ADVERTISEMENT

ಯತ್ನಾಳ ಆರೋಪ: ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ಬಿ.ಆರ್‌ ಪಾಟೀಲ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಮೇ 2022, 2:50 IST
Last Updated 9 ಮೇ 2022, 2:50 IST
ಬಿ.ಆರ್.ಪಾಟೀಲ
ಬಿ.ಆರ್.ಪಾಟೀಲ   

ಕಲಬುರಗಿ: ‘ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮನ್ನು ಮುಖ್ಯಮಂತ್ರಿ ಮಾಡಲು ₹ 2,500 ಕೋಟಿ ಕೇಳಲಾಗಿತ್ತು ಎಂಬುದು ಗಂಭೀರ ಆರೋಪವಾಗಿದ್ದು, ಇದು ಪ್ರಜಾಪ್ರಭುತ್ವದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದ್ದರಿಂದ ಈ ಕೂಡಲೇ ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕು’ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಒತ್ತಾಯಿಸಿದ್ದಾರೆ.

‘ಯತ್ನಾಳ ಸಾಮಾನ್ಯ ವ್ಯಕ್ತಿಯಲ್ಲ. ಬಿಜೆಪಿಯ ಪ್ರಮುಖ ನಾಯಕ, ಕೇಂದ್ರದ ಮಾಜಿ ಸಚಿವರಾಗಿದ್ದವರು. ಅವರ ಆರೋಪದಲ್ಲಿ ಹುರುಳಿರಬೇಕು. ಆದ್ದರಿಂದ ರಾಷ್ಟ್ರಪತಿ ಅವರು ಈ ಬಗ್ಗೆ ವಿಸ್ತೃತ ತನಿಖೆಗೆ ಆದೇಶಿಸಬೇಕು. ಯಾವುದೇ ಸಂವಿಧಾನಾತ್ಮಕ ಹುದ್ದೆಗಳನ್ನು ಹಣಕ್ಕಾಗಿ ಮಾರುವುದು ಅಕ್ಷಮ್ಯ. ಯಾರು ಹಣ ಕೇಳಿದ್ದರು ಎಂಬುದು ಯತ್ನಾಳ ಅವರು ಬಹಿರಂಗಪಡಿಸಲಿ’ ಎಂದು ಅವರು ಆಗ್ರಹಿಸಿದ್ದಾರೆ.

‘ಬಸವನಗೌಡ ಪಾಟೀಲ ಅವರು ನಿರಂತರವಾಗಿ ಪಕ್ಷವಿರೋಧಿ ಹೇಳಿಕೆ ನೀಡುತ್ತಿದ್ದರೂ ಪಕ್ಷದ ಹೈಕಮಾಂಡ್ ಅವರ ವಿರುದ್ಧ ಯಾವುದೇ
ಕ್ರಮ ಜರುಗಿಸಿಲ್ಲ. ಬಹುಶಃ ಆರ್‌ಎಸ್‌ಎಸ್‌ ಯತ್ನಾಳ ಅವರನ್ನು ಮುಂದಿಟ್ಟುಕೊಂಡು ಆಟವಾಡಿಸುತ್ತಿರಬಹುದು ಎಂಬ ಗುಮಾನಿ ಇದೆ. ಮುಖ್ಯಮಂತ್ರಿ ಹುದ್ದೆಗೆ ₹ 2,500 ಕೋಟಿ ಆಮಿಷ ಸೇರಿ ಸರ್ಕಾರದ ಇತ್ತೀಚಿನ ಹಗರಣದ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಬಯಲು ಮಾಡಬೇಕು’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.