ADVERTISEMENT

ಸಾಂಸ್ಕೃತಿಕ ಸಂಘ ಮಾಡಿದ ವೆಚ್ಚಕ್ಕೆ ಲೆಕ್ಕವಿಲ್ಲವೇ?- ಶಾಸಕ ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 3:17 IST
Last Updated 29 ಡಿಸೆಂಬರ್ 2021, 3:17 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ನಿಯಮಾವಳಿಗಳನ್ನು ಮೀರಿ ಹಣ ಖರ್ಚು ಮಾಡುತ್ತಿರುವ ಬಗ್ಗೆ ಯೋಜನಾ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿದೆ. ಫಲಾನುಭವಿಗಳ ಪಟ್ಟಿಯ ಬಗ್ಗೆ ಸ್ಪಷ್ಟತೆ ಇಲ್ಲದೇ ಹಣವನ್ನು ಖರ್ಚು ಮಾಡಲಾಗುತ್ತಿದೆ. ಈ ಸಂಘಕ್ಕೆ ಕೆಕೆಆರ್‌ಡಿಬಿಗೆ ಬರಬೇಕಿದ್ದ ಹಣವನ್ನು ವರ್ಗಾವಣೆ ಮಾಡಿದ್ದು ಸರಿಯೇ’ ಎಂದು ಕೆಪಿಸಿಸಿ ವಕ್ತಾರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘಕ್ಕೆ ಪ್ರತ್ಯೇಕವಾಗಿ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದ್ದರು. ಆದರೆ, ಈಗ ನೋಡಿದರೆ ಕೆಕೆಆರ್‌ಡಿಬಿ ಹಣದಲ್ಲೇ ಒಂದು ಭಾಗವನ್ನು ಕೊಡುತ್ತಿದ್ದಾರೆ. ಇದು 371 (ಜೆ) ಕಲಂನ ಸ್ಪಷ್ಟ ಉಲ್ಲಂಘನೆಯಾಗಲಿದೆ’ ಎಂದರು.

‘ಈ ಬೆಳವಣಿಗೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಸರ್ಕಾರ ಶಿಸ್ತು ಕ್ರಮ ಜರುಗಿ ಸಬೇಕು. ಸಂಘದ ಪದಾಧಿಕಾರಿಗಳಿಗೆ ಕಾನೂನಿನ ಬಗ್ಗೆ ಅ ಷ್ಟೊಂದು ಮಾಹಿತಿ ಇರಲಿಕ್ಕಿಲ್ಲ. ಆದರೆ, ಅಧಿಕಾರಿ ಗಳು ಏನು ಮಾಡುತ್ತಿದ್ದಾರೆ’ ಎಂದು ಅವರು ಹರಿಹಾಯ್ದರು. ‘ಸಂಘವು ಸರ್ಕಾರದ ವಿವಿಧ ಇಲಾಖೆಗಳು ಕೈಗೊಳ್ಳದ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೂ, ಫಲಾನುಭವಿಗಳಿಗೆ ಹಸು ವಿತರಣೆ, ವಿವಿಧೆಡೆ ಸಮುದಾಯ ಭವನ ನಿರ್ಮಾಣದಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಂಘದ ಕಚೇರಿ ಹಾಗೂ ಸಭಾಂಗಣಕ್ಕಾಗಿ ₹ 1.5 ಕೋಟಿಗೂ ಅಧಿಕ ವೆಚ್ಚ ಮಾಡಲಾಗುತ್ತಿದೆ. ಕೆಕೆಆರ್‌ಡಿಬಿಗೇ ಸರಿಯಾಗಿ ಹಣ ಬಿಡುಗಡೆಯಾಗದ ಸಂದರ್ಭದಲ್ಲಿ ಸಂಘಕ್ಕೆ ಕಟ್ಟಡ ಕಟ್ಟುವ ಅವಶ್ಯಕತೆ ಇತ್ತೇ’ ಎಂದು ಪ್ರಶ್ನಿಸಿದರು.

ADVERTISEMENT

ಟೆಂಡರ್ ತಡೆ ಹಿಡಿದಿದ್ದು ಏಕೆ?: ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಕೆಬಿಜೆಎನ್‌ಎಲ್‌ ಮೂಲಕ 7 ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದರು. ಟೆಂಡರ್ ಪ್ರಕ್ರಿಯೆ ಮುಗಿದು ತಾಂತ್ರಿಕ‌ ಬಿಡ್ ತೆರೆಯುವ ಸಂದರ್ಭದಲ್ಲಿ ಸಂಸದ ಡಾ. ಜಾಧವ ಅವರು ತಡೆಹಿಡಿದು ಮತ್ತೊಂದು ಬಾರಿ ಟೆಂಡರ್ ಕರೆಯುವಂತೆ ಮೌಖಿಕ ಸೂಚನೆ ನೀಡಿರುವುದಾಗಿ ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ. ಜಾಧವ ಅವರು ಯಾಕೆ ಈ ರೀತಿ ಅಡ್ಡಿ ಮಾಡುತ್ತಾರೆ. ಅದೇನು ಅವರು ತಂದಿದ್ದ ದುಡ್ಡೇ ಎಂದು ಹರಿಹಾಯ್ದರು.

ಚಿತ್ತಾಪುರ ತಾಲ್ಲೂಕಿನ ಬೆಳಗೇರಾ ಗ್ರಾಮದ ಭೀಮನಳ್ಳಿ ಪಂಚಾಯಿತಿಯಡಿ ನರೇಗಾ ಯೋಜನೆಯಡಿಯಲ್ಲಿ ಮಾಡಲಾರದ ಕೆಲಸಕ್ಕೆ ಬಿಲ್ ಪಾಸು ಮಾಡುವಂತೆ ಪಿಡಿಒಗೆ ಸಂಸದರು ಒತ್ತಾಯಿಸಿದ್ದಾರೆ. ಇದು ಅಧಿಕಾರದ ದುರಪಯೋಗವಲ್ಲವೇ ಎಂದು ಅವರು ಹೇಳಿದರು.

ಕಾಂಗ್ರೆಸ್ ಮುಖಂಡ ಸುಭಾಷ ರಾಠೋಡ ಮಾತನಾಡಿ, ‘ಚಿಂಚೋಳಿ ತಾಲ್ಲೂಕಿನಲ್ಲಿ ರಸ್ತೆ ನಿರ್ಮಾಣದಲ್ಲಿ ಕೋಟಿಗಟ್ಟಲೇ ಭ್ರಷ್ಟಾಚಾರ ನಡೆದಿದೆ. ಡಾಂಬರ್ ಇರುವ ರಸ್ತೆಯ ಮೇಲೆ ಮುರಮ್ ಹಾಕಿರುವುದಾಗಿ ಹೇಳಿ ಕೋಟಿಗಟ್ಟಲೇ ಲೂಟಿ ಮಾಡಲಾಗಿದೆ. ಐನಾಪುರ ಬಳಿಯ ಬಿಕ್ಕುನಾಯಕ ತಾಂಡಾವರೆಗೆ ಡಾಂಬರು ಇರುವ ರಸ್ತೆಯ ಮೇಲೆ ಮುರುಮ್ ಹಾಕಿರುವುದಾಗಿ ₹ 3.50 ಕೋಟಿ ಹಣ ಎತ್ತಲಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರವಿ ರಾಠೋಡ, ಯುವ ಕಾಂಗ್ರೆಸ್‌ ಮುಖಂಡ ಚೇತನ ಗೋನಾಯಕ ಇದ್ದರು.

‘ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆ’

‘ಬಂಜಾರ ಸಮುದಾಯದ ಕುಲಗುರುಗಳಾಗಿದ್ದ ರಾಮರಾವ ಮಹಾರಾಜರ ಸಹಿ ನಕಲಿ ಮಾಡಲಾಗಿದೆ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದ್ದಾರೆ. ಹಾಗಿದ್ದರೆ, ಪ್ರಧಾನಿ ಅವರಿಗೆ ತಲುಪಿಸಲಾದ ಆ ಸಹಿ ಮಾಡಿದ್ದು ಯಾರು, ಉದ್ದೇಶವೇನು ಎಂಬುದನ್ನು ಬಹಿರಂಗಪಡಿಸಬೇಕು. ಇಲ್ಲದಿದ್ದರೆ ಜಾಧವ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕಾಗುತ್ತದೆ’ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದರು.

‘ರಾಮರಾವ ಮಹಾರಾಜರ ಸಹಿ ನಕಲಿ ಎಂದು ಗೊತ್ತಾದ ಮೇಲೆ ಜಾಧವ ಯಾಕೆ ಸುಮ್ಮನೆ ಕೂತಿದ್ದರು? ಆಗಲೇ ಹೇಳಬಹುದಿತ್ತು. ಈ ಕುರಿತು ನಾನು ಪಂಚ ಪಶ್ನೆ ಕೇಳಿದ್ದೆ. ಅದಕ್ಕೆ ಇನ್ನೂ ಉತ್ತರ ಬಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.