ADVERTISEMENT

ಆಳಂದ | ಹದಗೆಟ್ಟ ರಸ್ತೆ: ಹೊಂಡಗಳದ್ದೇ ಕಾರುಬಾರು

ಹದಗೆಟ್ಟ ನಿಂಬಾಳ ಸಂಪರ್ಕ ರಸ್ತೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 5:09 IST
Last Updated 11 ಸೆಪ್ಟೆಂಬರ್ 2024, 5:09 IST
 ಆಳಂದ ತಾಲ್ಲೂಕಿನ ನಿಂಬಾಳ ಮತ್ತು ಚಲಗೇರಾ ಸಂಪರ್ಕ ರಸ್ತೆಯಲ್ಲಿ ಹೊಂಡಗಳು ಬಿದ್ದು ರಸ್ತೆ ಸಂಪೂರ್ಣ ಹದಗೆಟ್ಟ ದೃಶ್ಯ
 ಆಳಂದ ತಾಲ್ಲೂಕಿನ ನಿಂಬಾಳ ಮತ್ತು ಚಲಗೇರಾ ಸಂಪರ್ಕ ರಸ್ತೆಯಲ್ಲಿ ಹೊಂಡಗಳು ಬಿದ್ದು ರಸ್ತೆ ಸಂಪೂರ್ಣ ಹದಗೆಟ್ಟ ದೃಶ್ಯ   

ಆಳಂದ: ತಾಲ್ಲೂಕಿನ ಮಾದನ ಹಿಪ್ಪರಗಿಯಿಂದ ನೇರವಾಗಿ ನೆರೆಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ನಿಂಬಾಳ-ಚಲಗೇರಾ ಸಂಪರ್ಕ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ನಿರಂತರ ಮಳೆಗೆ ರಸ್ತೆಯಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ಸವಾರರು ಸಂಚಾರಕ್ಕಾಗಿ ಪರದಾಡುವಂತಾಗಿದೆ.

ಮಾದನ ಹಿಪ್ಪರಗಿಯಿಂದ ದುಧನಿ–ಅಫಜಲಪುರ–ವಿಜಯಪುರದ ಕಡೆ ಹೋಗುವ ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆ ಸಂಪೂರ್ಣವಾಗಿ ಕಿತ್ತು ಹೋದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರಾಜಕುಮಾರ ಘೂಳ ಆರೋಪಿಸಿದರು.

‘ವಾರದ ಹಿಂದೆ ನಿಂಬಾಳ ಗ್ರಾಮದ ರೈತ ಮುಖಂಡ ಸುರೇಶ ನಂದೇಣಿಯವರು ಈ ರಸ್ತೆಯಲ್ಲಿ ತೆರಳುತ್ತಿದ್ದಾಗ ಬಿದ್ದು ಗಾಯಗೊಂಡಿದ್ದಾರೆ. ಕಳೆದ ಶನಿವಾರದಂದು ಆಕಾಶ ನಡುವಿನಕೇರಿ ಎಂಬ ಯುವಕ ದ್ವಿಚಕ್ರ ವಾಹನದಲ್ಲಿ ನಿಂಬಾಳದಿಂದ ದುಧನಿ ರಸ್ತೆಯ ಹೊಂಡದಲ್ಲಿ ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ. ಆತನನ್ನು ಚಿಕಿತ್ಸೆಗಾಗಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ನಿಂಬಾಳದಿಂದ ಮಾದನಹಿಪ್ಪರಗಿಗೆ ನೂರಾರು ರೈತರು ಹಾಗೂ ಸಾರ್ವಜನಿಕರು ಬ್ಯಾಂಕ್‌ಗೆ, ರೈತ ಸಂಪರ್ಕ ಕೇಂದ್ರಕ್ಕೆ, ನೆಮ್ಮದಿ ಕೇಂದ್ರಕ್ಕೆ, ಆಸ್ಪತ್ರೆಗಳಿಗೆ ಬರುತ್ತಾರೆ. ವಾರದ ಹಿಂದೆ ನಿಂಬಾಳ ನಿವಾಸಿ ಲಕ್ಷ್ಮಣ ಮತ್ತು ಶಂಕರ ಎಂಬುವರು ಪೊಲೀಸ್ ಠಾಣೆಗೆ ಬಂದು ರಾತ್ರಿ ವಾಪಸ್ ಹೋಗುವಾಗ ಬಿದ್ದಿರುವ ಘಟನೆ ನಡೆದಿದೆ.

ಮಾದನಹಿಪ್ಪರಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಂದು ಇಬ್ಬರು ಗರ್ಭಿಣಿಯರು ಜೀಪಿನಲ್ಲಿ ಬರುವಾಗ ದಾರಿ ಮದ್ಯದಲ್ಲಿಯೇ ಹೆರಿಗೆ ಆಗಿದೆ. ನಿಂಬಾಳ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈಗ ರೈತರು ತಾವು ಬೆಳೆದ ಖರೀಫ ಬೆಳೆಗಳನ್ನು ದುಧನಿಯ ಕೃಷಿ ಮಾರುಕಟ್ಟೆಗೆ ಸಾಗಿಸುವುದೇ ಒಂದ ದೊಡ್ಡ ಸಾಹಸವಾಗಿದೆ.

ಸಾರ್ವಜನಿಕರ ಗಂಭೀರವಾದ ಸಮಸ್ಯೆಯೆಂದು ಪರಿಗಣಿಸಿ ಕೂಡಲೆ ಯಾವುದೋ ಒಂದು ಯೋಜನೆಯಡಿಯಲ್ಲಿ ಮಾದನಹಿಪ್ಪರಗಿ ಖಾಸ ಹಳ್ಳದಿಂದ ನಿಂಬಾಳ ದುಧನಿಯ ೮ ಕಿ,ಮೀ ರಸ್ತೆ ನಿರ್ಮಿಸಬೇಕು. ನಿರ್ಲಕ್ಷಿಸಿದರೆ ಚಲಗೇರಾ ನಿಂಬಾಳ ಗ್ರಾಮಸ್ಥರು ಸೇರಿ ರಸ್ತಾ ತಡೆ ಚಳುವಳಿ ಮಾಡಲಾಗುವದೆಂದು ಆಳಂದ ತಾಲೂಕ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ರಾಜಕುಮಾರ ಗೂಳ ಎಚ್ಚರಿಕೆ ಕೊಟ್ಟಿದ್ದಾರೆ.

ತಾ.ಪಂ ಮಾಜಿ ಸದಸ್ಯ ಬಸವರಾಜ ಸಾಣಕ, ಗಿರಿರಾಜ ಪಾಟೀಲ, ವಿಜಯಕುಮಾರ ಗುಳಗಿ, ಮಲ್ಲಿನಾಥ ಸಿಂಗೆ, ಲಕ್ಷ್ಮಣ ಹೋಳಿಕೇರಿ, ಅಪ್ಪಾರಾಯ ಹೋಳಿಕೇರಿ, ಹಣಮಂತ ವಾಲಿಕಾರ ಹಾಜರಿದ್ದರು.

 ಆಳಂದ ತಾಲ್ಲೂಕಿನ ನಿಂಬಾಳ ಮತ್ತು ಚಲಗೇರಾ ಸಂಪರ್ಕ ರಸ್ತೆಯಲ್ಲಿ ಹೊಂಡಗಳು ಬಿದ್ದು ರಸ್ತೆ ಸಂಪೂರ್ಣ ಹದಗೆಟ್ಟ ದೃಶ್ಯ
ನಿಂಬಾಳ-ಚಲಗೇರಾ ರಸ್ತೆಯಲ್ಲಿ ಮಳೆಯಿಂದಾಗಿ ಹೊಂಡ ನಿರ್ಮಾಣವಾಗಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಕ್ಷಣ ರಸ್ತೆ ದುರಸ್ತಿಗೊಳಿಸಬೇಕು
ರಾಜಕುಮಾರ ಘೂಳ ಅಧ್ಯಕ್ಷ ಬಿಜೆಪಿ ಎಸ್‌ಸಿ ಮೋರ್ಚಾ ಆಳಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.