ADVERTISEMENT

ಟಿಪ್ಪರ್‌ ಹರಿದು ಬೈಕ್‌ ಸವಾರ ಸಾವು

ರಸ್ತೆಯ ಮೇಲೆ ಛಿದ್ರವಾದ ದೇಹ, ದಿಢೀರ್‌ ರಸ್ತೆ ತಡೆ ನಡೆಸಿದ ನಿವಾಸಿಗಳು

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 2:58 IST
Last Updated 7 ಮಾರ್ಚ್ 2021, 2:58 IST
ಮಶಾಕ್‌ಸಾಬ್ ದಸ್ತಗೀರಸಾಬ್‌ ಚೌದ್ರಿ
ಮಶಾಕ್‌ಸಾಬ್ ದಸ್ತಗೀರಸಾಬ್‌ ಚೌದ್ರಿ   

ಜೇವರ್ಗಿ: ಜೇವರ್ಗಿ ತಾಲ್ಲೂಕಿನ ಗಡ್ಡಿಹಳ್ಳದ ಸಮೀಪ ಶನಿವಾರ ರಾತ್ರಿ ಟಿಪ್ಪರ್‌ ಹಾಯ್ದು ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಪ್ಪರ್‌ನ ಚಕ್ರಕ್ಕೆ ಸಿಲುಕಿದ ಬೈಕ್‌ ಸವಾರನ ದೇಹ ಅರ್ಧ ಕಿ.ಮೀ.ವರೆಗೂ ರಸ್ತೆಯಲ್ಲಿ ಎಳೆದಾಡಿದ್ದು, ಛಿದ್ರಛಿದ್ರವಾಗಿ ಹೋಗಿದೆ.

ಜೇವರ್ಗಿ ಪಟ್ಟಣದ ನಿವಾಸಿ ಮಶಾಕ್‌ಸಾಬ್ ದಸ್ತಗೀರಸಾಬ್‌ ಚೌದ್ರಿ (35) ಮೃತಪಟ್ಟವರು. ಮಶಾಕ್‌ಸಾಬ್‌ ಅವರು ಕೆಲಸ ಮುಗಿಸಿಕೊಂಡು ಜೇವರ್ಗಿ ಪಟ್ಟಣದಲ್ಲಿರುವ ತಮ್ಮ ಮನೆ ಕಡೆಗೆ ಹೊರಟಿದ್ದರು.ರಾತ್ರಿ 9 ಗಂಟೆ ಸುಮಾರಿಗೆ ಕಲಬುರ್ಗಿ ಕಡೆಗೆ ಹೊರಟಿದ್ದ ಮರಳು ತುಂಬಿದ ಟಿಪ್ಪರ್‌ ಬೈಕ್‌ಗೆ ಡಿಕ್ಕಿ ಹೊಡೆಯಿತು. ಆದರೂ ಅಪಘಾತದ ಅರಿವೇ ಇಲ್ಲದೇ ಟಿಪ್ಪರ್‌ ಚಾಲಕ ಅರ್ಧ ಕಿ.ಮೀ.ವರೆಗೆ ವಾಹನ ಓಡಿಸಿಕೊಂಡು ಹೋದ.

ಟಿಪ್ಪರ್‌ ಅಡಿಗೆ ಸಿಲುಕಿದ ವ್ಯಕ್ತಿಯ ರುಂಡ– ಮುಂಡ, ಕೈ– ಕಾಲುಗಳು ತುಂಡಾಗಿ ರಸ್ತೆಯಲ್ಲಿ ಬಿದ್ದವು. ಇದನ್ನು ಕಂಡು ಇತರ ವಾಹನ ಚಾಲಕರು ಕೂಗಾಡಿ ಟಿಪ್ಪರ್‌ ನಿಲ್ಲಿಸಿದರು. ಅಪಘಾತದ ವಿಷಯ ತಿಳಿದಾಕ್ಷಣ ಟಿಪ್ಪರ್‌ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ.

ADVERTISEMENT

ಘಟನೆಯನ್ನು ಕಂಡು ಪಟ್ಟಣದ ನಿವಾಸಿಗಳು, ವಾಹನ ಸವಾರರು ದಿಗಿಲುಗೊಂಡರು.

ಪ್ರತಿಭಟನೆ: ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ರಾತ್ರಿ ಏಕಾಏಕಿ ರಸ್ತೆ ತಡೆನಡೆಸಿದರು. ಅಕ್ರಮವಾಗಿ ಮರಳು ಸಾಗಿಸುವ ಟಿಪ್ಪರ್‌ಗಳ ಸಂಚಾರ ಹೆಚ್ಚಾಗಿದ್ದು, ಸಾರ್ವಜನಿಕರ ಜೀವಕ್ಕೆ ಸಂಚಕಾರ ತಂದುದೊಡ್ಡಿವೆ ಎಂದು ಕಿಡಿಕಾರಿದರು.

ಮರಳು ತುಂಬಿದ ಟಿಪ್ಪರ್‌ಗಳು ಪಟ್ಟಣ ಪ್ರವೇಶಿಸದಂತೆ ನಿರ್ಬಂಧ ಹೇರಿ, ಬೈಪಾಸ್ ಮೂಲಕ್ಕೆ ಸಂಚಾರಕ್ಕೆ ಅನುವು ಮಾಡಬೇಕು. ಹದಗೆಟ್ಟುಹೋಗಿರುವ ಮಿನಿ ವಿಧಾನಸೌಧದಿಂದ ರದ್ದೇವಾಡಗಿ ಕ್ರಾಸ್‌ವರೆಗಿನ ರಸ್ತೆ ಸುಧಾರಣೆ ಮಾಡಬೇಕು. ದಾರುಣವಾಗಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ₹ 30 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಅಲ್ಲಾಭಕ್ಷ ಭಗವಾನ, ಮಹಿಬೂಬ್‌ ಇನಾಮದಾರ, ಎಸ್‌ಡಿಪಿಐ ಸಂಘಟನೆ ಅಧ್ಯಕ್ಷ ಮೋಯಿನುದ್ದೀನ್ ಇನಾಮದಾರ, ಜೆಡಿಎಸ್ ಮುಖಂಡರಾದ ಬಾಬಾ ಹನೀಫ್‌, ಸದಾನಂದ ಪಾಟೀಲ, ಇಮ್ರಾನ್‌, ರಫಿಕ್ ತಿರಂದಾಜ್ ಹಲವರು ಪಾಲ್ಗೊಂಡಿದ್ದರು.

ಇನ್‌ಸ್ಪೆಕ್ಟರ್‌ ಸಂಗಮೇಶ ಅಂಗಡಿ ಹಾಗೂ ಸಿಬ್ಬಂದಿ ಪ್ರತಿಭಟನಾಕಾರರನ್ನು ಮನವೊಲಿಸಿದರು. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.