ADVERTISEMENT

ಭಕ್ತಿಯ ಸಿಂಚನ; ದಾಸೋಹ ಗುಣ ಅನಾವರಣ

ಶ್ರಾವಣ ಮಾಸದ 3ನೇ ಸೋಮವಾರ: ಶರಣ ಬಸವೇಶ್ವರರ ದೇವಸ್ಥಾನಕ್ಕೆ ಹರಿದು ಬಂದ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 5:27 IST
Last Updated 20 ಆಗಸ್ಟ್ 2024, 5:27 IST
ಶ್ರಾವಣ ಮಾಸದ 3ನೇ ಸೋಮವಾರ ಅಂಗವಾಗಿ ಕಲಬುರಗಿ ಶರಣಬಸವೇಶ್ವರರ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು
ಶ್ರಾವಣ ಮಾಸದ 3ನೇ ಸೋಮವಾರ ಅಂಗವಾಗಿ ಕಲಬುರಗಿ ಶರಣಬಸವೇಶ್ವರರ ಗದ್ದುಗೆಗೆ ವಿಶೇಷ ಅಲಂಕಾರ ಮಾಡಲಾಗಿತ್ತು   

ಕಲಬುರಗಿ: ಒಬ್ಬರು ಸ್ಟೀಲ್‌ ಡಬ್ಬಿ ಬಿಚ್ಚಿ ಸುತ್ತಲಿನವರಿಗೆ ಸಜ್ಜಕ ಹಂಚಿದರು. ಮತ್ತೊಬ್ಬರು ಬುತ್ತಿ ಬಿಚ್ಚಿ ಮೊಸರನ್ನ ಕೊಟ್ಟರು. ಅಲ್ಲಿಂದ ಎರಡು ಹೆಜ್ಜೆ ಮುಂದೆ ಕಾರಿನ ಡಿಕ್ಕಿ ತೆರೆದು ವ್ಯಕ್ತಿಯೊಬ್ಬರು ಬಾಳೆಹಣ್ಣು ಹಂಚುತ್ತಿದ್ದರು. ಅದರ ಎದುರೇ ವಾಹನಗಳಲ್ಲಿ ದೊಡ್ಡ ಬೊಗಾಣಿಗಳನ್ನಿಟ್ಟು ಕೆಲವರು ಪುಲಾವ, ಶಿರಾ ವಿತರಿಸುತ್ತಿದ್ದರು. ಪಕ್ಕದಲ್ಲೇ ಹಾಕಿದ್ದ ಟೆಂಟ್‌ಗಳಲ್ಲಿ ನಿಂತಿದ್ದವರು ಪ್ಲೇಟ್‌ ಹಿಡಿದು ಭಕ್ತರಿಗೆ ಉಣಬಡಿಸಲು ತರಹೇವಾರಿ ಭಕ್ಷ್ಯಗಳೊಂದಿಗೆ ಕಾಯುತ್ತಿದ್ದರು...

ಈ ಭಾಗದ ಆರಾಧ್ಯ ದೈವ ಶರಣಬಸವೇಶ್ವರರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರ ಇಂಥ ದೃಶ್ಯಕಂಡು ಬಂತು.

ಒಂದೆಡೆ ಶಿರಾ–ಉಪ್ಪಿಟ್ಟು, ಮತ್ತೊಂದೆಡೆ ಪುಲಾವ–ಸಾಂಬಾರ್‌, ಅದರ ಪಕ್ಕದಲ್ಲೇ ಗೋದಿ ಹುಗ್ಗಿ, ಮಸಾಲೆ ಅನ್ನ–ಸಾರು, ಅದರ ಪಕ್ಕ ಶಿರಾ... ಹೀಗೆ ವಿವಿಧ ಸಂಘ–ಸಂಸ್ಥೆಗಳು, ಸಾರ್ವಜನಿಕರು ಪೈಪೋಟಿಗೆ ಬಿದ್ದಂತೆ ಭಕ್ತರಿಗೆ ತರಹೇವಾರಿ ಭಕ್ಷ್ಯಗಳನ್ನು ಉಣಬಡಿಸಿ ದಾಸೋಹ ಗುಣ ಮೆರೆದರು. ಅಲ್ಲಲ್ಲಿ ನೀರಿನ ಪ್ಯಾಕೆಟ್‌ಗಳ ವಿತರಣೆಯೂ ಜರುಗಿತು.

ADVERTISEMENT

ಕಣ್ಣಿ‌ ಮಾರ್ಕೆಟ್ ‌ರೈತ ವ್ಯಾಪಾರಿಗಳ ಸಂಘ, ಶರಣ ಬಸವೇಶ್ವರರ ತರುಣ ಸಂಘ, ನವ ಕಲ್ಯಾಣ ಕಟ್ಟಡ ಕಾರ್ಮಿಕರ‌ ಸಂಘ, ಶಿವಭಕ್ತ ತಿಪ್ಪಣ್ಣಗೌಡರು ಸಂಘ, ಶಾಹಬಜಾರನ ಭಾವಗಿ ಪಬ್ಲಿಸಿಟಿ ಟೆಂಟ್ ಹೌಸ್ ಸೇರಿದಂತೆ ಹಲವು ಸಂಘ–ಸಂಸ್ಥೆಗಳು ಟೆಂಟ್‌ ಹಾಕಿ ‘ಪ್ರಸಾದ’ ಉಣಬಡಿಸಿದವು.

ಭಕ್ತಸಾಗರ...:

ಶರಣಬಸವೇಶ್ವರರ ದೇವಸ್ಥಾನದಲ್ಲಿ ಶ್ರಾವಣ ಮಾಸದ 3ನೇ ಸೋಮವಾರ ಭಕ್ತಸಾಗರ ಹರಿದು ಬಂತು. ದಿನವಿಡೀ ದೇವಸ್ಥಾನದ ಆವರಣ ಭಕ್ತರಿಂದ ತುಂಬಿ ತುಳುಕುತ್ತಿತ್ತು. 

ದೇವಸ್ಥಾನದಲ್ಲಿ ನಸುಕಿನಿಂದಲೇ ವಿಶೇಷ ಅಭಿಷೇಕ, ಆರತಿ, ನೈವೇದ್ಯ ಅರ್ಪಣೆ, ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಜರುಗಿದ ಪಲ್ಲಕ್ಕಿ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ನಸುಕಿನ ಜಾವದ ಮೊದಲ ಪೂಜೆಯ ಬಳಿಕ ಭಕ್ತರ ದರುಶನಕ್ಕೆ ಅವಕಾಶ ಕಲ್ಪಿಸಲಾಯಿತು. ಹೊತ್ತು ತಿರುಗಿದಂತೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ನಗರ ಮಾತ್ರವಲ್ಲದೇ ಜಿಲ್ಲೆಯ ವಿವಿಧ ತಾಲ್ಲೂಕುಗಳು, ನೆರೆಯ ಜಿಲ್ಲೆಗಳ ಭಕ್ತರೂ ಭೇಟಿ ನೀಡಿ ಶರಣಬಸವೇಶ್ವರರ ದರುಶನ ಪಡೆದು ‍ಪುನೀತರಾದರು. ಹಲವರು ಬಿಲ್ವಪತ್ರೆ, ತೆಂಗಿನಕಾಯಿ, ಕರ್ಪೂರ, ಪುಷ್ಪಗಳನ್ನು ಅರ್ಪಿಸಿ ಭಕ್ತಿ ಮೆರೆದರು. ಕೆಲವರು ದೀರ್ಘ ದಂಡ ನಮಸ್ಕಾರ ಹಾಕಿ ಭಕ್ತಿ ಅರ್ಪಿಸಿದರು.

ತೆಂಗು, ಪತ್ರಿ, ಪುಷ್ಪಕ್ಕೆ ಬೇಡಿಕೆ:

ದೇವಸ್ಥಾನ ಆವರಣದಲ್ಲಿ ಬಿಲ್ವಪತ್ರೆ, ತೆಂಗಿನಕಾಯಿ, ವಿವಿಧ ಬಗೆಯ ಪುಷ್ಪಗಳ ಮಾರಾಟ ಜೋರಾಗಿತ್ತು. ಭಕ್ತರು ಬಿಲ್ವ ಪತ್ರೆ, ಕಾಯಿ–ಕರ್ಪೂರ ಕೊಂಡು ಶರಣಬಸವೇಶ್ವರರ ದರುಶನಕ್ಕೆ ಸಾಲುಗಟ್ಟುತ್ತಿದ್ದ ದೃಶ್ಯ ಕಂಡು ಬಂತು.

ಸಂಚಾರ ನಿಯಂತ್ರಣ:

ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳುವ ಮುಖ್ಯ ಮಾರ್ಗವಾದ ಗೋವಾ ಹೋಟೆಲ್ ಹತ್ತಿರದಿಂದ ಲಾಲಗೇರಿ ಕ್ರಾಸ್‌ವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಎರಡೂ ಬದಿಯಲ್ಲಿ ಬ್ಯಾರಿಕೇಡ್‌ ಇಟ್ಟು ವಾಹನಗಳ ಸಂಚಾರ ತಡೆಯಲಾಗಿತ್ತು. ಪೊಲೀಸರು ಸ್ಥಳದಲ್ಲಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಿ ಭಕ್ತರಿಗೆ ಅನುವು ಮಾಡಿಕೊಟ್ಟರು.

ಆರೋಗ್ಯ ಶಿಬಿರ:

ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದಿಂದ ಸಾರ್ವಜನಿಕರ ಆರೋಗ್ಯ‌ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಕಲಬುರಗಿಯ ಶರಣ ಬಸವೇಶ್ವರರ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಪ್ರಸಾದ ಉಣಬಡಿಸಲಾಯಿತು
ಶ್ರಾವಣ ಮಾಸದ 3ನೇ ಸೋಮವಾರದ ಅಂಗವಾಗಿ ಕಲಬುರಗಿಯ ಶರಣಬಸವೇಶ್ವರರ ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ಬಂದ ಜೇವರ್ಗಿ ತಾಲ್ಲೂಕಿನ ಸಂಗಮೇಶ್ವರ ಭಜನಾ ಮಂಡಳಿಯ ಗುಡೂರು(ಎಸ್‌.ಎ) ಭಕ್ತರು
ಶರಣ ಬಸವೇಶ್ವರರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ಸಾಲುಗಟ್ಟಿದ್ದ ಭಕ್ತರು

Highlights - null

Cut-off box - ದರ್ಶನಕ್ಕೆ ಉದ್ದುದ್ದ ಸಾಲು ದೇವರ ದರ್ಶನಕ್ಕೆ ಮೂರು ಸಾಲುಗಳ ವ್ಯವಸ್ಥೆ ಮಾಡಲಾಗಿತ್ತು. ಒಂದು ಸಾಲಿನವರು ಹೊರಗಿನಿಂದಲೇ ಕೈಮುಗಿದು ಭಕ್ತಿ ಅರ್ಪಿಸಿದರೆ ಇನ್ನೆರಡು ಸಾಲಿನಲ್ಲಿ ನಿಂತಿದ್ದ ಭಕ್ತರು ಗರ್ಭಗುಡಿಗೆ ತೆರಳಿ ದೇವರಿಗೆ ನಮಿಸಿ ಪುನೀತರಾದರು. ಪಾದಯಾತ್ರೆ ಸೇರಿದಂತೆ ವಿವಿಧ ವಾಹನಗಳ ಮೂಲಕ ಬರುತ್ತಿದ್ದ ಭಕ್ತರು ಸೋರುತ್ತಿದ್ದ ಬೆವರು ಒರೆಸಿಕೊಳ್ಳುತ್ತ ಬಿಸಿಲಿನಲ್ಲಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದಿದ್ದು ವಿಶೇಷವಾಗಿತ್ತು. ‘ಶರಣಬಸವೇಶ್ವರರ ದರ್ಶನ ಪಡೆಯಲು ಎರಡು ತಾಸಿನಿಂದ ಸರದಿ ಸಾಲಿನಲ್ಲಿ ನಿಂತಿರುವೆ. ಇನ್ನೊಂದು ಗಂಟೆಯೊಳಗೆ ದರ್ಶನವಾಗುವ ನಿರೀಕ್ಷೆಯಿದೆ’ ಎಂದು ನೆರೆಯ ಯಾದಗಿರಿ ಜಿಲ್ಲೆಯ ಗುರುಮಿಠಕಲ್‌ ತಾಲ್ಲೂನಿಂದ ಬಂದಿದ್ದ ಇಳಿವಯಸ್ಸಿನ ಮೊಗಲಪ್ಪ ನೀಳಾ ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯಿಸಿದರು. ದೇವಸ್ಥಾನದ ಆವರಣದ ತೆಂಗಿನಕಾಯಿ ಒಡೆಯುವ ಕರ್ಪೂರ ಸುಡುವ ತಾಣಗಳಲ್ಲೂ ಭಕ್ತರ ದಟ್ಟಣೆ ಕಂಡು ಬಂತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.