ADVERTISEMENT

ಕೇಂದ್ರಿಯ ವಿ.ವಿ.ಯಲ್ಲಿ ನೃಪತುಂಗ ಅಧ್ಯಯನ ಪೀಠ ಸ್ಥಾಪಿಸುವಂತೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 2:29 IST
Last Updated 3 ಮಾರ್ಚ್ 2021, 2:29 IST
ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಸಿಯಕೆ ಹಂಗಾಮಿ ಕುಲಪತಿ ಪ್ರೊ.ಎಂ.ವಿ. ಅಳಗವಾಡಿ ಅವರಿಗೆ ಮನವಿ ಸಲ್ಲಿಸಿದರು
ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಸಿಯಕೆ ಹಂಗಾಮಿ ಕುಲಪತಿ ಪ್ರೊ.ಎಂ.ವಿ. ಅಳಗವಾಡಿ ಅವರಿಗೆ ಮನವಿ ಸಲ್ಲಿಸಿದರು   

ಕಲಬುರ್ಗಿ: ‘ಕಲಬುರ್ಗಿ ವಿಭಾಗವನ್ನು ತಮ್ಮ ಆಳ್ವಿಕೆಯಿಂದ ಶ್ರೀಮಂತಗೊಳಿಸಿದ ರಾಷ್ಟ್ರಕೂಟರ ಹೆಮ್ಮೆಯ ಅರಸ ಅಮೋಘ ವರ್ಷ ನೃಪತುಂಗರ ಹೆಸರಿನ ಅಧ್ಯಯನ ಪೀಠವನ್ನು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿ.ವಿ.ಯಲ್ಲಿ ಆರಂಭಿಸಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಹಂಗಾಮಿ ಕುಲಪತಿ ಪ್ರೊ.ಎಂ.ವಿ. ಅಳಗವಾಡಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

‘ಕನ್ನಡದ ಮೊದಲು ಗದ್ಯ ಕೃತಿ ಕವಿರಾಜಮಾರ್ಗದ ಮೂಲಕ ಕನ್ನಡ ಭಾಷೆಯ ಪ್ರಾಚೀನ ಪರಂಪರೆಯ ಹಿರಿಮೆಯನ್ನು ಜಗತ್ತಿಗೆ ಸಾರಿದ ರಾಷ್ಟ್ರಕೂಟರು ಆಳಿರುವ ನಾಡಿನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು ನಮ್ಮ ಹೆಮ್ಮೆ. ತನ್ನ ಆಳ್ವಿಕೆಯ ಕಾಲದಲ್ಲಿ ಹಲವಾರು ಜನಪರ ಕೆಲಸಗಳ ಮೂಲಕ ಕಲಬುರ್ಗಿ ನಾಡನ್ನು ಶ್ರೀಮಂತಗೊಳಿಸಿದ ಅರಸ ಅಮೋಘ ವರ್ಷ ನೃಪತುಂಗ. ಕಲೆ, ಸಾಹಿತ್ಯ, ಸಂಸ್ಕೃತಿಗಳ ಪೋಷಕನಾಗಿ ನೃಪತುಂಗ ಮಾಡಿರುವ ಕೆಲಸಗಳು ಅಜರಾಮರ. ಸ್ವತಃ ಕವಿಯೂ ಆಗಿದ್ದ ನೃಪತುಂಗ ತನ್ನ ಆಸ್ಥಾನದಲ್ಲಿ ವಿವಿಧ ಮತಗಳ ಕವಿಗಳು, ಪಂಡಿತರು, ಧರ್ಮ ಪ್ರಸಾರಕರಿಗೆ ಆಶ್ರಯ ನೀಡುವುದರ ಮೂಲಕ ಸಾಹಿತ್ಯ, ಸಂಸ್ಕೃತಿಯ ರಕ್ಷಕನಾಗಿ ಕೆಲಸ ಮಾಡಿದ್ದರು. ಮಳಖೇಡವನ್ನು ರಾಜಧಾನಿಯನ್ನಾಗಿಸಿ ಆಳ್ವಿಕೆ ಮಾಡಿದ ರಾಷ್ಟ್ರಕೂಟ ಅರಸರು ಈ ನೆಲಕ್ಕೆ ನೀಡಿರುವ ಕೊಡುಗೆ ಅಪಾರ. ಆದ್ದರಿಂದ ಕೇಂದ್ರಿಯ ವಿ.ವಿ.ಗೆ ಬರುವ ಭಾರತದ ಅನ್ಯ ರಾಜ್ಯದ ವಿದ್ಯಾರ್ಥಿಗಳಿಗೆ ಈ ನೆಲದ ವೀರನ ಇತಿಹಾಸ ಪರಿಚಯಿಸುವ ಕೆಲಸ ಮಾಡಬೇಕಾಗಿದೆ’ ಎಂದು ಸೇನೆಯ ಕಾರ್ಯಕರ್ತರು ಮನವಿಯಲ್ಲಿ ತಿಳಿಸಿದ್ದಾರೆ.

ಕೇಂದ್ರೀಯ ವಿ.ವಿ.ಯಲ್ಲಿ ಅಮೋಘ ವರ್ಷ ನೃಪತುಂಗ ಹೆಸರಿನ ಅಧ್ಯಯನ ಪೀಠ ಸ್ಥಾಪಿಸುವುದರ ಮೂಲಕ ವಿ.ವಿ. ನೃಪತುಂಗ ಅರಸನನ್ನು ಗೌರವಿಸುವ ಕೆಲಸ ಮಾಡಬೇಕು. ವಿ.ವಿ.ಯ ಆವರಣದಲ್ಲಿ ಆಳೆತ್ತರದ ನೃಪತುಂಗನ ಪ್ರತಿಮೆ ಸ್ಥಾಪಿಸಿ ಅವನ ಸಾಧನೆಗಳನ್ನು ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಕೆತ್ತಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

ADVERTISEMENT

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ದೇಗಾಂವ ಹಾಗೂ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.