ADVERTISEMENT

ನೆರವಿಗೆ ಆಗ್ರಹಿಸಿ ಛಾಯಾಗ್ರಾಹಕರ ಪ್ರತಿಭಟನೆ

ಸಭ, ಸಮಾರಂಭ, ಮದುವೆಗಳು ರದ್ದು; ಜೀವನ ನಿರ್ವಹಣೆ ಕಠಿಣೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 15:51 IST
Last Updated 31 ಅಕ್ಟೋಬರ್ 2020, 15:51 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲಬುರ್ಗಿಯಲ್ಲಿ ಶನಿವಾರ ಫೋಟೊಗ್ರಾಫರ್‌ಗಳು ಪ್ರತಿಭಟನೆ ನಡಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲಬುರ್ಗಿಯಲ್ಲಿ ಶನಿವಾರ ಫೋಟೊಗ್ರಾಫರ್‌ಗಳು ಪ್ರತಿಭಟನೆ ನಡಸಿದರು   

ಕಲಬುರ್ಗಿ: ಕೊರೊನಾ ಹಾವಳಿ ಆರಂಭವಾದ ಮೇಲೆ ಸುಮಾರು ಎಂಟು ತಿಂಗಳಿಂದ ವೃತ್ತಿಪರ ಛಾಯಾಚಿತ್ರ ಗ್ರಾಹಕರಿಗೆ ಉದ್ಯೋಗವೇ ಇಲ್ಲವಾಗಿದೆ. ದೈನಂದಿನ ಜೀವನ ನಡೆಸುವುದೇ ಕಠಿಣವಾಗಿದೆ. ಆದ್ದರಿಂದ ಫೋಟೊಗ್ರಾಫರ್‌ಗಳಿಗೆ ನೆರವಾಗುವಂಥ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ, ಜಿಲ್ಲಾ ಫೋಟೊಗ್ರಾಫರ್ ಅಸೋಸಿಯೇಷನ್‌ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಲಾಯಿತು.

ನಗರದಲ್ಲಿರುವ ಎಲ್ಲ ಫೋಟೊ ಸ್ಟುಡಿಯೊಗಳನ್ನು ಬಂದ್ ಮಾಡಿ, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ, ಕೆಲ ಹೊತ್ತು ಪ್ರತಿಭಟನಾ ಪ್ರದರ್ಶನ ನಡೆಸಿದರು.

ಕಳೆದ ಎಂಟು ತಿಂಗಳಿಂದ ಒಂದೇ ಒಂದು ಫೋಟೊ ಕೂಡ ತೆಗೆಯಲು ಸಾಧ್ಯವಾಗಿಲ್ಲ. ಜೀವನ ಚಿಂತಾಜನಕವಾಗಿದೆ. ಸರ್ಕಾರದಿಂದ ಯಾವುದೇ ಸಹಕಾರ ಸಿಕ್ಕಿಲ್ಲ. ಕಾರ್ಯಕ್ರಮಗಳಲ್ಲಿ ಫೋಟೊ ತೆಗೆದು ಜೀವನ ಸಾಗಿಸುತ್ತಿರುವ ನಮಗೆ ಸರ್ಕಾರ ಸಹಾಯ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಮದುವೆ, ಮುಂಜಿ, ಶುಭ ಸಮಾರಂಭಗಳು ಸ್ಥಗಿತವಾಗಿದ್ದರಿಂದ ಜೀವನ ನಡೆಸುವುದು ದುಸ್ತರವಾಗಿದೆ. ಸರ್ಕಾರ ಸಹಾಯ ಧನ ನೀಡಲು ಪ್ಯಾಕೇಜ್ ಘೋಷಣೆ ಮಾಡಬೇಕು, ರಾಜ್ಯದಲ್ಲಿ ಛಾಯಾಚಿತ್ರ ಅಕಾಡೆಮಿ ಸ್ಥಾಪಿಸಬೇಕು, ಸರ್ಕಾರಿ ಕೆಲಸಗಳಿಗೆ ಪಾಸ್‍ಪೋರ್ಟ್‌ ಸೈಜ್ ಫೋಟೊ ತೆಗೆಯಲು ಅವಕಾಶ ನೀಡಬೇಕು. ಸರ್ಕಾರದ ಕಾರ್ಯಕ್ರಮಗಳಿಗೆ ವೃತ್ತಿಪರ ಛಾಯಾಗ್ರಾಹಕರಿಗೆ ಗುತ್ತಿಗೆ ನೀಡಬೇಕು ಎಂದೂ ಮನವಿ ಮಾಡಿದರು.‌

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ, ಉಸ್ಮಾನ ಜಮಾಲುದ್ದಿನ್, ಕಾರ್ಯದರ್ಶಿ ಬಸವರಾಜ ತೋಟದ, ಶರಣಬಸಪ್ಪ ಕಣ್ಣಿ, ರಾಜಶೇಖರ ಹತ್ತೂರೆ, ಗುಂಡೇರಾವ ಭೂಸನೂರ, ರಾಜೇಂದ್ರ ಸ್ವಾಮಿ, ವಿಜಯಕುಮಾರ ಪುರಾಣಿಕಮಠ, ಬಸವರಾಜ ಬಿರಾದಾರ, ರಮೇಶ, ಶೇಖ್ ರಿಯಾಜುದ್ದಿನ್, ಮಹೇಶ ಮೇಲಿಕೇರಿ, ಮಂಜುನಾಥ ಜಂಬಗಿ, ವೆಂಕಟೇಶ ಪುಕಾಳೆ, ಕೃಷ್ಣರಾಜ ಮಳ್ಳಿ, ಮಹ್ಮದ್ ಪಟೇಲ್‌ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.