ADVERTISEMENT

ಆಹಾರ ಪ್ರಯೋಗಾಲಯ ಬೆಳಗಾವಿಗೆ ‌ಸ್ಥಳಾಂತರಕ್ಕೆ ಪ್ರಿಯಾಂಕ್ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 12:22 IST
Last Updated 24 ಡಿಸೆಂಬರ್ 2020, 12:22 IST
   

ಕಲಬುರ್ಗಿ: 1989ರಿಂದಲೂ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಹಾರ ಪ್ರಯೋಗಾಲಯದ ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಗೆ ಸ್ಥಳಾಂತರಗೊಳಿಸುವ ನಿರ್ಧಾರಕ್ಕೆ ಕೆಪಿಸಿಸಿ ವಕ್ತಾರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ನವೀಕರಿಸಬಹುದಾದ ಇಂಧನ ಪ್ರಾದೇಶಿಕ ಕಚೇರಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಮೂಲಕ, ಕಲ್ಯಾಣ ಕರ್ನಾಟಕ ಭಾಗದ ರೈತರು ಹಾಗೂ ಜನಸಾಮಾನ್ಯರ ಮೇಲಿನ ತನ್ನ ಬೇಜವಾಬ್ದಾರಿತನವನ್ನು ಮುಂದುವರೆಸಿದ್ದ ರಾಜ್ಯ ಬಿಜೆಪಿ ಸರ್ಕಾರ, ಈಗ ಮತ್ತೊಮ್ಮೆ ತನ್ನ ಕಲ್ಯಾಣ ಕರ್ನಾಟಕ ವಿರೋಧಿ ಧೋರಣೆಯನ್ನು ತಾನೇ ಬಯಲು ಮಾಡಿದೆ.

ಈ ಬಾರಿ ಬಿಜೆಪಿಯ ಕಲ್ಯಾಣ ಕರ್ನಾಟಕ ವಿರೋಧಿ ನಡೆಗೆ ಬಲಿಯಾಗಿದ್ದು, ಆಹಾರ ಪ್ರಯೋಗಾಲಯ ವಿಭಾಗೀಯ ಕಚೇರಿ. ಇದಕ್ಕೆ ಆಯುಕ್ತರು ನೀಡಿದ ಕಾರಣವೂ ಅಸಮಂಜಸವಾಗಿದೆ. ಜಯದೇವ ಹೃದ್ರೋಗ ಸಂಸ್ಥೆಯ ಕಟ್ಟಡವನ್ನು ಇದೇ ಕಚೇರಿಯಲ್ಲಿ ಸ್ಥಾಪಿಸುವ ಉದ್ದೇಶದಿಂದ ವಿಭಾಗೀಯ ಕಚೇರಿಯನ್ನೇ ಬೆಳಗಾವಿಗೆ ಸ್ಥಳಾಂತರಿಸುವ ಸರ್ಕಾರದ ಈ ನಡೆಯನ್ನು ನಾನು ವಿರೋಧಿಸುತ್ತೇನೆ ಎಂದಿದ್ದಾರೆ.

ADVERTISEMENT

ಕ್ಷುಲ್ಲಕ ನೆಪವೊಡ್ಡಿ ವಿಭಾಗೀಯ ಕಚೇರಿಯೊಂದನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸ್ಥಳಾಂತರಿಸುತ್ತಿರುವುದು ಬಹುಶಃ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂದೆನಿಸುತ್ತದೆ.

ಜಿಲ್ಲೆಯ ಬಿಜೆಪಿ ನಾಯಕರಿಗೆ ಆಹಾರ ಪ್ರಯೋಗಾಲಯ ವಿಭಾಗೀಯ ಕಚೇರಿಯನ್ನು ಕಲಬುರ್ಗಿಯಲ್ಲಿ ಉಳಿಸಿಕೊಳ್ಳುವ ಆಸಕ್ತಿ ಇಲ್ವಾ? ಕಲಬುರ್ಗಿಯಲ್ಲಿ ಸರ್ಕಾರಿ ಕಟ್ಟವೊಂದವನ್ನು ದೊರಕಿಸಿಕೊಡುವುದಕ್ಕೆ ಬಿಜೆಪಿ ನಾಯಕರಿಗೆ ಅಷ್ಟೊಂದು ಕಷ್ಟವಾಗಿದ್ದರೆ, ನನಗೆ ತಿಳಿಸಲಿ. ಚಿತ್ತಾಪುರದಲ್ಲಿ ಮಿನಿ ವಿಧಾನಸೌಧ ಸೇರಿದಂತೆ ಅನೇಕ ಸರ್ಕಾರಿ ಕಟ್ಟಡಗಳಿದ್ದು, ನಾನೇ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುತ್ತೇನೆ ಎಂದು ತಿಳಿಸಿದ್ದಾರೆ.

ಹಿಂದಿನ ಕಾಂಗ್ರೆಸ್ ಸರ್ಕಾರಗಳು, ಕಲ್ಯಾಣ ಕರ್ನಾಟಕಕ್ಕೆ 371(ಜೆ) ವಿಶೇಷ ಸ್ಥಾನಮಾನ ಸೇರಿದಂತೆ, ಹಲವು ಯೋಜನೆಗಳನ್ನು, ಕಚೇರಿಗಳನ್ನು ಕಲ್ಯಾಣ ಕರ್ನಾಟಕಕ್ಕೆ ನೀಡುವ ಮೂಲಕ ಪ್ರಾದೇಶಿಕ ಅಸಮತೋಲನೆಯನ್ನು ನಿವಾರಿಸಲು ಮಾರ್ಗ ರೂಪಿಸಿದ್ದವು.

ಆದರೆ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಕಲ್ಯಾಣ ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಕೆಕೆಆರ್‌ಡಿಬಿ ಅನುದಾನ, ಪ್ರದೇಶಕ್ಕೆ ಸಚಿವ ಸ್ಥಾನ, ಪ್ರತ್ಯೇಕ ರೈಲ್ವೆ ವಿಭಾಗೀಯ ಕಚೇರಿ, ತೊಗರಿ ಹಾಗೂ ಹೆಸರು ಖರೀದಿ ಕೇಂದ್ರಗಳ ಸ್ಥಾಪನೆ, ಜವಳಿ ಪಾರ್ಕ್...ಹೀಗೆ ಪ್ರತಿ ವಿಚಾರದಲ್ಲೂ ಕಲ್ಯಾಣ ಕರ್ನಾಟಕಕ್ಕೆ ಅದರಲ್ಲೂ ವಿಶೇಷವಾಗಿ ಕಲಬುರ್ಗಿ ಜಿಲ್ಲೆಗೆ ಬಿಜೆಪಿ ದ್ರೋಹ ಬಗೆದಿದೆ.
ಇಂತಹ ನಿರ್ಲಜ್ಜ ಹಾಗೂ ಬೇಜಾವಾಬ್ದಾರಿ ಸರ್ಕಾರವನ್ನು ನಾವು ಎಂದೂ ನೋಡಿರಲಿಲ್ಲ.

ರಾಜ್ಯ ಸರ್ಕಾರದ ಈ ತುಘಲಕ್ ದರ್ಬಾರ್ ಇಲ್ಲಿಗೆ ನಿಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಪ್ರಿಯಾಂಕ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.