
ಕಲಬುರಗಿ: ಯುಪಿಎಸ್‌ಸಿ, ಕೆಪಿಎಸ್‌ಸಿ, ಬ್ಯಾಂಕಿಂಗ್, ಪೊಲೀಸ್ ಮತ್ತು ಇತರ ಸರ್ಕಾರಿ ನೇಮಕಾತಿಗಳಿಗೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ಅಣಿಗೊಳಿಸಲು ನಗರ ಹೊರವಲಯದ ಜೇವರ್ಗಿ ರಸ್ತೆಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ನಿರ್ಮಿಸಿರುವ ‘ಪ್ರಬುದ್ಧ ಅಕಾಡೆಮಿ’ ಸಜ್ಜಾಗಿದೆ.
ಈ ಸ್ಪರ್ಧಾತ್ಮಕ ಪರೀಕ್ಷಾಪೂರ್ವ ತರಬೇತಿ ಕೇಂದ್ರವನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಲಾಗಿದೆ. 1,000 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿದ್ದು, ಸದ್ಯಕ್ಕೆ 500 ಅಭ್ಯರ್ಥಿಗಳಿಗೆ ತರಬೇತಿ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ ಪ್ರವೇಶ ಪರೀಕ್ಷೆ ನಡೆಸಿ, ಅರ್ಹತೆ ಆಧಾರದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ತರಬೇತಿ ಕೇಂದ್ರ ಸುಮಾರು 10,449.35 ಚ.ಮೀ ವಿಸ್ತೀರ್ಣ ಹೊಂದಿದೆ. ಸಮಾಜ ಕಲ್ಯಾಣ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಒಟ್ಟು ₹29.52 ಕೋಟಿ ವೆಚ್ಚದಲ್ಲಿ ಅಕಾಡೆಮಿ ನಿರ್ಮಾಣವಾಗಿದೆ. ಮೂರು ಅಂತಸ್ತು ಇರುವ (ಜಿ+3) ಕಟ್ಟಡದಲ್ಲಿ ಪೀಠೋಪಕರಗಳ ಅಳವಡಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ವಾಹನ ಸೇರಿ ಯಾವುದೇ ಶಬ್ದಗಳ ಕಿರಿಕಿರಿ ಇಲ್ಲದಿರುವ ಸುಂದರ ಪರಿಸರ ಅಭ್ಯರ್ಥಿಗಳ ಓದಿಗೆ ನೆರವಾಗಲಿದೆ.
ಸೌಲಭ್ಯಗಳೇನು?: ನಾಲ್ಕು ಸ್ಮಾರ್ಟ್ ತರಗತಿ ಕೊಠಡಿಗಳು, ಡಿಜಿಟಲ್ ಪ್ರಸ್ತುತಿಗೆ ವ್ಯವಸ್ಥೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯವಿರುವ ಪುಸ್ತಕಗಳನ್ನು ಒಳಗೊಂಡ ಗ್ರಂಥಾಲಯ, ಡಿಜಿಟಲ್ ಲೈಬ್ರರಿ, ಆನ್‌ಲೈನ್ ಪರೀಕ್ಷೆಗಳಿಗಾಗಿ ಕಂಪ್ಯೂಟರ್ ಲ್ಯಾಬ್, ಅಣಕು ಪರೀಕ್ಷಾ ಸಭಾಂಗಣಗಳು, ಮಾರ್ಗದರ್ಶನ ಮತ್ತು ಸಮಾಲೋಚನಾ ಕೊಠಡಿಗಳು. ಇದಲ್ಲದೆ ಅಭ್ಯರ್ಥಿಗಳಿಗೆ ರಿಯಾಯಿತಿ ದರದಲ್ಲಿ ಉಪಾಹಾರ ಕೇಂದ್ರ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.
‘ತರಬೇತಿಗೆ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಮಾಡಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ ಶೇ 18, ಒಬಿಸಿ ಶೇ 32, ಪರಿಶಿಷ್ಟ ಜಾತಿ ಶೇ 40, ಪರಿಶಿಷ್ಟ ಪಂಗಡ ಶೇ 10ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ತರಬೇತಿ ಅವಧಿ 10 ತಿಂಗಳು ಇರುತ್ತದೆ’ ಎನ್ನುತ್ತಾರೆ ತರಬೇತಿ ಕೇಂದ್ರ ಕಚೇರಿ ಅಧೀಕ್ಷಕಿ ಪೂರ್ಣಿಮಾ ಹಿರೂರು.
‘ತರಬೇತಿ ಕೇಂದ್ರದಲ್ಲಿ 48 ಕಂಪ್ಯೂಟರ್‌ಗಳಿವೆ. ಗ್ರಂಥಾಲಯದಲ್ಲಿ ಸದ್ಯ 900 ಸ್ಪರ್ಧಾತ್ಮಕ ಪುಸ್ತಕಗಳಿದ್ದು, ತರಬೇತಿ ಸಂಸ್ಥೆ ಸೂಚಿಸುವ ಇನ್ನಷ್ಟು ಪುಸ್ತಕಗಳನ್ನು ಖರೀದಿಸಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ಚಂದ್ರಶೇಖರ ದೊಡ್ಡಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ತರಬೇತಿ ಕೇಂದ್ರ ರಾಜ್ಯದಲ್ಲಿಯೇ ಪ್ರಥಮ’
‘ರಾಜ್ಯ ಸರ್ಕಾರದಿಂದ ಯುಪಿಎಸ್‌ಸಿ ಕೆಪಿಎಸ್‌ಸಿ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷಾಪೂರ್ವ ತರಬೇತಿ ಕೇಂದ್ರವನ್ನು ಸ್ಥಾಪನೆ ಮಾಡಿರುವುದು ಇದೇ ಮೊದಲು. ಇಂಥ ಕೇಂದ್ರ ರಾಜ್ಯದಲ್ಲಿ ಎಲ್ಲೂ ಇಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ನಮ್ಮ ಭಾಗದ ಅಭ್ಯರ್ಥಿಗಳು ಧಾರವಾಡ ಬೆಂಗಳೂರು ಹೈದರಾಬಾದ್ ದೆಹಲಿ ಸೇರಿದಂತೆ ವಿವಿಧೆಡೆ ಹೋಗಬೇಕಿತ್ತು. ಈಗ ಸ್ಥಳೀಯವಾಗಿಯೇ ಗುಣಮಟ್ಟದ ಮತ್ತು ಉಚಿತ ತರಬೇತಿ ಸಿಗುವುದರಿಂದ ಹೆಚ್ಚಿನ ಅಭ್ಯರ್ಥಿಗಳು ಉನ್ನತ ಹುದ್ದೆ ಪಡೆಯಲು ಅನುಕೂಲವಾಗಲಿದೆ. ಅಭ್ಯರ್ಥಿಗಳ ಆಯ್ಕೆ ಆಗಿದೆ. ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು ಡಿಜಿಟಲ್ ಸಾಮಗ್ರಿಗಳನ್ನು ಸಂಸದರು ಕೊಡಿಸಿದ್ದಾರೆ. ಈ ವಾರ ಅಥವಾ ಈ ತಿಂಗಳಲ್ಲಿ ಉದ್ಘಾಟಿಸಲಾಗುವುದು’ ಎಂದು ತಿಳಿಸಿದರು.
ಏಳು ಹುದ್ದೆ ಮಂಜೂರು
ಪರೀಕ್ಷಾ ಪೂರ್ವ ತರಬೇತಿ ಕೇಂದ್ರಕ್ಕೆ 2025ರ ಮೇ ತಿಂಗಳಲ್ಲಿ ಸರ್ಕಾರ ಒಟ್ಟು 7 ಹುದ್ದೆಗಳನ್ನು ಮಂಜೂರು ಮಾಡಿ ಆದೇಶಿಸಿದೆ. ಜಂಟಿ ನಿರ್ದೇಶಕರು ಕಚೇರಿ ಅಧೀಕ್ಷಕರು ಎಫ್‌ಡಿಎ ಎಸ್‌ಡಿಎ ದತ್ತಾಂಶ ನಮೂದು ಸಹಾಯಕರು ಕಚೇರಿ ಜವಾನ ಮತ್ತು ವಾಹನ ಚಾಲಕ ಹುದ್ದೆ ಮಂಜೂರಾಗಿವೆ ಎಂದು ತಿಳಿದುಬಂದಿದೆ.
ಕಳೆದ ಬಾರಿ ಸಮಾಜ ಕಲ್ಯಾಣ ಇಲಾಖೆ ಸಚಿವನಾಗಿದ್ದಾಗ ಪರೀಕ್ಷಾಪೂರ್ವ ತರಬೇತಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿತ್ತು. ನಂತರ ಬಂದ ಸರ್ಕಾರ ಕಾಳಜಿವಹಿಸಲಿಲ್ಲ. ಈಗ ಮತ್ತೆ ನಮ್ಮ ಸರ್ಕಾರ ಬಂದ ಮೇಲೆ ಪೂರ್ಣಗೊಳಿಸಲಾಗಿದೆ- ಪ್ರಿಯಾಂಕ್ ಖರ್ಗೆ, ಐಟಿಬಿಟಿ ಸಚಿವ
ಪ್ರಬುದ್ಧ ಅಕಾಡೆಮಿಯಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗೆ ಟೆಂಡರ್ ನೀಡಿದ್ದು ಇದೇ ಜನವರಿಯಲ್ಲಿ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶೀಘ್ರ ದಿನಾಂಕ ನಿಗದಿ ಆಗಲಿದೆ.- ಪ್ರೀತಿ ಚಂದ್ರಶೇಖರ ದೊಡ್ಡಮನಿ, ಜಂಟಿ ನಿರ್ದೇಶಕಿ ಸಮಾಜ ಕಲ್ಯಾಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.