ADVERTISEMENT

ವೀರೇಂದ್ರ ಪಾಟೀಲ, ಧರಂಸಿಂಗ್ ಅಧ್ಯಯನ ಪೀಠ ಸ್ಥಾಪಿಸಿ

ವಿಶೇಷ ಅಂಚೆ ಲಕೋಟೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೈಲಾಶನಾಥ ಪಾಟೀಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 10:37 IST
Last Updated 19 ಡಿಸೆಂಬರ್ 2020, 10:37 IST
ಕಲಬುರ್ಗಿಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ ಮತ್ತು ಎನ್.ಧರಂಸಿಂಗ್ ಅವರ ಭಾವಚಿತ್ರವುಳ್ಳ ಅಂಚೆ ಚೀಟಿ, ಲಕೋಟೆಗಳನ್ನು ಲಲಿತಾ ಜವಳಿ ಮತ್ತು ಪ್ರಭಾವತಿ ಧರಂಸಿಂಗ್ ಬಿಡುಗಡೆ ಮಾಡಿದರು. ಪ್ರಮುಖರಾದ ಕೈಲಾಶನಾಥ ಪಾಟೀಲ, ಬಿ.ಜಿ.ಜವಳಿ, ನಿತೀನ್ ಜವಳಿ, ಡಾ.ಅಜಯಸಿಂಗ್, ವಿಜಯಸಿಂಗ್, ಎಂ.ವೈ.ಪಾಟೀಲ, ಭೀಮಾಶಂಕರ್ ಬಿಲಗುಂದಿ ಇದ್ದಾರೆ
ಕಲಬುರ್ಗಿಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ ಮತ್ತು ಎನ್.ಧರಂಸಿಂಗ್ ಅವರ ಭಾವಚಿತ್ರವುಳ್ಳ ಅಂಚೆ ಚೀಟಿ, ಲಕೋಟೆಗಳನ್ನು ಲಲಿತಾ ಜವಳಿ ಮತ್ತು ಪ್ರಭಾವತಿ ಧರಂಸಿಂಗ್ ಬಿಡುಗಡೆ ಮಾಡಿದರು. ಪ್ರಮುಖರಾದ ಕೈಲಾಶನಾಥ ಪಾಟೀಲ, ಬಿ.ಜಿ.ಜವಳಿ, ನಿತೀನ್ ಜವಳಿ, ಡಾ.ಅಜಯಸಿಂಗ್, ವಿಜಯಸಿಂಗ್, ಎಂ.ವೈ.ಪಾಟೀಲ, ಭೀಮಾಶಂಕರ್ ಬಿಲಗುಂದಿ ಇದ್ದಾರೆ   

ಕಲಬುರ್ಗಿ: ‘ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ ಮತ್ತು ಎನ್.ಧರಂಸಿಂಗ್ ಅವರ ಹೆಸರಿನಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡಬೇಕು’ ಎಂದು ಮಾಜಿ ಶಾಸಕ ಕೈಲಾಶನಾಥ ಪಾಟೀಲ ಒತ್ತಾಯಿಸಿದರು.

ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವೀರೇಂದ್ರ ಪಾಟೀಲ ಮತ್ತು ಎನ್.ಧರಂಸಿಂಗ್ ಅವರ ಭಾವಚಿತ್ರವುಳ್ಳ ವಿಶೇಷ ಅಂಚೆ ಲಕೋಟೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಜ್ಯದ ಅಭಿವೃದ್ಧಿಗೆ ಇಬ್ಬರು ಮಹನೀಯರು ಅಪಾರ ಕೊಡುಗೆ ನೀಡಿದ್ದಾರೆ. ದಕ್ಷತೆಗೆ ಹೆಸರಾಗಿದ್ದ ಅವರು ಮುಖ್ಯಮಂತ್ರಿ ಸ್ಥಾನ ಮಾತ್ರವಲ್ಲದೆ ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ, ಯಶಸ್ವಿ ರಾಜಕಾರಣಿಗಳೆನಿಸಿಕೊಂಡಿದ್ದಾರೆ. ಇಂಥ ಮೇರು ವ್ಯಕ್ತಿಗಳ ಹೆಸರಿನಲ್ಲಿ ಅಂಚೆ ಚೀಟಿ, ಲಕೋಟೆ ಬಿಡುಗಡೆ ಮಾಡಿರುವ ಅಂಚೆ ಇಲಾಖೆ ಕಾರ್ಯ ಶ್ಲಾಘನೀಯ’ ಎಂದರು.

ADVERTISEMENT

‘ಕಲ್ಯಾಣ ಕರ್ನಾಟಕ ಭಾಗದವರು ಉನ್ನತ ವ್ಯಾಸಂಗಕ್ಕೆ ಹೈದರಾಬಾದ್, ಧಾರವಾಡಕ್ಕೆ ಹೋಗಬೇಕಾದ ಪರಿಸ್ಥಿತಿಯಿತ್ತು. 1958ರಲ್ಲಿ ಮಹಾದೇವಪ್ಪ ರಾಂಪೂರೆ ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೆ ಕಾರಣರಾದರು. ರಾಂಪೂರೆ ಅವರಿಗೆ ಸಂಸ್ಥೆ ಸ್ಥಾಪಿಸುವಾಗ ವೀರೇಂದ್ರ ಪಾಟೀಲರು ಸಹಕಾರ ನೀಡುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಲ್ಲಿ ನೆರವಾದರು’ ಎಂದು ಸ್ಮರಿಸಿದರು.

ಶಾಸಕ ಡಾ.ಅಜಯಸಿಂಗ್ ಮಾತನಾಡಿ, ‘ವೀರೇಂದ್ರ ಪಾಟೀಲ ಮತ್ತು ಧರಂಸಿಂಗ್ ಅವರು ಧೀಮಂತ ನಾಯಕರು. ಅವರ ಕಾಳಜಿಯ ಫಲವಾಗಿ ಈ ಭಾಗದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ತಮ್ಮ ಜತೆಗಿರುವ ಎಲ್ಲರನ್ನು ಬೆಳೆಸುವ ಮನೋಭಾವ ಅವರಲ್ಲಿತ್ತು. ಅವರ ಜೀವನ ನಮಗೆಲ್ಲ ದಾರಿದೀಪವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ’ ಎಂದರು.

ಶಾಸಕ ಎಂ.ವೈ.ಪಾಟೀಲ ಮಾತನಾಡಿ, ‘ನಾವು ಹಿಂದುಳಿದವರು ಎಂದು ಭಾವಿಸಬೇಕಿಲ್ಲ. ನಾಡಿಗೆ ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ಹೆಮ್ಮೆ ನಮ್ಮದು. ವೀರೇಂದ್ರ ಪಾಟೀಲ ಮತ್ತು ಎನ್.ಧರಂಸಿಂಗ್ ಅವರು ಈ ಭಾಗದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅಂಚೆ ಇಲಾಖೆಯು ಅವರ ಸೇವೆಯನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ಅಂಚೆ ಇಲಾಖೆ ಅಧಿಕಾರಿ ವಿಠ್ಠಲ ಚಿತ್ತಕೋಟೆ ಮತ್ತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ್ ಬಿಲಗುಂದಿ ಮಾತನಾಡಿದರು.

ವೀರೇಂದ್ರ ಪಾಟೀಲ ಭಾವಚಿತ್ರವುಳ್ಳ ಅಂಚೆ ಚೀಟಿಗಳನ್ನು ಅವರ ಪುತ್ರಿ ಲಲಿತಾ ಜವಳಿ ಮತ್ತು ಎನ್.ಧರಂಸಿಂಗ್ ಅವರ ಭಾವಚಿತ್ರವುಳ್ಳ ಅಂಚೆ ಚೀಟಿಗಳನ್ನು ಅವರ ಪತ್ನಿ ಪ್ರಭಾವತಿ ಧರಂಸಿಂಗ್ ಬಿಡುಗಡೆ ಮಾಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿದ್ರಾಮಪ್ಪ ಪಾಟೀಲ ಧಂಗಾಪುರ ಅವರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಬಿ.ಜಿ.ಜವಳಿ, ನೀತಿನ್ ಜವಳಿ, ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಕುಮಾರ ಪಾಟೀಲ, ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಾದ ಗಂಗಾಧರ ಯೆಲಿ, ವಿಜಯಕುಮಾರ ದೇಶಮುಖ, ಅನುರಾಧಾ ದೇಸಾಯಿ, ಉದಯಕುಮಾರ ಚಿಂಚೋಳಿ, ಸಂಪತಕುಮಾರ್ ಲೋಯಾ, , ಅಮರನಾಥ ದೇಸಾಯಿ ಮತ್ತು ವೀರೇಂದ್ರ ಪಾಟೀಲ, ಎನ್.ಧರಂಸಿಂಗ್ ಕುಟುಂಬದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.