಿದ್ಧ ಮಸೀದಿ, ಏಷ್ಯಾ ಖಂಡದಲ್ಲೇ ಅತಿ ದೊಡ್ಡ ತೋಪುಗಳ ಪೈಕಿ ಒಂದಾದ ತೋಪು, ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾ ನವಾಜ್ ದರ್ಗಾ, ಕಲಬುರಗಿ ತಾಲ್ಲೂಕಿನ ಫಿರೋಜಾಬಾದ್ ಗ್ರಾಮದ ಫಿರೋಜ್ ಶಹಾ ನಿರ್ಮಿಸಿದ್ದ ಕೋಟೆ ಆಕರ್ಷಕವಾಗಿವೆ.

ADVERTISEMENT

ಒತ್ತುವರಿಗೆ ನಲುಗಿದ ಕೋಟೆಗಳು: ಶತಮಾನಗಳ ಹಿಂದೆ ಸುವರ್ಣ ಯುಗವನ್ನು ಕಂಡಿದ್ದ ಕೋಟೆಗಳು ಇಂದು ಒತ್ತುವರಿಗೆ ನಲುಗುತ್ತಿವೆ. ಕಲಬುರಗಿಯ ಬಹಮನಿ ಕೋಟೆಯಲ್ಲಿ 282 ಕುಟುಂಬಗಳು ಒತ್ತುವರಿ ಮಾಡಿ, ಅಲ್ಲಿಯೇ ವಾಸವಿದ್ದಾರೆ.

ಅವರನ್ನು ಅಲ್ಲಿಂದ ತೆರವುಗೊಳಿಸಿ, ಕೋಟೆ ಸಂರಕ್ಷಿಸಬೇಕು ಎಂಬ ಒತ್ತಾಯಕ್ಕೆ ಮನ್ನಣೆ ಸಿಕ್ಕಿಲ್ಲ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಇತ್ಯರ್ಥ
ಆಗಬೇಕಿದೆ.

‘ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಇಲ್ಲಿ ಯಾವುದೇ ಸಂರಕ್ಷಣಾ ಕಾರ್ಯ, ಸೌಂದರೀಕರಣ ಕಾರ್ಯ ಕೈಗೊಂಡಿಲ್ಲ. ನಿರ್ವಹಣೆಯಲ್ಲಿ ತೋರುತ್ತಿರುವ ನಿಷ್ಕಾಳಜಿಯಿಂದ ಕೋಟೆಯ ಕೆಲ ಭಾಗಗಳು ಬಯಲು ಶೌಚಾಲಯದಂತಾಗಿದ್ದು, ಪ್ರವಾಸಿಗರು ಮೂಗು ಮುಚ್ಚಿಕೊಂಡು ಕೋಟೆ ಹತ್ತಬೇಕಿದೆ‘ ಎಂದು ಸಾರ್ವಜನಿಕರು ಹೇಳುತ್ತಾರೆ.

‘ಸೇಡಂ ತಾಲ್ಲೂಕಿನ ಮಳಖೇಡದ ಕೋಟೆಯನ್ನು ಪ್ರವಾಸಿ ತಾಣವಾಗಿಸುವ ಬೇಡಿಕೆ ಈಡೇರಿಲ್ಲ. ಗ್ರಾಮದ ಬಸ್ ನಿಲ್ದಾಣದಿಂದ ಕೋಟೆಯವರೆಗೆ ಹೋಗುವ ರಸ್ತೆಯಲ್ಲಿ ಎಲ್ಲಿ ಬೇಕೆಂದರಲ್ಲಿ ಕಸ ಸುರಿಯಲಾಗುತ್ತಿದೆ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಫಿರೋಜಾಬಾದ್ ಗ್ರಾಮದ ಹೊರವಲಯದಲ್ಲಿ ಹತ್ತಾರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಕೋಟೆ ತೀವ್ರ ನಿರ್ಲಕ್ಷ್ಯಕ್ಕೆ
ಒಳಗಾಗಿದೆ.

ಕೋಟೆಯ ಒಳಭಾಗವೇ ಅತಿಕ್ರಮಣಕ್ಕೆ ಒಳಗಾಗಿದ್ದು, ರೈತರು ಅಲ್ಲಿ ಬಿತ್ತನೆ ಮಾಡಿದ್ದಾರೆ. ಕೋಟೆಗೆ ತೆರಳಲು ಸರಿಯಾದ ರಸ್ತೆಯೂ ಇಲ್ಲ. ಆ ಕೋಟೆಯ ಬಗ್ಗೆ ಯಾವುದೇ ಮಾಹಿತಿ ಫಲಕವೂ ಇಲ್ಲ.

‘ಪ್ರವಾಸೋದ್ಯಮಕ್ಕೆ ಆದ್ಯತೆ ಕೊಡುವ ನಿಟ್ಟಿನಲ್ಲಿ ಕೋಟೆಯಲ್ಲಿ ಕುಡಿಯುವ ನೀರು, ಶೌಚಾಲಯ ನಿರ್ಮಿಸಬೇಕು. , ಮಾರ್ಗದರ್ಶಿಗಳನ್ನು ನೇಮಿಸಬೇಕು. ಫುಡ್ ಪಾರ್ಕ್ ವ್ಯವಸ್ಥೆ ಮಾಡಿದರೆ ಪ್ರವಾಸಿಗರು ಬರುತ್ತಾರೆ. ಡಾ. ಶರಣಪ್ರಕಾಶ ಪಾಟೀಲ ಅವರು ಸಚಿವರಾಗಿದ್ದ ವೇಳೆ ರಾಷ್ಟ್ರಕೂಟರ ಉತ್ಸವ ನಡೆದಿತ್ತು. ಆ ನಂತರ ಅಂಥ ಉತ್ಸವ ನಡೆದಿಲ್ಲ’ ಎಂದು ಪ್ರವಾಸಪ್ರಿಯರು ಹೇಳುತ್ತಾರೆ.

‘ಮನೆ ಕಟ್ಟಿಸಲು ದಾಖಲೆ ನೀಡುತ್ತಿಲ್ಲ’

‘ಬಹಮನಿ ಕೋಟೆ ಆವರಣದಲ್ಲಿರುವ 282 ಕುಟುಂಬಗಳನ್ನು ತೆರವುಗೊಳಿಸುವ ವಿಷಯ ನ್ಯಾಯಾಲಯದ ಮುಂದಿದೆ. ಅವರು ಆಧಾರ್ ಕಾರ್ಡ್, ಬಿಪಿಎಲ್‌ ಕಾರ್ಡ್ ದಾಖಲೆ ನೀಡಿದರೆ ಸರ್ಕಾರದ ವಸತಿ ಯೋಜನೆಯಡಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಆದರೆ, ಸೂಕ್ತ ಸಹಕಾರ ನೀಡುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದರು.

‘ಮನೆ ಕಟ್ಟಿಸಿಕೊಡುವ ಸಂಬಂಧ ಪ್ರಯತ್ನ ಮುಂದುವರೆದಿದೆ. ಹಲವು ಬಾರಿ ಕೇಳಿದರೂ ದಾಖಲೆಗಳನ್ನು ನೀಡುತ್ತಿಲ್ಲ’ ಎಂದು ಅವರು ತಿಳಿಸಿದರು.

ಬೌದ್ಧ ನೆಲೆ ಅಭಿವೃದ್ಧಿಗೆ ₹ 3 ಕೋಟಿ

ಸನ್ನತಿಯ ಬೌದ್ಧ ಸ್ತೂಪದ ಸಂರಕ್ಷಣೆ ಕಾರ್ಯಕ್ಕೆ ಕೇಂದ್ರ ಸಂಸ್ಕೃತಿ ಸಚಿವಾಲಯವು ₹ 3 ಕೋಟಿ ಬಿಡುಗಡೆ ಮಾಡಿದ್ದು, ಐತಿಹಾಸಿಕ ಸ್ಮಾರಕ ಸಂರಕ್ಷಿಸುವ ಕಾರ್ಯ ನಡೆದಿದೆ. ದೇಶದ ಏಕೈಕ ಅಶೋಕನ ಶಿಲೆಯನ್ನು ಗಾಜಿನಿಂದ ಹೊದಿಸಲಾಗಿದೆ. ಮಳೆ, ಬಿಸಿಲಿನಿಂದ ರಕ್ಷಣೆಗೆ ಶೆಡ್ ನಿರ್ಮಿಸಲಾಗುತ್ತಿದೆ.

ಅಮರ್ಜಾ ಜಲಾಶಯದ ಬಳಿ ಉದ್ಯಾನ ನಿರ್ಮಾಣಕ್ಕೆ ₹ 10 ಕೋಟಿ, ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದ ಬಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ₹ 5 ಕೋಟಿ ನೀಡಲು ಆಡಳಿತಾತ್ಮಕ ಒಪ್ಪಿಗೆ ಸಿಕ್ಕಿದೆ.

ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಪುರಾತತ್ವ ಇಲಾಖೆ ಹಾಗೂ ಸರ್ಕಾರಕ್ಕೆ ಒಲವು ಇದ್ದಂತಿಲ್ಲ. ಎಷ್ಟೋ ಸ್ಮಾರಕಗಳು ಯಾರ ಅಧೀನದಲ್ಲಿ ಬರುತ್ತವೆ ಎಂಬ ಮಾಹಿತಿಯೇ ಇಲ್ಲ. ಶೋರ ಗುಂಬಜ್ ಬಳಿ ಉದ್ಯಾನ ನಿರ್ಮಿಸಿ ಆಗಾಗ ಕಾರ್ಯಕ್ರಮ ಆಯೋಜಿಸಬೇಕು
ಡಾ. ಶಂಭುಲಿಂಗ ವಾಣಿ

ಇತಿಹಾಸ ತಜ್ಞ, ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.