ಕಲಬುರಗಿ: ನೆತ್ತಿ ಸುಡುವ ರಣ ಬಿಸಿಲಿನ ಝಳ, ಬೀಸಿಲಿನ ತಾಪ ಏರಿದಂತೆ ಕುಡಿಯುವ ನೀರು ಅಭಾವದ ಸಂಭವನೀಯ ಗ್ರಾಮಗಳ ಪಟ್ಟಿಯೂ ಬೆಳೆಯುತ್ತಿದೆ. ಫೆಬ್ರುವರಿ 23ಕ್ಕೆ 253 ಇದ್ದ ಸಂಭವನೀಯ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ಮಾರ್ಚ್ 5ಕ್ಕೆ 262ಕ್ಕೆ ಏರಿಕೆಯಾಗಿದೆ.
ಮಾರ್ಚ್ ತಿಂಗಳಲ್ಲಿ ಆಳಂದ, ಕಲಬುರಗಿ ತಾಲ್ಲೂಕು, ಕಮಲಾಪುರದಲ್ಲಿ ಅತಿ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮುಂದಿನ ಎರಡೂವರೆ ತಿಂಗಳಲ್ಲಿ (ಮೇ ವರೆಗೆ) 262 ಗ್ರಾಮಗಳಲ್ಲಿ ನೀರಿನ ಅಭಾವ ಆಗುವ ಬಗ್ಗೆ ಅಂದಾಜಿಸಲಾಗಿದೆ. ಅವುಗಳಲ್ಲಿ ಆಳಂದ ತಾಲ್ಲೂಕಿನಲ್ಲಿಯೇ ಅತ್ಯಧಿಕ 72 ಗ್ರಾಮಗಳು ಇವೆ.
ನಂತರದ ಸ್ಥಾನದಲ್ಲಿ ಭೀಮಾ ಒಡಲಿನ ಅಫಜಲಪುರ 37, ಕಾಳಗಿ 28, ಕಮಲಾಪುರ 25, ಕಲಬುರಗಿ ಮತ್ತು ಚಿತ್ತಾಪುರ ತಲಾ 23, ಸೇಡಂ 17, ಯಡ್ರಾಮಿ 13, ಚಿಂಚೋಳಿ 12, ಜೇವರ್ಗಿ 8 ಹಾಗೂ ಶಹಾಬಾದ್‌ನ 4 ಗ್ರಾಮಗಳು ಸಂಭವನೀಯ ಜಲದಾಹದ ಸಾಲಿನಲ್ಲಿವೆ.
ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಕೊರತೆಯಿಂದಾಗಿ ಚರಂಡಿ ನೀರು, ನದಿಗಳು, ಕೆರೆ, ಕಟ್ಟೆ ಸೇರುತ್ತಿರುವುದರಿಂದ ಜೀವಜಲ ಕಲುಷಿತಗೊಳ್ಳುತ್ತಿದೆ. ಹೀಗಾಗಿ, ಭೀಮಾ, ಅಮರ್ಜಾ, ಕಾಗಿಣಾ ಮತ್ತು ಮುಲ್ಲಾ ಮಾರಿ ನದಿಗಳಲ್ಲಿ ನೀರಿನ ಪ್ರಮಾಣ ಇದ್ದರೂ ನೇರವಾಗಿ ಕುಡಿಯಲು ಯೋಗ್ಯವಾಗಿಲ್ಲ. ನದಿ ತೀರದ ಕೆಲವು ಗ್ರಾಮಗಳೂ ಸಮಸ್ಯಾತ್ಮಕ ಸಾಲಿಗೆ ಸೇರ್ಪಡೆಯಾಗಲಿವೆ.
ಜಿಲ್ಲೆಯ ಬಹುತೇಕ ಗ್ರಾಮಸ್ಥರು ಕುಡಿಯುವ ನೀರಿಗೆ ತೆರೆದ ಬಾವಿ, ಕೆರೆ ಹಾಗೂ ಬೋರ್‌ವೆಲ್‌ಗಳನ್ನೇ ಆಶ್ರಯಿಸಿದ್ದಾರೆ. ಆದರೆ, ಅಂತರ್ಜಲದ ಮಟ್ಟ ಪಾತಾಳ ಕಂಡಿದ್ದು, ಅಧಿಕಾರಿಗಳು ಖಾಸಗಿ ಕೊಳವೆ ಬಾವಿಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸಂಭವನೀಯ ಗ್ರಾಮಗಳಲ್ಲಿ ಜಲದಾಹ ನೀಗಿಸಲು 1,190 ಕೊಳವೆ ಬಾವಿಗಳನ್ನು ಗುರುತಿಸಿದೆ.
1,190 ಕೊಳವೆ ಬಾವಿಗಳಲ್ಲಿ 729 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿದ್ದು, 454 ಸ್ಥಗಿತಗೊಂಡಿವೆ. 355 ಕೊಳವೆ ಬಾವಿಗಳನ್ನು ಫ್ಲಶ್ ಮಾಡಿ ರೀಬೋರ್ ಮಾಡಬಹುದಾಗಿದೆ. ಅಗತ್ಯಬಿದ್ದಿಲ್ಲ 323 ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿದೆ. ಸದ್ಯ ಟ್ಯಾಂಕರ್ ನೀರು ಸರಬರಾಜು ಕಾಣಿಸದೇ ಇದ್ದರೂ ತೀವ್ರ ಸಮಸ್ಯೆ ಎದುರಿಸುತ್ತಿರುವ ಹಲಕರ್ಟಿಯಂತಹ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಶುರುವಾಗಿದೆ.
‘ಸದ್ಯ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಜನರಿಗೆ ನೀರು ಒದಗಿಸಲಾಗುತ್ತಿದೆ. ಕೊಳವೆ ಬಾವಿಗಳ ದುರಸ್ತಿ ಮಾಡಿದ್ದೇವೆ. ಉಳಿದ ಕಡೆ ನೀರಿಗೆ ಸಮಸ್ಯೆ ಇಲ್ಲ’ ಎಂದು ಅಧಿಕಾರಿಗಳು ಮೇಲ್ನೋಟಕ್ಕೆ ಹೇಳಿಕೊಳ್ಳುತ್ತಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸಲು ತಯಾರಿ ನಡೆಸುತ್ತಿದ್ದಾರೆ.
ಕಲಬುರಗಿ ತಾಲ್ಲೂಕಿನ ಕವಲಗಾ (ಬಿ), ಗರೂರ್, ಮಿಣಜಗಿ, ನದಿ ಸಿನ್ನೂರು, ತಿಳಗುಳು, ಖಣದಾಳ ತಾಂಡಾ, ಜಾಫರಾಬಾದ್, ಭೀಮಳ್ಳಿ, ಕೋಟನೂರ (ಡಿ), ಸಾವಳಗಿ ಸ್ಟೇಷನ್, ಅಷ್ಟಗಾ, ಮೇಳಕುಂದಾ ತಾಂಡಾಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸುವ ಸಾಧ್ಯತೆಯಿದೆ.
ಆಳಂದ ಅಫಜಲಪುರದಲ್ಲೇ ಅತ್ಯಧಿಕ
ಅಂತರ್ಜಲದಮಟ್ಟ ಪಾತಾಳ ಕಂಡಿರುವ ಆಳಂದ ಹಾಗೂ ತಾಲ್ಲೂಕಿನ ಗಡಿ ಉದ್ದಕ್ಕೂ ಭೀಮಾ ನದಿಯನ್ನು ಹೊಂದಿರುವ ಅಫಜಲಪುರ ತಾಲ್ಲೂಕುಗಳಲ್ಲಿಯೇ ಅತಿ ಹೆಚ್ಚು ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. ಆಳಂದ ತಾಲ್ಲೂಕಿನ ಝಳಕಿ (ಕೆ) ಸಾವಳೇಶ್ವರ ಮಾದನ ಹಿಪ್ಪರಗಾ ಮೊಗಾ (ಕೆ) ನಿಂಬಾಳ ತೀರ್ಥ ಜವಳಗಿ ರುದ್ರವಾಡಿ ಸರಸಂಬಾ ಮಾದನಹಿಪ್ಪರಗಾ ವಾಡಿ ಮಾಡಿಯಾಳ ನಿರ್ಗುಡಿ ಯಳಸಂಗಿ ಖಾನಾಪುರ ಹಿರೋಳಿ ಬೆಳಮಗಿ ಚಿಂಚನಸೂರ ಸೇರಿ 72 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುಬುಹುದ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಅಫಜಲಪುರ ತಾಲ್ಲೂಕಿನ ಗೊಬ್ಬುರ (ಬಿ) ರಾಮನಗರ ಮಲ್ಲಬಾದ್ ಆತನೂರ ಅರ್ಜುಣಗಿ ತಾಂಡಾ ಭೈರಮಡಗಿ ಬಳೂರ್ಗಿ ಗುಡೂರು ಸೇರಿ 37 ಹಳ್ಳಿಗಳು ಸಂಭವನೀಯ ಕುಡಿಯುವ ನೀರಿನ ಸಮಸ್ಯೆಗಳ ಸಾಲಿನಲ್ಲಿವೆ.
‘ಗ್ರಾಮಗಳ ಸರ್ವೆ ಮಾಡಿ ಸನ್ನದ್ಧು’
‘ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ತಾಲ್ಲೂಕು ವಾರು ಸರ್ವೆ ಮಾಡಿ ಪಟ್ಟಿ ಮಾಡಿ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಧನರಾಜ್ ಲಡ್ಡೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸರಿಯಾಗಿ ನೀರು ಬರುವ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿದ್ದೇವೆ. ಜನವಸತಿ ಪ್ರದೇಶಗಳಿಗೆ ಪೈಪ್‌ಲೈನ್ ವ್ಯವಸ್ಥೆಗೆ 15ನೇ ಹಣಕಾಸು ಆಯೋಗ ಅನುದಾನ ಬಳಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಅವರ ಸಲಹೆಯಂತೆ ಕಾರ್ಯೋನ್ಮುಖರಾಗಿದ್ದೇವೆ. ತಹಶೀಲ್ದಾರ್ ಇಒ ಆರ್‌ಡಿಡಬ್ಲ್ಯುಎಸ್ ಎಂಜಿನಿಯರ್ ಸೇರಿ ಇತರೆ ಅಧಿಕಾರಿಗಳ ಟಾಸ್ಕ್‌ಫೋರ್ಸ್ ರಚನೆಯಾಗಿದೆ’ ಎಂದರು.
‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಷ್ಟಾಗಿ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಮೇ ತಿಂಗಳಲ್ಲಿ ಕೊಳವೆ ಬಾವಿಗಳು ಬತ್ತಬಹುದು. ಅದಕ್ಕೂ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಕುಡಿಯಲು ಯೋಗ್ಯವಲ್ಲದ ನದಿ ತೀರದ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ನೀರು ಶುದ್ಧೀಕರಣ ಘಟಕ ಅಥವಾ ಕೊಳವೆ ಬಾವಿ ಮೂಲಕ ಸರಬರಾಜು ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.