ADVERTISEMENT

ಸಿಎಎ, ಎನ್‌ಆರ್‌ಸಿ ಹಿಂದಕ್ಕೆ ಪಡೆಯಲು ಶಾಸಕ ಪ್ರಿಯಾಂಕ್‌ ಖರ್ಗೆ ಆಗ್ರಹ

ನರೇಂದ್ರ ಮೋದಿ, ಅಮಿತ್‌ ಶಾ ವಿರುದ್ಧ ಶಾಸಕ ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 14:46 IST
Last Updated 24 ಡಿಸೆಂಬರ್ 2019, 14:46 IST
 ಪ್ರಿಯಾಂಕ್ ಖರ್ಗೆ 
 ಪ್ರಿಯಾಂಕ್ ಖರ್ಗೆ    

ಕಲಬುರ್ಗಿ: ಸಂವಿಧಾನದ ಆಶಯಕ್ಕೆ ಹಾಗೂ ಗಾಂಧೀಜಿ ಅವರ ರಾಮರಾಜ್ಯ ನಿರ್ಮಾಣದ ಕಲ್ಪನೆಗೆ ವಿರುದ್ಧವಾಗಿರುವ ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಜಾರಿಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಹಾಗೂ ಎನ್‌ಆರ್‌ಸಿ ಜಾರಿಯಾದಲ್ಲಿ ದೇಶದ ಸಂವಿಧಾನ ಹಾಗೂ ಕಾನೂನಿನ ಕಗ್ಗೊಲೆಯಾಗುತ್ತದೆ. ಈಗಾಗಲೇ ಕಾಶ್ಮೀರದಲ್ಲಿ ಅಂತಹ ವಾತಾವರಣ ನಿರ್ಮಾಣವಾಗಿದೆ ಎಂದು ದೂರಿದರು.

ವಿಶ್ವದಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಆದರೆ ಇಲ್ಲಿ ಪ್ರಶ್ನಿಸಿದವರನ್ನೇ ಬಂಧಿಸಲಾಗುತ್ತಿದೆ. ಮಾಧ್ಯಮದವರು ಸ್ವತಂತ್ರವಾಗಿ ಕಾರ್ಯ ನಿರ್ವಹಿಸದಂತಹ ವಾತಾವರಣ ನಿರ್ಮಾಣ ಮಾಡಲಾಗಿದೆ. ಸಿಎಎ ವಿರುದ್ಧ ಪ್ರತಿಭಟನೆ ನಡೆಸಿದ 500ಕ್ಕೂ ಅಧಿಕ ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರೇ ಕಾರಣ ಎಂದು ದೂರಿದರು.

ADVERTISEMENT

’ವಲಸಿಗರಿಗೆ ಪೌರತ್ವ ಕೊಡುವುದರಲ್ಲಿ ನಮ್ಮ ತಕರಾರು ಇಲ್ಲ. ಆದರೆ, ಅದು ಸಂವಿಧಾನದ ಆಶಯಕ್ಕೆ ಪೂರಕವಾಗಿರಬೇಕು. ಜಾತಿ, ಧರ್ಮದ ಆಧಾರದ ಮೇಲೆ ದೇಶವನ್ನು ಕಟ್ಟಬಾರದು’ ಎಂದರು.

ಸಿಎಎ ಮತ್ತು ಎನ್‌ಆರ್‌ಸಿ ಜಾರಿಯಿಂದಾಗಿ ದೇಶ ವಿಭಜನೆಯಾಗುತ್ತದೆಯೇ ವಿನಾ, ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಆಧಾರ್‌ ಕಾರ್ಡ್‌, ಚುನಾವಣೆ ಗುರುತಿನ ಚೀಟಿ, ಪಾಸ್‌ಪೋರ್ಟ್‌ ಹಾಗೂ ಪಡಿತರ ಕಾರ್ಡ್‌ ಇವುಗಳ ಆಧಾರದ ಮೇಲೆ ಪೌರತ್ವ ಸಾಭೀತು ಪಡಿಸಲು ಆಗುವುದಿಲ್ಲ ಎಂದು ಅಮಿತ್‌ ಶಾ ಹೇಳುತ್ತಾರೆ. ಆಗಾದರೆ, ಉಜ್ವಲ ಯೋಜನೆ ಸೇರಿದಂತೆ ಕೇಂದ್ರದ ಹಲವಾರು ಯೋಜನೆಗಳನ್ನು ಯಾವ ದಾಖಲೆಗಳ ಆಧಾರದ ಮೇಲೆ ಜಾರಿಗೆ ತಂದರು ಎಂದು ಪ್ರಶ್ನಿಸಿದರು.

ಧಾರ್ಮಿಕತೆಯಿಂದ ದೇಶವನ್ನು ಇಬ್ಭಾಗ ಮಾಡಿ ಮತಬ್ಯಾಂಕ್‌ನ್ನು ಭದ್ರಪಡಿಸಿಕೊಳ್ಳುವುದಕ್ಕಾಗಿಯೇ ಮೋದಿ ಹಾಗೂ ಅಮಿತ್‌ ಶಾ ಅವರು ಸಿಎಎ ಮತ್ತು ಎನ್‌ಆರ್‌ಸಿ ಗಳನ್ನು ಜಾರಿ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

’ಪೌರತ್ವ’ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ಯಾವುದೇ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿಲ್ಲ. ವಿದ್ಯಾರ್ಥಿಗಳ ನಡೆಸುತ್ತಿದ್ದಾರೆ. ಆದರೆ, ಅವರ ಮೇಲೆ ಪೊಲೀಸರು ದಾಳಿ ನಡೆಸುತ್ತಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಎಎ ಮತ್ತು ಎನ್‌ಆರ್‌ಸಿ ಜಾರಿ ವಿರುದ್ಧ ಯಾರೇ ಹೋರಾಟ ಮಾಡಿದರೂ ನಮ್ಮ ಬೆಂಬಲ ಇರುತ್ತದೆ. ಕೂಡಲೇ ಕೇಂದ್ರ ಸರ್ಕಾರ ಇವುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಕಾಂಗ್ರೆಸ್‌ ಮುಖಂಡ ಜಗದೇವ ಗುತ್ತೇದಾರ ಕಾಳಗಿ, ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ, ಸುಭಾಷ ರಾಥೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.