ADVERTISEMENT

ಪಿಡಿಎ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಫೆ.21, 22 ರಂದು: ಶಶೀಲ್‌ ನಮೋಶಿ

ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್‌ ನಮೋಶಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:48 IST
Last Updated 19 ಫೆಬ್ರುವರಿ 2026, 4:48 IST
ಶಶೀಲ್‌ ನಮೋಶಿ
ಶಶೀಲ್‌ ನಮೋಶಿ   

ಕಲಬುರಗಿ: ನಗರದ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಹಳೇ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನ ಫೆಬ್ರುವರಿ 21 ಹಾಗೂ 22ರಂದು ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್‌ ನಮೋಶಿ ಹೇಳಿದರು.

‘ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮಿಲನದಲ್ಲಿ ಈಗಾಗಲೇ 2,100ಕ್ಕೂ ಅಧಿಕ ಹಳೇ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಸ್ಥಳದಲ್ಲೇ 500 ಮಂದಿ ನೋಂದಣಿ ಮಾಡಿಕೊಳ್ಳುವ ನಿರೀಕ್ಷೆಗಳಿವೆ. ಒಟ್ಟು ಮೂರು ಸಾವಿರದಷ್ಟು ಹಳೇ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ’ ಎಂದು ಬುಧವಾರ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಫೆ.21ರಂದು ಬೆಳಿಗ್ಗೆ 10.30ಕ್ಕೆ ಸಮ್ಮಿಲನವನ್ನು ಕೇಂದ್ರ ಸಚಿವ ಪಲ್ಹಾದ್‌ ಜೋಶಿ ಉದ್ಘಾಟಿಸುವರು. ಪ್ರೀಮಿಯರ್‌ ಎನರ್ಜಿಸ್‌ ಕಂಪನಿ ಅಧ್ಯಕ್ಷ ಸುರಿಂದರ್‌ ಪಾಲ್ ಸಿಂಗ್‌ ಸಲುಜಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಸಚಿವರಾದ ಈಶ್ವರ ಖಂಡ್ರೆ ಹಾಗೂ ಶರಣಬಸಪ್ಪ ದರ್ಶನಾಪುರ, ನಿವೃತ್ತ ಐಪಿಎಸ್‌ ಅಧಿಕಾರಿ ರಾಘವೇಂದ್ರ ಔರಾದಕರ್‌, ವಿಧಾನ ಪರಿಷತ್‌ ಸದಸ್ಯರಾದ ಸುನೀಲ್ ವಲ್ಯಾಪುರೆ ಹಾಗೂ ಜಗದೇವ ಗುತ್ತೇದಾರ, ವಿಜಯಕುಮಾರ ದೇಶಮುಖ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುವರು. ನಾನು ಅಧ್ಯಕ್ಷತೆ ವಹಿಸುವೆ’ ಎಂದು ಶಶೀಲ್‌ ನಮೋಶಿ ಮಾಹಿತಿ ನೀಡಿದರು.

ADVERTISEMENT

‘1958ರಲ್ಲಿ ಶುರುವಾರ ಪಿಡಿಎ ಎಂಜಿನಿಯರಿಂಗ್ ಕಾಲೇಜು ಕಟ್ಟಡ ಉದ್ಘಾಟಿಸಿದ್ದು ಸರ್ವಪಲ್ಲಿ ರಾಧಾಕೃಷ್ಣನ್‌ ಅವರು. ಈ ಕಾಲೇಜಿನಲ್ಲಿ ಓದಿ 1962ರಿಂದಲೂ ಪಾಸಾದ ಹಳೇ ವಿದ್ಯಾರ್ಥಿಗಳು ಅಮೆರಿಕ, ಇಂಗ್ಲೆಂಡ್‌, ದುಬೈ, ಆಸ್ಟ್ರೇಲಿಯಾ ಸೇರಿದಂತೆ ಹಲವೆಡೆ ನೆಲೆಸಿದ್ದಾರೆ. ಅವರೆಲ್ಲ ತಮ್ಮ ಇಲ್ಲಿನ ನೆನಪುಗಳನ್ನು ಸ್ಮರಿಸಿಕೊಳ್ಳಲು ಭೇಟಿ ನೀಡುತ್ತಿದ್ದಾರೆ’ ಎಂದು ವಿವರಿಸಿದರು.

‘ಸಮ್ಮಿಲನದ ಮೊದಲ ದಿನ ಉದ್ಘಾಟನಾ ಸಮಾರಂಭ, ವಿವಿಧ ಒಪ್ಪಂದಗಳಿಗೆ ಸಹಿ, ಸಾಧಕರಿಂದ ಉಪನ್ಯಾಸಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎರಡನೇ ದಿನ ಸಂಬಂಧಿತ ವಿಭಾಗಗಳಲ್ಲಿ ತಾಂತ್ರಿಕ ಗೋಷ್ಠಿಗಳು, ಚರ್ಚೆಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ’ ಎಂದರು.

‘ಸದ್ಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ 11 ವಿಭಾಗಗಳಲ್ಲಿ 1,140  ಸೀಟುಗಳಿದ್ದು, ಇನ್ನೂ 180 ಸೀಟುಗಳು ಹೆಚ್ಚಿಸಲು ಉದ್ದೇಶಿಸಲಾಗಿದೆ. 10 ಪಿಜಿ ಕೋರ್ಸ್‌ಗಳು, 13 ಸಂಶೋಧನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳು ಇಲ್ಲಿಂದ ಪದವೀಧರರಾಗಿ ಹೊರಹೊಮ್ಮುವ ಸಂದರ್ಭದಲ್ಲಿ ಕೈಗಾರಿಕಾ ಕ್ಷೇತ್ರ ನಿರೀಕ್ಷಿಸುವ ಕೌಶಲಗಳನ್ನು ಕಲಿಸಲು ಒತ್ತು ನೀಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಂಜಿನಿಯರಿಂಗ್ ಕೋರ್ಸ್‌ನ 7ನೇ ಸೆಮಿಸ್ಟರ್‌ ಬದಲಿಗೆ 6ನೇ ಸೆಮಿಸ್ಟರ್‌ನಲ್ಲೇ ಇಂಟರ್ನ್‌ಶಿಪ್‌ ಪರಿಚಯಿಸಲಾಗುವುದು’ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎಚ್‌ಕೆಇ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯ ಚಿಂಚೋಳಿ, ಸಹ ಕಾರ್ಯದರ್ಶಿ ಕೈಲಾಸ್ ಪಾಟೀಲ, ಶರಣಬಸಪ್ಪ ಹರವಾಳ, ಅನಿಲ ಪಟ್ಟಣ, ಸಂಪತ್‌ ಗಿಲ್ದಾ, ಪ್ರಾಚಾರ್ಯ ಸಿದ್ದರಾಮ ಆರ್. ಪಾಟೀಲ, ಉಪ ಪ್ರಾಚಾರ್ಯ ಎಸ್.ಆರ್. ಹೊಟ್ಟಿ, ಭಾರತಿ ಹರಸೂರ, ವಿಶೇಷಾಧಿಕಾರಿಯಾದ ದೇವಸುಧಾಕರ್ ಪಾಟೀಲ್, ಸಂಚಾಲಕ ಪ್ರೊ. ಶಿವಕುಮಾರ್ ಪಾಟೀಲ, ಸಹ ಸಂಚಾಲಕ ಡಾ. ನಾಗೇಂದ್ರ ಎಚ್., ಪರೀಕ್ಷಾ ನಿಯಂತ್ರಣ ಅಧಿಕಾರಿ ಡಾ. ಶ್ರೀದೇವಿ ಸೋಮ, ಮಾಧ್ಯಮ ಸಂಚಾಲಕರಾದ ಡಾ. ಬಾಬುರಾವ್ ಸೇರಿಕಾರ್, ಡಾ. ನಾಗೇಶ್ ಸಾಲಿಮಠ ಪ್ರೊ. ಅಶೋಕ್ ಪಾಟೀಲ ಇದ್ದರು.

‘ಎಐ ಕೇಂದ್ರ ಟೆಕ್‌ ಪಾರ್ಕ್‌’

‘ಈ ಸಮ್ಮಿಲನದ ನೆನಪಿಗಾಗಿ ಪಿಡಿಎ ಅಲೂಮ್ನಿ ರಿಸರ್ಚ್‌ ಅಂಡ್‌ ಟೆಕ್‌ ಪಾರ್ಕ್‌ ಹಾಗೂ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಕಟ್ಟಡಗಳ ಸ್ಥಾಪನೆಗೆ ಶಂಕು ಸ್ಥಾಪನೆ ನೆರವೇರಿಸಲು ಉದ್ದೇಶಿಸಲಾಗಿದೆ’ ಎಂದು ಶಶೀಲ್‌ ನಮೋಶಿ ಹೇಳಿದರು. ‘ಉದ್ದೇಶಿತ ಕಟ್ಟಡಗಳು 25 ಸಾವಿರ ಚದರಡಿ ಪ್ರದೇಶದಲ್ಲಿ ಜಿ+3 ಮಾದರಿಯಲ್ಲಿ ತಲೆ ಎತ್ತಲಿದ್ದು ಇದಕ್ಕಾಗಿ ₹15 ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ. ಈ ಕೇಂದ್ರಗಳ ಮೂಲಕ ಹಳೇ ವಿದ್ಯಾರ್ಥಿಗಳ ಮಾರ್ಗದರ್ಶನದಲ್ಲಿ ಹಾಲಿ ವಿದ್ಯಾರ್ಥಿಗಳನ್ನು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಲು ಉದ್ದೇಶಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.