ಕಲಬುರಗಿ: ‘ಮೈಸೂರಿನ ಶಾರ್ಪ್(ಸ್ವಿಸ್) ಮ್ಯಾನ್ ಪವರ್ ಏಜೆನ್ಸಿಯು ಸಮಾಜ ಕಲಾಣ್ಯ ಇಲಾಖೆ ಹೊರಗುತ್ತಿಗೆ ನೌಕರರ ವೇತನದಲ್ಲಿ ಕಡಿತಗೊಳಿಸುತ್ತಿದೆ. ಈ ಸಂಬಂಧ ನೀಡಿರುವ ದೂರುಗಳ ಪರಿಶೀಲನೆ ನಡೆಸಿ, ಏಜೆನ್ಸಿ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಜುಲೈ 23ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪ್ಪಳ್ಳಿ ಆಗ್ರಹಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಮಿಕರ ವೇತನದಲ್ಲಿ ಕಡಿತಗೊಳಿಸುವ ಅವ್ಯವಹಾರಕ್ಕೆ ಬುನಾದಿ ಹಾಕಿದ್ದು ಇಲಾಖೆ ಜಂಟಿ ನಿರ್ದೇಶಕ ಅಲ್ಲಾ ಬಕ್ಷ. ಏಜೆನ್ಸಿಯು, ಸರ್ಕಾರ ನಿಗದಿ ಪಡಿಸಿರುವ ಕನಿಷ್ಠ ವೇತನ ಪಾವತಿಸುತ್ತಿಲ್ಲ ಎಂದು ಹೋರಾಟ ನಡೆಸಿದಾಗ, ಪೂರ್ಣ ವೇತನ ಕೊಡಿಸಲಾಗುವುದು ಎಂದು ಆಶ್ವಾಸನೆ ನೀಡಿ ಮೋಸ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ನಮ್ಮ ವೇತನದಲ್ಲಿ ಕಡಿತಗೊಳ್ಳುತ್ತಿದೆ. ಆದರೆ ನಮ್ಮ ಗೋಳು ಕೇಳುವವರಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
‘2022ರಲ್ಲಿ 100 ಕಾರ್ಮಿಕರು ಮತ್ತು 2024ರ ಫೆಬ್ರುವರಿಯಲ್ಲಿ 200 ನೌಕರರು ತಮ್ಮ ಬ್ಯಾಂಕ್ ಸ್ಟೇಟಮೆಂಟ್ ಸಹಿತವಾಗಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರು. ಆದರೆ ಸಲ್ಲಿಸಿದ್ದ ದೂರಿನ ಅರ್ಜಿಗಳೇ ನಾಪತ್ತೆಯಾಗಿವೆ. ಈ ಸಂಬಂಧ ವಿಚಾರಿಸಿದರೆ ತಾಲ್ಲೂಕು ಕಚೇರಿಗೆ ಕಳುಹಿಸಲಾಗಿದೆ ಎಂದು ಹೇಳುತ್ತಾರೆ. ತಾಲ್ಲೂಕು ಕಚೇರಿಯಲ್ಲಿ ಕೇಳಿದರೆ, ನಮಗೆ ಯಾವುದೇ ಕಡತಗಳು ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಇದನ್ನು ಗಮನಿಸಿದರೆ ಈ ಅವ್ಯವಹಾರದಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂಬ ಸಂದೇಹ ಮೂಡುತ್ತಿದೆ. ಹೀಗಾಗಿ ದೂರಿನ ಅರ್ಜಿಗಳು ನಾಪತ್ತೆಯಾಗಿರುವ ಕುರಿತು ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.
‘ರಕ್ಷಣೆ ಮಾಡಬೇಕಿದ್ದ ಕಾರ್ಮಿಕ ಇಲಾಖೆಯು ಕಾರ್ಮಿಕರನ್ನು ಭಕ್ಷಣೆ ಮಾಡುತ್ತಿದೆ. ಕಳೆದ 2 ವರ್ಷಗಳಿಂದ ಕಡಿಮೆ ವೇತನ ಪಾವತಿಸುತ್ತಿರುವ ಏಜೆನ್ಸಿಯ ವಿರುದ್ಧ ಸಲ್ಲಿಸಿರುವ ಒಂದೇ ಒಂದು ದೂರಿನ ಅರ್ಜಿಯನ್ನು ಪರಿಶೀಲನೆ ಮಾಡಿಲ್ಲ. ಏಜೆನ್ಸಿಯವರು ನಿಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗುವುದು ಎಂದು ಬೆದರಿಕೆ ಹಾಕುತ್ತಿದ್ದಾರೆ. ಇತ್ತ ಅಧಿಕಾರಿಗಳು ಶೋಷಣೆ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕೂಡ ನಮ್ಮ ದೂರಿನ ಅರ್ಜಿ ಪರಿಶೀಲನೆಗೆ ಸ್ಪಂದಿಸಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಉಪಾಧ್ಯಕ್ಷ ಮೇಘರಾಜ ಕಠಾರೆ, ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಬಂಡಿ, ಜ್ಯೋತಿ ದೊಡ್ಡಮನಿ, ಗೌತಮ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.