ಕಲಬುರಗಿ: ‘ಪರಿಶಿಷ್ಟ ಜಾತಿ ಒಳಮೀಸಲಾತಿಯಲ್ಲಿ ಅಲೆಮಾರಿ, ಅರೆಅಲೆಮಾರಿಗಳಿಗೆ ಶೇ1ರಷ್ಟು ಮೀಸಲಾತಿ ನೀಡಲು ರಾಜ್ಯ ಸರ್ಕಾರ ಕೂಡಲೇ ಕ್ರಮವಹಿಸಬೇಕು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಆಗ್ರಹಿಸಿದರು.
‘ನ್ಯಾ.ನಾಗಮೋಹನದಾಸ ಆಯೋಗ ಮಾಡಿದ ಶಿಫಾರಸು ಬದಿಗೊತ್ತಿ ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ 59 ಜಾತಿಗಳನ್ನು ‘ಸಿ’ಗುಂಪಿಗೆ ಸರ್ಕಾರ ಸೇರಿಸಿದೆ. ಸರ್ಕಾರದ ಈ ಸೂತ್ರ ಸಾಮಾಜಿಕ ನ್ಯಾಯವಲ್ಲ, ಸಾಮಾಜಿಕ ಕ್ರೌರ್ಯವಾಗಿದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಯಲ್ಲಿ ಹಿಂದೂವಾದಿ ಹೊಲಯ, ಮಾದಿಗ ಜಾತಿಗಳ ಜನಶಕ್ತಿ ಪ್ರಾಬಲ್ಯಕ್ಕೆ ಸೋತು, ಡಾ.ಅಂಬೇಡ್ಕರ್ ಅನುಯಾಯಿಗಳಾದ ಬೌದ್ಧರು, ಅಲೆಮಾರಿಗಳು, ಅರೆಅಲೆಮಾರಿಗಳಿಗೆ ಘೋರ ಅನ್ಯಾಯ ಮಾಡಿದೆ. ಮೀಸಲಾತಿ ಸೌಲಭ್ಯ ವರ್ಗೀಕರಣದ ವೇಳೆ ಅಸಮಾನರನ್ನು ಸಮಾನರ ಗುಂಪಿಗೆ ಸೇರಿಸಿದೆ. ಇದು ಸಾಮಾಜಿಕ ನ್ಯಾಯದ ಎಲ್ಲ ಮಾನದಂಡಗಳ, ಸುಪ್ರೀಂಕೋರ್ಟ್‌ನ ಮಾರ್ಗದರ್ಶನದ ಉಲ್ಲಂಘನೆಯಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಒಂದು ಸಮುದಾಯ ಹಸಿವಿನಿಂದ ಸಾಯುವಾಗ ಊಟ ಸಿಕ್ಕ ಇನ್ನೊಂದು ಸಮುದಾಯ ಸಂಭ್ರಮಿಸುವುದು ತಪ್ಪಾಗುತ್ತದೆ. ಒಳಮೀಸಲಾತಿ ಸಂಭ್ರಮಿಸುವ ಮುನ್ನ ಸಾಮಾಜಿಕ ನ್ಯಾಯಪರವಾಗಿ ಇರುವವರೆಲ್ಲ ಅಲೆಮಾರಿಗಳು, ಅರೆಅಲೆಮಾರಿಗಳ ಹಕ್ಕಿನ ಪರವಾಗಿ ನಿಲ್ಲಬೇಕು. ಸರ್ಕಾರ ಕೂಡಲೇ ಅಲೆಮಾರಿಗಳು, ಅರೆಅಲೆಮಾರಿಗಳನ್ನು ‘ಸಿ’ ಗುಂಪಿನಿಂದ ಪ್ರತ್ಯೇಕಿಸಿ ಹೊಸ ಗುಂಪು ರಚಿಸಿ, ಶೇ1ರಷ್ಟು ಮೀಸಲಾತಿ ನೀಡಬೇಕು’ ಎಂದರು.
ಗೋಷ್ಠಿಯಲ್ಲಿ ಮುಖಂಡ ರಾದ ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ, ಮಹೇಶ ಕೋಕಿಲೆ, ಸೈಬಣ್ಣ ಕೋಟನೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.