ADVERTISEMENT

ನಿಂಬಾಳ: ಕರಣಿ ಸಿದ್ದೇಶ್ವರರ ಜಾತ್ರೆ 26ರಂದು ಪಲ್ಲಕ್ಕಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 24 ಮೇ 2025, 14:40 IST
Last Updated 24 ಮೇ 2025, 14:40 IST
ಕರಣಿ ಸಿದ್ದೇಶ್ವರರು
ಕರಣಿ ಸಿದ್ದೇಶ್ವರರು   

ಕಲಬುರಗಿ: ಆಳಂದ ತಾಲ್ಲೂಕಿನ ಸುಕ್ಷೇತ್ರ ನಿಂಬಾಳ ಗ್ರಾಮದ ಕರಣಿ ಸಿದ್ಧೇಶ್ವರ ಹಿರಿಯ ಬಾದಾಮಿಯ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಮೇ 26ರಂದು ಬೆಳಿಗ್ಗೆ 6ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.

ಪಲ್ಲಕ್ಕಿ ಮೆರವಣಿಗೆಯ ಜೊತೆಗೆ ಭಕ್ತರಿಗೆ ದರ್ಶನ ನೀಡುತ್ತಾ ಬಸವನ ಸಂಗೊಳಗಿ ಗ್ರಾಮಕ್ಕೆ ಗಂಗಾಸ್ನಾನಕ್ಕೆ ತೆರಳುವ ಕಾರ್ಯಕ್ರಮದೊಂದಿಗೆ ಅದೇ ದಿನದಂದು ರಾತ್ರಿ 8 ಗಂಟೆಗೆ  ದೇವರು ಹಸಿ ಕೊಡುವ ಕಾರ್ಯಕ್ರಮ ನೆರವೇರಲಿದೆ. ಮೇ 27ರಂದು ನಸುಕಿನ 4ಕ್ಕೆ ಕರಣಿ ಸಿದ್ಧೇಶ್ವರರ ಗದ್ದುಗೆಗೆ ಅಭಿಷೇಕ–ಭಂಡಾರ ಪೂಜೆ, ವೀಳ್ಯದೆಲೆ ಪೂಜೆ ನೆರವೇರಲಿದೆ. ಇದಾದ ಬಳಿಕ ಲಿಂಗೈಕ್ಯ ಸಿದ್ಧರತ್ನ ಮದಗೊಂಡೇಶ್ವರ ಮಹಾರಾಜರ 15ನೇ ಪುಣ್ಯಸ್ಮರಣೆ ನಡೆಯಲಿದೆ.

ಮೇ 27ರಂದು ಸಂಜೆ 4 ಗಂಟೆಗೆ ಸತ್ಯ ಸಿದ್ಧರ ಪಲ್ಲಕ್ಕಿ ಭೆಟ್ಟಿ ನೆರವೇರಲಿದ್ದು, ಈ ವೇಳೆ, ವಿವಿಧ ಸೋಲಾಪುರ, ಜತ್ತ ತಾಲ್ಲೂಕಿನ ವಿವಿಧ ಗ್ರಾಮಗಳ ಪಲ್ಲಕ್ಕಿಗಳು ಒಂದೆಡೆ ಸಂಧಿಸಲಿವೆ. ಅಂದು ರಾತ್ರಿ ಸುಪ್ರಸಿದ್ಧ ಕಲಾವಿದರಿಂದ ಡೊಳ್ಳಿನ ಪದಗಳ ಗಾಯನ ನಡೆಯಲಿದೆ.

ADVERTISEMENT

ಮೇ 28ರಂದು ನಸುಕಿನ 4ಕ್ಕೆ ಕರಣಿ ಸಿದ್ಧೇಶ್ವರ ದೇವರ ಗದ್ದುಗೆಯ ಒಡೆಯರಿಂದ ಹಾಗೂ ಈರಕಾರ ಮುತ್ಯಾ ಕೇರೂರ ಅವರಿಂದ ‘ಭವಿಷ್ಯವಾಣಿ’ ನಡೆಯಲಿದ್ದು, ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಆಗಮನ ಆಗಲಿದೆ. ನಾಟಕ ಪ್ರದರ್ಶನ ಮೇ 28ರಂದು ರಾತ್ರಿ 10ಕ್ಕೆ ಸಾಂಗ್ಲಿ ಜಿಲ್ಲೆ ಜತ್ತ ತಾಲ್ಲೂಕಿನ ಚೀವೂರ ಗ್ರಾಮದ ವೀರ ಮಲಕಾರಿ ಸಿದ್ಧೇಶ್ವರ ನಾಟ್ಯ ಸಂಘದ ಸದಸ್ಯರಿಂದ ಅಮೋಘ ಸಿದ್ಧೇಶ್ವರ ಮಹಾತ್ಮೆ ಅರ್ಥಾತ್ ಭಂಡಾರ ಮಹಿಮೆ ನಾಟಕ ಪ್ರದರ್ಶನ ನಡೆಯಲಿದೆ.

ಮೇ 29ರಂದು ಬೆಳಗ್ಗೆ 9 ಗಂಟೆಗೆ ಸತ್ಯ ಸಿದ್ಧರ ಪಲ್ಲಕ್ಕಿ ಅಗಲುವ ಕಾರ್ಯಕ್ರಮ ಜರುಗಲಿದೆ. ಜಾತ್ರೋತ್ಸವದ ಪ್ರಯುಕ್ತ ಈ ಎಲ್ಲ ದಿನಗಳಂದು ನಿತ್ಯ ಮಹಾಪ್ರಸಾದ ವ್ಯವಸ್ಥೆ ಇರಲಿದ್ದು, ವಿವಿಧೆಡೆಗಳಿಂದ ವಾಲಗ-ಡೊಳ್ಳುಗಳು, ಹಲಗೆಗಳು ಆಗಮಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.