ADVERTISEMENT

ಸೇಡಂ: ಶಾಲೆಗಳಿಗೆ ಕಳಪೆ ತೊಗರಿ ಬೇಳೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 4:18 IST
Last Updated 22 ಜುಲೈ 2025, 4:18 IST
ಸೇಡಂ ಪಟ್ಟಣದ ಗೋದಾಮಿನಲ್ಲಿ ಸಂಗ್ರಹಿಸಲಾದ ಆಹಾರ ಧಾನ್ಯಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಭಂವರಸಿಂಗ್ ಮೀನಾ ವೀಕ್ಷಿಸಿದರು
ಸೇಡಂ ಪಟ್ಟಣದ ಗೋದಾಮಿನಲ್ಲಿ ಸಂಗ್ರಹಿಸಲಾದ ಆಹಾರ ಧಾನ್ಯಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಭಂವರಸಿಂಗ್ ಮೀನಾ ವೀಕ್ಷಿಸಿದರು   

ಸೇಡಂ: ಶಾಲೆಗಳಿಗೆ ಕಳಪೆ ಗುಣಮಟ್ಟದ ತೊಗರಿ ಬೇಳೆ ಪೂರೈಕೆಯಾಗುತ್ತಿದ್ದರೂ ಬಿಇಒ ಮತ್ತು ಶಾಲಾ ಮುಖ್ಯಶಿಕ್ಷಕರು ಸುಮ್ಮನಿದ್ದೀರಲ್ಲಾ ಏಕೆ? ಕಳಪೆ ತೊಗರಿ ಬೇಳೆ ಬಂದಾಗ ತಡೆಹಿಡಿದು, ವರದಿ ಮಾಡದೇ, ಇದರಲ್ಲಿ ಭಾಗಿಯಾಗಿದ್ದೀರಾ? ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ ಸಿಂಗ್ ಮೀನಾ ಪ್ರಶ್ನಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಾನು ಖುದ್ದಾಗಿ ಸೇಡಂ ತಾಲ್ಲೂಕಿನ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ತೊಗರಿ ಬೇಳೆ ಪರಿಶೀಲಿಸಿದ್ದೇನೆ. ಅದರಲ್ಲಿ ಹಳದಿ ಬಣ್ಣ, ಜಾಸ್ತಿ ಹೊಟ್ಟು ಹಾಗೂ ಸಣ್ಣದಾಗಿ ಕಾಣಿಸಿದೆ. ಇದರ ಕುರಿತು ಶಾಲಾ ಶಿಕ್ಷಕರಿಗೆ ಪ್ರಶ್ನಿಸಿದ್ರೆ ಇದೆ ಬಂದಿದೆ ಸರ್ ಎಂದಿದ್ದಾರೆ. ಶಾಲೆಯ ಮಕ್ಕಳು ಸೇವಿಸಿ, ಸಮಸ್ಯೆಗಳಾದರೆ ಯಾರೂ ಜವಾಬ್ದಾರರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ ಅವರಿಗೆ ಪ್ರಶ್ನಿಸಿದರು.

ಬಿಸಿಯೂಟ ಸಹಾಯಕ ನಿರ್ದೇಶಕರು ಏನು ಮಾಡುತ್ತಿದ್ದಿರಿ, ನೀವು ಪರಿಶೀಲಿಸಿ, ನೋಡಬೇಕಲ್ಲವೆ. ಹೀಗೆ ಮಾಡಿದ್ರೆ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಸರ್ಕಾರದಿಂದ ಬಂದ ತೊಗರಿ ಬೇಳೆಯ ಪ್ರತಿ ಬ್ಯಾಗ್‌ ಪರಿಶೀಲಿಸಿ ಸ್ವೀಕರಿಸಿದ್ದೇವೆ. ಇದರ ಕುರಿತು ವರದಿಯಿದೆ ಎಂದು ಬಿಇಒ ಮಾರುತಿ ಹುಜರಾತಿ ತಿಳಿಸಿದಾಗ, ವಾಪಸ್ ಏಕೆ ಕಳುಹಿಸಿಲ್ಲಾ ಎಂದು ಸಿಇಒ ಆಕ್ರೋಶ ವ್ಯಕ್ತಪಡಿಸಿದರು. ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಕಳಪೆ ಆಹಾರ ಪೂರೈಕೆ ಗಂಭೀರವಾಗಿ ಪರಿಗಣಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.

‘ತಾಲ್ಲೂಕಿನ ಕೆಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ವಚ್ಛ ಭಾರತ ಮಿಷನ್ ಯೋಜನೆ, ವಾಹನ ಚಾಲಕರ ವೇತನ, ಕಸ ಸಂಗ್ರಹ ವಾಹನದ ವಿಮೆ ಪಾವತಿ ಸೇರಿದಂತೆ ಹಲವು ಕೆಲಸಗಳನ್ನು ಮಾಡಿಲ್ಲ. ಕೆಲವರು ಪಂಚಾಯಿತಿಯಲ್ಲಿ ಅನುದಾನವಿದ್ದರೂ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಯೋಜನೆಗಳ ಅನುಷ್ಠಾನ  ಸಮರ್ಪಕವಾಗಿ ಮಾಡದಿರುವ ಪಿಡಿಒ ವಿರುದ್ಧ ನೋಟೀಸ್ ನೀಡುವಂತೆ ತಾಲ್ಲೂಕು ಪಂಚಾಯಿತಿ ಇಒ ಚನ್ನಪ್ಪ ರಾಯಣ್ಣನವರ್ ಅವರಿಗೆ ಸೂಚಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜೀವಕುಮಾರ, ವಿಜಯಕುಮಾರ ಪುಲಾರಿ, ಮಾರುತಿ ಹುಜರಾತಿ, ಖ್ಯಾದಿಗಪ್ಪ ಉಮಾಪತಿರಾಜು, ಹಸನ ಚಾವೂಸ್, ಶಿವಕುಮಾರ ಬುದರೆ, ಸರಿತಾ ಕುಲಕರ್ಣಿ ಸೇರಿದಂತೆ ಅನೇಕದ್ದರು.

ಸೇಡಂ ಗೋದಾಮಿನಿಂದ ತೊಗರಿ ಬೇಳೆ ತುಂಬಿದ ಲಾರಿ ಶಾಲೆಗೆ ಹೋಗದೆ ಬೇರೆಡೆಗೆ ಹೋಗಿ ಬಂದು ಕಳಪೆ ಗುಣಮಟ್ಟದ ತೊಗರಿ ಬೇಳೆ ಪೂರೈಕೆ ಮಾಡಲಾಗುತ್ತಿದೆ ಎಂಬ ಗುಮಾನಿಯಿದ್ದು ಸಮಪರ್ಕವಾಗಿ ಅಧಿಕಾರಿಗಳು ಪರಿಶೀಲಿಸುವ ಅಗತ್ಯತೆ ಇದೆ.
ಭಂವರಸಿಂಗ್ ಮೀನಾ ಸಿಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.