ADVERTISEMENT

ಕಲಬುರ್ಗಿ: ವೃದ್ಧ ದಂಪತಿ ನಿರ್ಲಕ್ಷಿಸಿದ ಜಿಮ್ಸ್ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 9 ಮೇ 2020, 9:40 IST
Last Updated 9 ಮೇ 2020, 9:40 IST
ಕಲಬುರ್ಗಿಯ ಜಿಮ್ಸ್‌ನಲ್ಲಿ ವೃದ್ಧರೊಬ್ಬರು ನಿತ್ರಾಣ ಸ್ಥಿತಿಯಲ್ಲಿದ್ದ ತಮ್ಮ ಪತ್ನಿಯನ್ನು ಸ್ಟ್ರೆಚರ್‌ ಮೇಲೆ ಮಲಗಿಸಿ, ತಾವೇ ಎಳೆದುಕೊಂಡು ಹೋದರು
ಕಲಬುರ್ಗಿಯ ಜಿಮ್ಸ್‌ನಲ್ಲಿ ವೃದ್ಧರೊಬ್ಬರು ನಿತ್ರಾಣ ಸ್ಥಿತಿಯಲ್ಲಿದ್ದ ತಮ್ಮ ಪತ್ನಿಯನ್ನು ಸ್ಟ್ರೆಚರ್‌ ಮೇಲೆ ಮಲಗಿಸಿ, ತಾವೇ ಎಳೆದುಕೊಂಡು ಹೋದರು   

ಕಲಬುರ್ಗಿ: ಚಿಕಿತ್ಸೆ ಪಡೆಯಲು ಜಿಮ್ಸ್‌ಗೆ ದಾಖಲಾಗಿದ್ದ ವೃದ್ಧ ದಂಪತಿಯನ್ನು ಅಲ್ಲಿನ ಸಿಬ್ಬಂದಿ ಸಂಪೂರ್ಣ ನಿರ್ಲಕ್ಷ್ಯ ಮಾಡಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.‌

ಅಜ್ಜಿಯೊಬ್ಬರು ಜಿಮ್ಸ್‌ನಲ್ಲಿ ಸ್ಟ್ರೆಚರ್‌ ಮೇಲೆ ನಿತ್ರಾಣವಾಗಿ ಮಲಗಿದ್ದರು. ಸುತ್ತ ಹಲವು ಸಿಬ್ಬಂದಿ ಓಡಾಡುತ್ತಿದ್ದರೂ ಅವರನ್ನು ವಾರ್ಡ್‌ಗೆ ಕರೆದೊಯ್ಯಲು ಯಾರೂ ಸಹಾಯಕ್ಕೆ ಬರಲಿಲ್ಲ. ಕೊನೆಗೆ, ಅವರೊಂದಿಗೆ ಬಂದಿದ್ದ ವೃದ್ಧ ಪತಿಯೇ ಕುಂಟುತ್ತ ಸ್ಟ್ರೆಚರ್‌ ಎಳೆದುಕೊಂಡು ಹೋಗಬೇಕಾಯಿತು. ಈ ವೃದ್ಧ ದಂಪತಿ ಕಷ್ಟ ನೋಡಿದ ವ್ಯಕ್ತಿಯೊಬ್ಬರು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಅಫಜಲಪುರ ತಾಲ್ಲೂಕಿನ ಚಿಂಚೋಳಿ ಗ್ರಾಮದಮಲ್ಲಮ್ಮ ಅವರನ್ನು ಪತಿ ಚಂಪನ್ನ ಅವರು ಮೈ–ಕೈ ನೋವಿನ ಚಿಕಿತ್ಸೆಗಾಗಿ ಜಿಮ್ಸ್‌ಗೆ ಕರೆದುಕೊಂಡು ಬಂದಿದ್ದರು.‌ ಒಪಿಡಿ ಕಾರ್ಡ್‌ ಮಾಡಿಸಿದ ನಂತರ, ಎಕ್ಸ್‌–ರೇ ತೆಗೆಯಲು ಸಿಬ್ಬಂದಿ ವಾರ್ಡ್‌ಗೆ ಕರೆದೊಯ್ದರು. ಎಕ್ಸ್‌–ರೇ ತೆಗೆದ ಬಳಿಕ ಸಿಬ್ಬಂದಿ ಅಜ್ಜಿಯನ್ನು ಅಲ್ಲೇ ಬಿಟ್ಟುಹೋದರು.

ADVERTISEMENT

ತುಂಬ ಹೊತ್ತು ಕಾದು ಕುಳಿತ ಚಂಪನ್ನ ಅವರು ಅಜ್ಜಿ ಮಲಗಿದ್ದ ಸ್ಟ್ರೆಚರ್‌ನ್ನು ತಾವೇ ಎಳೆದುಕೊಂಡು ಒಪಿಡಿ ಕಡೆಗೆ ಹೊರಟರು. ಚಂಪನ್ನ ಅವರಿಗೂ 78 ವರ್ಷ ವಯಸ್ಸಾಗಿದ್ದು ನಡೆದಾಡಲು ಆಗದ ಸ್ಥಿತಿಯಲ್ಲಿದ್ದಾರೆ. ಆದರೂ, ಪತ್ನಿಯನ್ನು ಸ್ಟ್ರೆಚರ್‌ ಮೇಲೆ ಮಲಗಿಸಿಕೊಂಡು ಕುಂಟುತ್ತ ಹೊರಟಿದ್ದ ಅವರ ಸ್ಥಿತಿ ಕಂಡು ಸುತ್ತಲಿನ ಜನ ಮಮ್ಮಲ ಮರುಗಿದರು. ಆದರೆ, ಯಾರೂ ಸಹಾಯಕ್ಕೆ ಬರಲಿಲ್ಲ.‌‌ ವಾರ್ಡ್‌ ತಲುಪಿದ ನಂತರ ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.