ಜೇವರ್ಗಿ: ಲೋಕ ಕಲ್ಯಾಣಾರ್ಥವಾಗಿ ತಾಲ್ಲೂಕಿನ ಸುಕ್ಷೇತ್ರ ಗಂವ್ಹಾರ ಗ್ರಾಮದಿಂದ ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರಿನವರೆಗೆ ಐತಿಹಾಸಿಕ ಪಾರಂಪರಿಕ ಪಾದಯಾತ್ರೆಗೆ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಮಂಗಳವಾರ ಚಾಲನೆ ನೀಡಲಾಯಿತು.
ಅಬ್ಬೆತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಹಾಗೂ ಶಿವಶೇಖರ ಸ್ವಾಮೀಜಿ ನೇತೃತ್ವದಲ್ಲಿ ಸುಕ್ಷೇತ್ರ ಗಂವ್ಹಾರದ ತೋಪಕಟ್ಟಿ ಹಿರೇಮಠದಿಂದ ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರು ವಿಶ್ವಾರಾಧ್ಯರ ಮಠದವರೆಗೆ 40ನೇ ವರ್ಷದ ಪಾದಯಾತ್ರೆಯಲ್ಲಿ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶದ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಮಂಗಳವಾರ ಬೆಳಿಗ್ಗೆ ಗಂವ್ಹಾರದ ಬನ್ನಿಬಸವೇಶ್ವರರ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು. ಮಧ್ಯಾಹ್ನ 1 ಗಂಟೆಗೆ ತೋಪಕಟ್ಟಿ ಹಿರೇಮಠದಿಂದ ಪ್ರಾರಂಭಗೊಂಡ ಪಾದಯಾತ್ರೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಪಾದಯಾತ್ರೆಯಲ್ಲಿ ಡೊಳ್ಳು ಕುಣಿತ, ಭಜನಾ ತಂಡಗಳು, ನೆರೆಯ ರಾಜ್ಯದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿ ಕಲಾ ಪ್ರದರ್ಶನ ನೀಡಿದವು. ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪೂರ, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ರಾಜಕುಮಾರ ಪಾಟೀಲ ತೇಲ್ಕೂರ ಪಾದಯಾತ್ರೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪುರವಂತರ ಸೇವೆ ಎಲ್ಲರ ಗಮನ ಸೆಳೆಯಿತು.
ಗಂವ್ಹಾರದಿಂದ ಹೊರಟ ಪಾದಯಾತ್ರೆ ಮುಂದೆ ಸಾಗಿ, ಸಂಜೆ ಅಣಬಿ ಗ್ರಾಮ ತಲುಪಿತು. ನಂತರ ಶಿರವಾಳ ಗ್ರಾಮದ ಮಾರ್ಗವಾಗಿ ಹೊರಟ ಪಾದಯಾತ್ರೆಯು ಹುರಸಗುಂಡಗಿ ಮೂಲಕ ಸನ್ನತಿ ಚಂದ್ರಲಾ ಪರಮೇಶ್ವರಿ ದೇವಸ್ಥಾನ ತಲುಪಿದ ನಂತರ ಅಲ್ಲಿ ದೇವಿಗೆ ವಿಶೇಷಪೂಜೆ ನೆರವೇರಿಸಿ ಅಲ್ಲಿಯೇ ವಾಸ್ತವ್ಯ ಮಾಡಲಾಯಿತು.
ಬುಧವಾರ ಪಾದಯಾತ್ರೆ ಕನಗಾನಹಳ್ಳಿ, ಊಳವಂಡಗೇರಾ, ಬನ್ನೆಟ್ಟಿ ಗ್ರಾಮ ದಾಟಿದ ನಂತರ ವಿಶ್ವಾರಾಧ್ಯರ ದರ್ಶನ ಕಟ್ಟೆ ತಲುಪುವುದು. ಬಳಿಕ ತಳಕ ಗ್ರಾಮದ ಗ್ರಾಮದೇವತೆ ಹಾಗೂ ವೀರಾಂಜನೇಯ ಸ್ವಾಮಿ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿ ಹೆಡಗಿಮುದ್ರಾ ತಲುಪಲಾಗುವುದು. ಹೆಡಗಿಮದ್ರಾ ಮಠದಲ್ಲಿ ರಾತ್ರಿ ಇಡೀ ಭಜನೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಗುರುವಾರ ಅಮಾವಾಸ್ಯೆಯ ವಿಶೇಷ ಪೂಜಾ ವಿಧಾನಗಳನ್ನು ಪಲ್ಲಕ್ಕಿ ಮೂರ್ತಿ ಗಂಗಾಸ್ನಾನ ನೆರವೇರಿಸಿಕೊಂಡು ಪಾದಯಾತ್ರೆ ಠಾಣಗುಂದಿ ತಲುಪಲಿದೆ. ಬಳಿಕ ಅಬ್ಬೆತುಮಕೂರು ವಿಶ್ವಾರಾಧ್ಯರ ಪಾದಗಟ್ಟೆ ಮುಟ್ಟುವುದು. ಸಂಜೆ 6ಕ್ಕೆ ಸಮಸ್ತ ಭಕ್ತರು, ನಾಡಿನ ವಿವಿಧ ಮಠಾಧೀಶರು, ಸಚಿವರು, ಶಾಸಕರು, ರಾಜಕೀಯ ಮುಖಂಡರು, ಪಾದಯಾತ್ರೆಯನ್ನು ಭಕ್ತಿ ಸಡಗರಗಳಿಂದ ಬರಮಾಡಿಕೊಂಡು ಪಾದಗಟ್ಟೆಯಿಂದ ವಿಶ್ವಾರಾಧ್ಯರ ದೇವಸ್ಥಾನದವರೆಗೆ ವಿಶೇಷ ಮೆರವಣಿಗೆಯಲ್ಲಿ ಕರೆದೊಯ್ಯುವರು.
ಪಾದಯಾತ್ರೆಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ರಾಜಶೇಖರ ಸಾಹು ಸೀರಿ, ಮಲ್ಲಿನಾಥಗೌಡ ಯಲಗೋಡ, ಕಾಶೀರಾಯಗೌಡ ಯಲಗೋಡ, ದಿವ್ಯಾ ಹಾಗರಗಿ, ಕಲ್ಯಾಣಪ್ಪ ಸನ್ನತ್ತಿ, ವಿಜಯಕುಮಾರ ಪೊಲೀಸ್ ಪಾಟೀಲ, ಬಸವರಾಜಗೌಡ ಪೊಲೀಸ್ ಪಾಟೀಲ, ದೊಡ್ಡಪ್ಪಗೌಡ ಮಾಲಿಪಾಟೀಲ, ಕಲ್ಯಾಣಕುಮಾರ ಸಂಗಾವಿ, ಸಿದ್ದು ಪಾಟೀಲ ಮಳಗಿ, ನಿಂಗಣ್ಣ ದೊಡ್ಮನಿ, ವಿಜಯಕುಮಾರ ಪಾಟೀಲ ಹರನೂರ, ನಾಗರಾಜ ಸಾಹು ರೆಡ್ಡಿ, ಈರಣ್ಣಗೌಡ ಮದಗೊಂಡ, ಮೋಹನಗೌಡ ಪಾಟೀಲ, ಸೋಮಶೇಖರ್ ಕಕ್ಕೇರಿ, ರಾಜಶೇಖರ ಹೇರೂಂಡಿ ಸೇರಿದಂತೆ ಸಹಸ್ರಾರು ಜನ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.