ADVERTISEMENT

ಡೀನ್ ವಿರುದ್ಧ ಕ್ರಮಕ್ಕೆ ಒತ್ತಾಯ

ಜಿಮ್ಸ್‌ನಿಂದ ಗುತ್ತಿಗೆ ಕಾರ್ಮಿಕರ ವಜಾ; ಆರೋಪ

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 10:34 IST
Last Updated 24 ಜೂನ್ 2018, 10:34 IST
ಎಸ್‌.ಕೆ. ಕಾಂತಾ
ಎಸ್‌.ಕೆ. ಕಾಂತಾ   

ಕಲಬುರ್ಗಿ: ‘ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ 90 ಜನರನ್ನು ಏಕಾಏಕಿ ತೆಗೆದು ಹಾಕಲಾಗಿದ್ದು, ಇದಕ್ಕೆ ಕಾರಣರಾಗಿರುವ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಡೀನ್ ವಿರುದ್ಧ ಕಾರ್ಮಿಕ ಇಲಾಖೆ ಕ್ರಮಕೈಗೊಳ್ಳಬೇಕು’ ಎಂದು ಮಾಜಿ ಸಚಿವ ಎಸ್.ಕೆ.ಕಾಂತಾ ಒತ್ತಾಯಿಸಿದರು.

‘2008ರಿಂದ 2016ರ ವರೆಗೆ 90 ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ವಾರ್ಡ್‌ಬಾಯ್, ಆಯಾ, ಬಟ್ಟೆ ತೊಳೆಯುವುದು ಹಾಗೂ ಸ್ವಚ್ಛತಾ ಕೆಲಸ ಮಾಡಿಕೊಂಡು ಬಂದಿದ್ದಾರೆ. ಜಿಲ್ಲಾ ಆಸ್ಪತ್ರೆ ಜಿಮ್ಸ್‌ ವ್ಯಾಪ್ತಿಗೆ ಸೇರಿದ್ದರಿಂದ 2017ರಿಂದ ಇವರನ್ನು ಕೆಲಸದಿಂದ ತೆಗೆದು ಹಾಕಿ, ಬೇರೆಯವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಈ ಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘45 ಕಾರ್ಮಿಕರಿಗೆ 14 ತಿಂಗಳಿನಿಂದ ವೇತನ ನೀಡಿಲ್ಲ. ಭವಿಷ್ಯ ನಿಧಿ (ಪಿಎಫ್), ಇಎಸ್‌ಐ ವಂತಿಗೆಯನ್ನು ಸಂಬಳದಿಂದ ಕಡಿತ ಮಾಡಿಕೊಂಡಿದ್ದರೂ ಖಾತೆಗೆ ಜಮಾ ಮಾಡಿಲ್ಲ. ಈ ಬಗ್ಗೆ ಕಾರಣ ಕೇಳಿ ಕಾರ್ಮಿಕ ಇಲಾಖೆ ನೋಟಿಸ್ ಕೂಡ ಜಾರಿ ಮಾಡಿದೆ. ಆದಾಗ್ಯೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದಾಗಿ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ’ ಎಂದು ಆರೋಪಿಸಿದರು.

ADVERTISEMENT

‘ಈ ಹಿಂದೆ 7–8 ಜನ ಗುತ್ತಿಗೆದಾರರು ಬದಲಾಗಿದ್ದರೂ 2008ರಲ್ಲಿ ಕೆಲಸಕ್ಕೆ ಸೇರಿದ್ದ ಎಲ್ಲ ಕಾರ್ಮಿಕರನ್ನು ಮುಂದುವರಿಸಲಾಗಿತ್ತು. ಆದರೆ ಈಗ 10 ವರ್ಷ ಕೆಲಸ ಮಾಡಿದವರನ್ನು ಬಿಟ್ಟು, ಕಾನೂನು ಬಾಹಿರವಾಗಿ ಹೊಸದಾಗಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಜಿಮ್ಸ್ ಡೀನ್ ವಿರುದ್ಧ ಎಂಟು ದಿನಗಳೊಳಗೆ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಯುವ ಹೋರಾಟಗಾರ ರಾಜು ಹದನೂರ ಮಾತನಾಡಿ, ‘2017ರಲ್ಲಿ ಲಿಂಗರಾಜ ತಾರಫೈಲ್ ಎಂಬುವರು ಗುತ್ತಿಗೆ ಪಡೆದಿದ್ದಾರೆ. ಇವರು ಅಂದಿನ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ. ಶರಣಪ್ರಕಾಶ ಪಾಟೀಲ ಅವರ ಆಪ್ತರು. ಈ ಹಿಂದೆ ಕೆಲಸದಲ್ಲಿದ್ದ 8 ಜನರನ್ನು ಮಾತ್ರ ಉಳಿಸಿಕೊಂಡು, ಇನ್ನುಳಿದ ಎಲ್ಲರನ್ನೂ ಸೇಡಂ ತಾಲ್ಲೂಕಿನಿಂದ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಶರಣಪ್ರಕಾಶ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.