ADVERTISEMENT

ಕಲಬುರಗಿ: ‘ಜೀವನ ರೂಪಿಸಿದ ಸಂಸ್ಥೆಗೆ ಕೊಡುಗೆ ನೀಡಿ’

ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಹಳೇ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 0:15 IST
Last Updated 22 ಫೆಬ್ರುವರಿ 2026, 0:15 IST
<div class="paragraphs"><p>ಕಲಬುರಗಿಯ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ಶನಿವಾರದಿಂದ ಎರಡು ದಿನ ಹಮ್ಮಿಕೊಂಡಿರುವ ಹಳೇ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಉದ್ಘಾಟಿಸಿದರು  </p></div>

ಕಲಬುರಗಿಯ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ಶನಿವಾರದಿಂದ ಎರಡು ದಿನ ಹಮ್ಮಿಕೊಂಡಿರುವ ಹಳೇ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಉದ್ಘಾಟಿಸಿದರು

   

ಪ್ರಜಾವಾಣಿ ಚಿತ್ರ

ಕಲಬುರಗಿ: ‘1958ರಿಂದ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕಲಿತ ಅನೇಕರು ಉನ್ನತ ಸ್ಥಾನಗಳಲ್ಲಿದ್ದಾರೆ. ಇಂದು ಜಗತ್ತಿನೆಲ್ಲೆಡೆ ಪಸರಿಸಿದ್ದಾರೆ. ಅವರು ಜೀವನ ರೂಪಿಸಿದ ತಮ್ಮ ಸಂಸ್ಥೆಗೆ ಮತ್ತು ಮುಂಬರುವ ವಿದ್ಯಾರ್ಥಿಗಳ ಬೆಳವಣಿಗೆಗೆ ಕೊಡುಗೆ ನೀಡಬೇಕು’ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.

ADVERTISEMENT

ನಗರದ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ಎರಡು ದಿನ ಹಮ್ಮಿಕೊಂಡಿರುವ ಕಾಲೇಜಿನ ಹಳೇ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಬೇರೆಬೇರೆ ದೇಶಗಳಲ್ಲಿ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಸೇವಾ ವಲಯದಲ್ಲಿ ನಮ್ಮ ಸಾಮರ್ಥ್ಯ ದ್ವಿಗುಣಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೇವಲ ಪದವಿ ನೀಡಿ ಹೊರಹಾಕುವುದಲ್ಲ, ಬದಲಿಗೆ ಅವರಿಗೆ ಕೌಶಲಗಳೊಂದಿಗೆ ಸಜ್ಜುಗೊಳಿಸಿ ದೇಶಕ್ಕೆ ಅರ್ಪಿಸಬೇಕಾಗಿದೆ. ಇದಕ್ಕಾಗಿ ಇಂಡಿಯನ್ ಸೆಮಿ ಕಂಡಕ್ಟರ್‌ ಮಿಷನ್‌ನಲ್ಲಿ ಕೇಂದ್ರ ಸರ್ಕಾರದಿಂದ ₹40 ಸಾವಿರ ಕೋಟಿಯನ್ನು ಸಹಾಯಧನ ಕೊಟ್ಟು ಹೂಡಿಕೆ ಮಾಡುತ್ತಿದೆ. ಎಐ ಮಿಷನ್‌ಗೆ ₹10,300 ಕೋಟಿ ನೆರವು ನೀಡುತ್ತಿದೆ’ ಎಂದರು.

‘ನಮ್ಮ ದೇಶದ ಶಿಕ್ಷಣ ಸಂಸ್ಥೆಗಳು ಬಹಳ ದೊಡ್ಡ ಪ್ರಮಾಣದಲ್ಲಿ ತಮ್ಮ ಮೂಲಸೌಕರ್ಯಗಳನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಪ್ರತಿ ಸಂಸ್ಥೆ ಶ್ರೇಷ್ಠತೆ ಸಾಧಿಸಲು ಭಾರತ ಸರ್ಕಾರವು ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದೆ. ಇದರ ಪರಿಣಾಮ ಕಳೆದ 8–10 ವರ್ಷಗಳಲ್ಲಿ ಕ್ಯೂಎಸ್‌ ವರ್ಲ್ಡ್‌ ಯುನಿವರ್ಸಿಟಿ ರ್‍ಯಾಂಕಿಂಗ್‌ನಲ್ಲಿ ಭಾರತದ 54 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿವೆ’ ಎಂದು ತಿಳಿಸಿದರು.

‘ಭಾರತವು ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ 4ನೇ ಸ್ಥಾನದಲ್ಲಿದೆ. ಮಾತ್ರವಲ್ಲ, ಇಂದು ಆರ್ಥಿಕವಾಗಿ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ಇದರಿಂದಾಗಿ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗುವತ್ತ ದಾಪುಗಾಲಿಡುತ್ತಿದೆ. ಜಗತ್ತಿನ ಬಹಳಷ್ಟು ದೇಶಗಳಿಗೆ ವಯಸ್ಸಾಗುತ್ತಿದೆ. ಆದರೆ, ನಮ್ಮದೇಶ ದಿನದಿಂದ ದಿನಕ್ಕೆ ಯುವ ಭಾರತವಾಗುತ್ತಿದ್ದು, ನಮ್ಮಲ್ಲಿ ಶೇ 65ರಷ್ಟು ಯುವ ಸಮುದಾಯವಿದೆ’ ಎಂದರು.

‘ದೇಶದಲ್ಲಿ ಆವಿಷ್ಕಾರಗಳ ಪ್ರಮಾಣ ಹೆಚ್ಚಿದೆ. ಇಂದು ಸುಮಾರು 92,000 ಪೇಟೆಂಟ್ ಅರ್ಜಿ ಸಲ್ಲಿಕೆ ಆಗಿರುವುದಕ್ಕೆ ಸಂಶೋಧನೆ ಮತ್ತು ಕಲಿಕೆಗೆ ಪೂರಕವಾಗಿರುವ ‘ಒನ್‌ ನೇಷನ್‌; ಒನ್‌ ಎಕ್ಸೆಸ್‌’ನಂತಹ ಯೋಜನೆ ಕಾರಣ. ಎಐ ಸಮಿಟ್‌ ನಮ್ಮ ದೇಶದಲ್ಲಿ ನಡೆದಿರುವುದು ಬಹಳ ಅಭಿಮಾನದ ಸಂಗತಿಯಾಗಿದೆ. ಕೃತಕ ಬುದ್ಧಿಮತ್ತೆ ಮತ್ತು ಅಪ್ಲಿಕೇಷನ್‌ ಆವಿಷ್ಕಾರದಲ್ಲಿ ಭಾರತವು ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ’ ಎಂದರು.

ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ‘ಪಿಡಿಎ ಕಾಲೇಜು ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಉತ್ತಮ ಸ್ಥಾನಕ್ಕೆ ಹೋಗುವಂಥ ಕೆಲಸ ಎಲ್ಲರೂ ಕೊಡಬೇಕು. ಹಳೇ ವಿದ್ಯಾರ್ಥಿಗಳು ಉದ್ಯೋಗ ಕೊಡುವ ಮತ್ತು ಉದ್ಯೋಗದಾತರಿಗೆ ಪ್ರೋತ್ಸಾಹ ನೀಡುವ ಸ್ಥಾನದಲ್ಲಿ ಬಹಳಷ್ಟು ಜನ ಇದ್ದು, ಅವರು ಈಗಿನ ವಿದ್ಯಾರ್ಥಿಗಳಿಗೆ ಇಲ್ಲಿ ಓದಿದರೆ ಉದ್ಯೋಗ ಸಿಗುತ್ತದೆ ಎನ್ನುವ ಆತ್ಮಸ್ಥೈರ್ಯ ತುಂಬಬೇಕು’ ಎಂದು ತಮ್ಮ 1979–85ನೇ ಬ್ಯಾಚ್‌ನ ದಿನಗಳನ್ನು ಸ್ಮರಿಸಿದರು.

ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಶಶೀಲ್‌ ಜಿ.ನಮೋಶಿ ಅಧ್ಯಕ್ಷತೆ ವಹಿಸಿದ್ದರು.

ನಿವೃತ್ತ ಐಪಿಎಸ್‌ ಅಧಿಕಾರಿ ರಾಘವೇಂದ್ರ ಔರಾದಕರ್‌, ಶಾಸಕ ಬಸವರಾಜ ಮತ್ತಿಮಡು, ಎಂಎಲ್ಸಿಗಳಾದ ಸುನೀಲ್ ವಲ್ಯಾಪುರೆ, ಜಗದೇವ ಗುತ್ತೇದಾರ, ಮಾಜಿ ಸಂಸದ ಡಾ.ಉಮೇಶ್‌ ಜಾಧವ, ಪ್ರಮುಖರಾದ ವಿಜಯಕುಮಾರ ದೇಶಮುಖ, ಎಚ್‌ಕೆಇ ಉಪಾಧ್ಯಕ್ಷ ರಾಜಾ ಬಿ.ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಎಸ್‌.ಚಿಂಚೋಳಿ, ಜಂಟಿ ಕಾರ್ಯದರ್ಶಿ ಕೈಲಾಶ ಬಿ.ಪಾಟೀಲ, ಸದಸ್ಯರಾದ ಅರುಣಕುಮಾರ ಎಂ.ಪಾಟೀಲ, ಶರಣಬಸಪ್ಪ ಆರ್‌.ಹರವಾಳ, ಅನಿಲಕುಮಾರ ಬಿ.ಪಟ್ಟಣ, ರಜನೀಶ್‌ ಎಸ್‌.ವಾಲಿ, ಪಾಲಿಕೆ ಉಪಮೇಯರ್‌ ತೃಪ್ತಿ ಎಸ್‌.ಲಾಖೆ, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ್‌, ಐಎಎಸ್‌ ಅಧಿಕಾರಿ ಗಂಗೂಬಾಯಿ ಮಾನಕರ್‌, ಪ್ರಾಂಶುಪಾಲ ಎಸ್‌.ಆರ್‌.ಪಾಟೀಲ ಉಪಸ್ಥಿತರಿದ್ದರು.

ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಜಾಗತಿಕ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಳೇ ವಿದ್ಯಾರ್ಥಿಗಳು

ಕಾಲೇಜು ದಿನ ನೆನೆದ ಸಚಿವ ಖಂಡ್ರೆ

‘ಮಹಾದೇವಪ್ಪ ರಾಂಪುರೆ ಸೇರಿದಂತೆ ಅನೇಕ ಜನ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಅವರ ಶ್ರಮದಿಂದ ಸಾವಿರಾರು ಬಡಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಕ್ಕಿದೆ. ಇದರಿಂದ ಅನೇಕ ಜನ ಇಂದು ದೇಶ–ವಿದೇಶಗಳಲ್ಲಿ ರಾಷ್ಟ್ರ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾನೂ ಈ ಸಂಸ್ಥೆಯಿಂದ 1985–86ರಲ್ಲಿ ಮೆಕಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದೇನೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ತಮ್ಮ ಕಾಲೇಜು ದಿನಗಳನ್ನು ನೆನೆದ ಖಂಡ್ರೆ ‘ಎಸ್‌.ವಿ.ಮಲ್ಲಾಪುರ ಪ್ರೊ.ಚೌಧರಿ ಉಪ್ಪಿನ್‌ ಸರ್‌ ಸೇರಿದಂತೆ ಅನೇಕ ಶಿಕ್ಷಕರು ಶಿಸ್ತು ಮತ್ತು ಕಾಳಜಿಯಿಂದ ನಮಗೆ ಶಿಕ್ಷಣ ನೀಡಿದರು. ಪದವಿ ಅಂತಿಮ ವರ್ಷದಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು ನನಗೇ ಆಶ್ಚರ್ಯದ ಸಂಗತಿಯಾಗಿತ್ತು. ಇದರಲ್ಲಿ ನಮ್ಮ ಶಿಕ್ಷಕರ ಶ್ರಮ ಪ್ರೋತ್ಸಾಹ ಬಹಳಷ್ಟಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.