ADVERTISEMENT

ಮಳೆಗಾಲದಲ್ಲೂ ಬೇಸಿಗೆ ಅನುಭವ: ಇನ್ನೂ ಒಂದು ವಾರ ಹೆಚ್ಚಲಿದೆ ಧಗೆ

2 ವಾರಗಳಿಂದ ಮಳೆ ಸುರಿಯದೇ ಹೆಚ್ಚಾದ ಶಕೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 2:18 IST
Last Updated 11 ಆಗಸ್ಟ್ 2021, 2:18 IST
ಡಾ.ಶಾಂತಪ್ಪ ದುತ್ತರಗಾವಿ
ಡಾ.ಶಾಂತಪ್ಪ ದುತ್ತರಗಾವಿ   

ಕಲಬುರ್ಗಿ: ಎರಡೇ ವಾರಗಳ ಹಿಂದೆ ಧಾರಾಕಾರ ಮಳೆ ಎದುರಿಸಿದ ಜಿಲ್ಲೆಯ ಜನ ಈಗ ವಿಪರೀತ ಧಗೆಯಿಂದ ಬಳಲು
ವಂತಾಗಿದೆ. ಆಗಸ್ಟ್‌ 2ಕ್ಕೆ ಆರಂಭವಾದ ಆಶ್ಲೇಷಾ ಮಳೆಯ ದಿನಗಳು ಆರಂಭ
ವಾಗಿದ್ದರೂ ಒಂದು ಹನಿಯೂ ಬಿದ್ದಿಲ್ಲ. ಇದರಿಂದ ಸಹಜವಾಗಿಯೇ ಜನ ಮಳೆಗಾಲದಲ್ಲೂ ಬೇಸಿಗೆ ಅನುಭವಕ್ಕೆ ಮರಳಿದ್ದಾರೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡಿದ್ದರಿಂದ ಕಲಬುರ್ಗಿ, ಬೀದರ್, ಯಾದಗಿರಿ ಹಾಗೂ ರಾಯ
ಚೂರು ಜಿಲ್ಲೆಗಳಲ್ಲಿ ಜುಲೈ 18ರಿಂದ 24ರವರೆಗೆ ಧಾರಾಕಾರ ಮಳೆ ಸುರಿಯಿತು. ಬಂಗಾಳ ಕೊಲ್ಲಿಯ ಹವಾ
ಮಾನದಲ್ಲಿ ಉಂಟಾಗುವ ವ್ಯತ್ಯಾಸ ಕಲ್ಯಾಣ ಕರ್ನಾಟಕ ಭಾಗದ ಈ ನಾಲ್ಕೂ ಜಿಲ್ಲೆಗಳಿಗೆ ನೇರವಾಗಿ ಪರಿಣಾಮ ಬೀರು
ವುದು ಸಹಜ. ಇದರಿಂದ ಅತಿವೃಷ್ಟಿ ಸಂಭವಿಸಿ ಅಪಾರ ಬೆಳೆ ಕೂಡ ಹಾನಿಯಾಗಿದೆ.

ಆಗಸ್ಟ್‌ 2ರಿಂದ ಆಶ್ಲೇಷಾ ಮಳೆ ಆರಂಭವಾಗಿದ್ದು ಆಗಸ್ಟ್‌ 15ರವರೆಗೂ ಇರಲಿದೆ. ಸಾಧಾರಣವಾಗಿ ತುಂತುರಾಗಿ ಬೀಳುವುದು ಈ ಮಳೆಯ ಲಕ್ಷಣ. ಆದರೆ, ಈ ಬಾರಿ ವಾಡಿಕೆಯಷ್ಟು ಮಳೆ ಕೂಡ ಬೀಳಲಿಲ್ಲ. ಎರಡು ವಾರಗಳಿಂದ ಭೂಮಿಗೆ ನಿರಂತರವಾಗಿ ಬಿಸಿಲಿನ ತಾಪ ತಾಗಿದೆ. ಇದರಿಂದ ಗಾಳಿಯ ವೇಗವೂ ಕಡಿಮೆಯಾಗಿದ್ದು, ಅಪಾರ ಪ್ರಮಾಣದ ಧಗೆ ಉಂಟಾಗುತ್ತಿದೆ ಎನ್ನುವುದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಹವಾಮಾನ ವಿಭಾಗದ ತಾಂತ್ರಿಕ ಅಧಿಕಾರಿ ಡಾ.ಶಾಂತಪ್ಪ ಧುತ್ತರಗಾವಿ ಅವರ ಹೇಳಿಕೆ.

ADVERTISEMENT

ಈ ರೀತಿಯ ಉರಿ ತಾಪಮಾನದ ವಾತಾವರಣ ಆಗಸ್ಟ್‌ 15ರವರೆಗೆ ಮಾತ್ರ ಇರಲಿದೆ. ಆಗಸ್ಟ್‌ 16ರಿಂದ ಮಾಗಿ ಮಳೆ (ಮಗಿಮಳೆ) ಆರಂಭವಾಗಲಿದೆ. ಈ ಬಾರಿ ಮಾಗಿ ಕೂಡ ವಾಡಿಕೆಗಿಂತ ಹೆಚ್ಚು ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆಗ ಮತ್ತೆ ವಾತಾವರಣದಲ್ಲಿ ತೇವಾಂಶ ಹೆಚ್ಚಲಿದೆ ಎಂದೂ ಅವರು ತಿಳಿಸಿದ್ದಾರೆ.

ಅನುಕೂಲ, ಅನನುಕೂಲ ಎರಡೂ ಇದೆ: ಸದ್ಯ ಹೆಚ್ಚು ಬಿಸಿಲಿನ ವಾತಾವರಣ ಇರುವ ಕಾರಣ ಹೆಸರು ರಾಶಿ ಮಾಡುವವರಗೆ ಅನುಕೂಲವಾಗಲಿದೆ. ಕಳೆದ ಬಾರಿ ಇದೇ ಸಂದರ್ಭದಲ್ಲಿ ಆಶ್ಲೇಷಾ ಮಳೆ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ಹೆಸರು ಹಾಳಾಗಿತ್ತು. ಇನ್ನೂ ಐದು ದಿನ ಒಣಹವೆ ಮುಂದುವರಿಯುವ ಕಾರಣ ಹೆಸರು ಬೆಳೆದ ರೈತರು ಸುರಕ್ಷಿತವಾಗಿ ರಾಶಿ ಮಾಡಿಕೊಂಡು ಪಾರಾಗಲಿದ್ದಾರೆ.‌ ಈಗಾಗಲೇ ಕಲಬುರ್ಗಿ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಕಾಳಗಿ, ಕಮಲಾಪುರ, ಸೇಡಂ, ಯಡ್ರಾಮಿ, ಅಫಜಲ
ಪುರ ತಾಲ್ಲೂಕುಗಳಲ್ಲಿ ಹೆಸರು ರಾಶಿ ಆರಂಭವಾಗಿದೆ. ಆದರೆ, ಹತ್ತಿ, ತೊಗರಿ, ಸೂರ್ಯಕಾಂತಿ ಹೊಲಗಳಲ್ಲಿ ತೇವಾಂಶ ಸಂಪೂರ್ಣ ಕಡಿಮೆಯಾಗಿದ್ದು, ಬೆಳೆಗಳು ಒಣಗುವ ಸಾಧ್ಯತೆ ಹೆಚ್ಚು. ಹಾಗಾಗಿ, ಈ ವಾರದಲ್ಲೇ ಮಳೆ ಬಿದ್ದರೆ ಮಾತ್ರ ಉತ್ತಮ ಇಳುವರಿ ನಿರೀಕ್ಷಿಸಲು ಸಾಧ್ಯ ಎನ್ನುತ್ತಾರೆ ಕಲಬುರ್ಗಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು.

ಮಳೆ ಕಡಿಮೆ, ಧಗೆ ಹೆಚ್ಚು

ಆಗಸ್ಟ್‌ 3ರಿಂದ 9ರವರೆಗೆ ಕಲಬುರ್ಗಿ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 25 ಡಿಗ್ರಿ ಹಾಗೂ ಗರಿಷ್ಠ 35 ಡಿಗ್ರಿ ದಾಖಲಾಗಿದೆ. ಆಗಸ್ಟ್‌ 10ರಂದು ಕೂಡ ಕನಿಷ್ಠ 24– ಗರಿಷ್ಠ 34 ಡಿಗ್ರಿಯಷ್ಟು ತಾಪಮಾಣ ಹೆಚ್ಚಾಗಿದೆ. ಕಳೆದ ವರ್ಷ ಇದೇ ದಿನಕ್ಕೆ ಕನಿಷ್ಠ 21.1 ಹಾಗೂ ಗರಿಷ್ಠ 32 ಡಿಗ್ರಿ ಉಷ್ಣಾಂಶ ಇತ್ತು. ಅಲ್ಲದೇ 2020ರಲ್ಲಿ ಆಗಸ್ಟ್‌ 25ರವರೆಗೆ 174 ಮಿ.ಮೀ ಮಳೆ ಸುರಿದಿತ್ತು. ಈ ಬಾರಿ ಇದೂವರೆಗೆ 11.9 ಮಿ.ಮೀ ಮಾತ್ರ ಸುರಿದಿದೆ ಎಂದೂ ಹವಾಮಾನ ಇಲಾಖೆಯ ದಾಖಲೆಗಳು ತಿಳಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.