ADVERTISEMENT

ರಮೇಶ ಜಾರಕಿಹೊಳಿ ಬಂಧನ ಏಕಿಲ್ಲ?: ಡಾ.ಶರಣ ಪ್ರಕಾಶ ಪಾಟೀಲ

ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲವೇ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 3:25 IST
Last Updated 30 ಮಾರ್ಚ್ 2021, 3:25 IST
ಶರಣಪ್ರಕಾಶ ಪಾಟೀಲ
ಶರಣಪ್ರಕಾಶ ಪಾಟೀಲ   

ಕಲಬುರ್ಗಿ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ 376 (ಸಿ) ಕಲಂನಡಿ ಗಂಭೀರ ಪ್ರಕರಣ ದಾಖಲಾದರೂ ಇನ್ನೂ ಅವರನ್ನು ಬಂಧಿಸಿಲ್ಲವೇಕೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆಯೇ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರವನ್ನೇ ಕೆಡವಿದ ನನಗೆ ಈ ಪ್ರಕರಣ ಯಾವ ಮಹಾ ಎಂದು ರಮೇಶ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ಗಂಭೀರ ಪ್ರಕರಣ ದಾಖಲಾದ ತಕ್ಷಣ ಸಾಮಾನ್ಯರಾಗಿದ್ದರೆ ಜೈಲಿಗೆ ಕಳಿಸುತ್ತಿದ್ದರು. ಆದರೆ, ಸರ್ಕಾರದ ಪ್ರಭಾವಿ ಶಾಸಕ ಎಂಬ ಕಾರಣಕ್ಕೆ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆಯೇ’ ಎಂದರು.

‘ಸ್ವತಃ ಸಂತ್ರಸ್ತ ಯುವತಿ ದೂರು ಕೊಟ್ಟರೂ ರಮೇಶ ಮೇಲೆ ಕಾನೂನು ಕ್ರಮ‌ ತೆಗೆದುಕೊಳ್ಳುತ್ತಿಲ್ಲ. ಮಾನ‌ ಮರ್ಯಾದೆ ಎಲ್ಲ ಗಾಳಿಗೆ ತೂರಿ ರಮೇಶ ಅವರ ರಕ್ಷಣೆಗೆ ಮಾನಗೇಡಿ ಸರ್ಕಾರ ನಿಂತಿದೆ’ ಎಂದು ಟೀಕಿಸಿದರು.

ADVERTISEMENT

‘ಬೆಳಗಾವಿಯಲ್ಲಿ ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಲೆ ಗೂಂಡಾಗಳ ಮೂಲಕ‌ ಹಲ್ಲೆ ಮಾಡಿಸುವ ಕೆಲಸಕ್ಕೆ ಜಾರಕಿಹೊಳಿ ಮುಂದಾಗುತ್ತಾರೆ. ಇದನ್ನು ಕಾನೂನು ಸುವ್ಯವಸ್ಥೆ ಎನ್ನಬೇಕಾ? ಸಿಡಿ ಪ್ರಕರಣದಲ್ಲಿ ಅಧಿಕಾರದ ದುರ್ಬಳಕೆ ಆಗುತ್ತಿದೆ. ಎಸ್ಐಟಿ ರಮೇಶ ಜಾರಕಿಹೊಳಿ ಮತ್ತು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಆರೋಪಿ ಸ್ಥಾನದಲ್ಲಿರುವ ರಮೇಶ ಅವರನ್ನು ಬಂಧಿಸುವುದು ಬಿಟ್ಟು, ಅವರ ಪರವಾಗಿ ಗೃಹ ಸಚಿವರು ಹೇಳಿಕೆ ಕೊಡುತ್ತಿದ್ದಾರೆ‌. ಇದಕ್ಕಿಂತ ನಾಚಿಕಗೇಡಿತನದ ಸಂಗತಿ ಯಾವುದೂ ಇಲ್ಲ’ ಎಂದು ಟೀಕಿಸಿದರು.

ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ‘ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಸ್ಐಟಿಗೆ ಯಾವುದೇ ಅಧಿಕಾರ ಕೊಟ್ಟಿಲ್ಲ. 22 ಜನರ ಎಸ್ಐಟಿ ತಂಡ ಇದ್ದರೂ ಯುವತಿಯನ್ನು ಪತ್ತೆ ಹಚ್ಚುವ ಕೆಲಸ ಆಗುತ್ತಿಲ್ಲ. ತನಿಖಾ ತಂಡಕ್ಕೆ ಅಧಿಕಾರ ನೀಡುವ ಕುರಿತು ಇನ್ನೂ ಸರ್ಕಾರಿ ಆದೇಶ ಹೊರಬಿದ್ದಿಲ್ಲ. ಎಸ್ಐಟಿ ಕೆಲವೇ ಕೆಲವು ವಿಚಾರಗಳ ಮಾಹಿತಿ ಪಡೆಯುತ್ತಿದೆ. ಎಸ್‌ಐಟಿ ಮೂಲಕ ಸಿ.ಡಿ. ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆಯೇ ಹೊರತು ಯುವತಿಯ ದೂರಿನ ಅನುಸಾರ ಆರೋಪಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಿಜೆಪಿಯವರೇ ಆದ ಬಾಲಚಂದ್ರ ಜಾರಕಿಹೊಳಿ ಇದನ್ನು ಹನಿ ಟ್ರ್ಯಾಪ್ ಎನ್ನುತ್ತಾರೆ. ರಮೇಶ ಈ ಸಿಡಿಯಲ್ಲಿ ಇರೋದು ನಾನಲ್ಲ ಅನ್ನುತ್ತಾರೆ. ಹಾಗಾದರೆ, ಇದರ ಹಿಂದೆ ಇರುವುದು ಯಾರು? ಇದು ಯಡಿಯೂರಪ್ಪ ಮುಕ್ತ ಬಿಜೆಪಿ ಮಾಡುವ ಒಂದು ಭಾಗವೇ? ಇದು ಲಂಚ, ಮಂಚದ ಸರ್ಕಾರವೇ’ ಎಂದು ವ್ಯಂಗ್ಯವಾಡಿದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಕಾರಿನ ಮೇಲೆ ಚಪ್ಪಲಿ ತೂರಿ ಗೂಂಡಾಗಿರಿ ಪ್ರದರ್ಶಿಸಿದ ರಮೇಶ ಜಾರಕಿಹೊಳಿ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷಜಗದೇವ ಗುತ್ತೇದಾರ ಆಗ್ರಹಿಸಿದರು.

ಶಾಸಕಿ ಕನೀಜ್ ಫಾತೀಮಾ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮನಕೂರ, ಮಾಜಿ ಮೇಯರ್ ಶರಣಕುಮಾರ ಮೋದಿ, ಮುಖಂಡ ಸುಭಾಷ ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.