ADVERTISEMENT

ಚುನಾವಣಾ ಆಯೋಗ ಕಣ್ಣು ಮುಚ್ಚಿದೆಯೇ? ಪ್ರಿಯಾಂಕ್ ಟೀಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 8:22 IST
Last Updated 1 ಏಪ್ರಿಲ್ 2024, 8:22 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ವಿರೋಧ ಪಕ್ಷಗಳ ಖಾತೆಗಳನ್ನು ಸಲ್ಲದ ನೆಪ ಹೇಳಿ ಜಪ್ತಿ ಮಾಡಿಕೊಳ್ಳುತ್ತಿರುವ ಐಟಿ ಇಲಾಖೆ ಮತ್ತೊಂದೆಡೆ ಬಿಜೆಪಿ ಬಾಕಿ ಉಳಿಸಿಕೊಂಡಿರುವ ₹ 4600 ಕೋಟಿ ತೆರಿಗೆ ಪಾವತಿ ವಸೂಲಿ ಮಾಡಿಕೊಳ್ಳಲು ಆಸಕ್ತಿ ವಹಿಸುತ್ತಿಲ್ಲ. ಈ ಅನ್ಯಾಯ ಚುನಾವಣಾ ಆಯೋಗಕ್ಕೆ ಕಾಣುತ್ತಿಲ್ಲವೇ? ಆಯೋಗ ಕಣ್ಣು ಮುಚ್ಚಿಕೊಂಡಿದೆಯೇ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಪ್ರಿಯಾಂಕ್ ‌ಖರ್ಗೆ ಟೀಕಿಸಿದರು.

ಕಾಂಗ್ರೆಸ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಪ್ರಚಾರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಪಕ್ಷಕ್ಕೆ ಐಟಿ ಇಲಾಖೆ ಮತ್ತೊಂದು ನೋಟಿಸ್ ನೀಡಿದೆ. ಇದೀಗ ಆಮ್ ಆದ್ಮಿ ಪಕ್ಷದ ಖಾತೆಯನ್ನೂ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಸ್ಥಗಿತಗೊಳಿಸಲು ಮುಂದಾಗಿದೆ. ಹೀಗಾದರೆ ನ್ಯಾಯಯುತ, ನಿಷ್ಪಕ್ಷಪಾತ ಚುನಾವಣೆ ಸಾಧ್ಯವೇ ಎಂದು ಪ್ರಶ್ನಿಸಿದರು.

ADVERTISEMENT

ಅಮಿತ್ ಶಾ ವಿರುದ್ಧ ಗೋ ಬ್ಯಾಕ್ ಚಳವಳಿ: ಕೇಂದ್ರ ಸಚಿವ ಅಮಿತ್ ಶಾ ರಾಜ್ಯ ಭೇಟಿ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್, ಮೈಸೂರು, ದಾವಣಗೆರೆ, ಚಿತ್ರದುರ್ಗ, ಧಾರವಾಡ, ಶಿವಮೊಗ್ಗ ‌ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ತೀವ್ರ ಬಂಡಾಯ ಎದ್ದಿದ್ದು, ಯಾವುದೇ ಕ್ಷಣದಲ್ಲಿ ಅಮಿತ್ ಶಾ ಗೋಬ್ಯಾಕ್ ಚಳವಳಿ ಶುರುವಾಗಬಹುದು. ಹಳೆಯ ಬಿಜೆಪಿಗರು, ಹೊಸ ಬಿಜೆಪಿಗರ ಮಧ್ಯೆ ತಿಕ್ಕಾಟ ಶುರುವಾಗಿದೆ ಎಂದರು.

ರಾಜ್ಯದ ಬೆಳೆ ನಷ್ಟದ ಪರಿಹಾರ, ಬರ ಪರಿಹಾರದ ಮೊತ್ತ ₹ 18 ಸಾವಿರ ಕೋಟಿ ಬಿಡುಗಡೆ ‌ಮಾಡಿಲ್ಲ. ಆ ಕುರಿತು ಅಮಿತ್ ಶಾ ಒಂದು ಸಭೆಯನ್ನೂ ಮಾಡಿಲ್ಲ. ಯಾವ ಮುಖ ಇಟ್ಟುಕೊಂಡು ರಾಜ್ಯಕ್ಕೆ ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಲೀಕಯ್ಯ ಇಲಿಗಿಂತ ಕಡೆ: ಮಲ್ಲಿಕಾರ್ಜುನ ಖರ್ಗೆ ಎಂಬ ಹುಲಿಯನ್ನೇ ಸೋಲಿಸಿದ್ದೇವೆ. ಇನ್ನು ರಾಧಾಕೃಷ್ಣ ಎಂಬ ಇಲಿಯನ್ನು ಸೋಲಿಸದೇ ಬಿಡುತ್ತೇವೆಯೇ ಎಂಬ ಬಿಜೆಪಿ ಮುಖಂಡ ಮಾಲೀಕಯ್ಯ ಮಾತಿಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಸತತ ಎರಡು ಚುನಾವಣೆಗಳಲ್ಲಿ ಸೋಲು ಕಂಡಿರುವ ಮಾಲೀಕಯ್ಯ ಅವರು ಇಲಿಗಿಂತ ಕಡೆಯಾಗಿದ್ದಾರೆ. ಅವರು ಹಿರಿಯರು ಬಳಸುವ ಪದಗಳ ಮೇಲೆ ಹಿಡಿತ ಇರಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.