ADVERTISEMENT

ಸರ್ಕಾರಿ ನೌಕರರು ಜನರ ಸೇವಕರಾಗಿ ಕೆಲಸ ಮಾಡಿ: ಪ್ರಿಯಾಂಕ್‌ ಖರ್ಗೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 6:47 IST
Last Updated 1 ನವೆಂಬರ್ 2025, 6:47 IST
   

ಕಲಬುರಗಿ: ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ‌ ನಾನೂ ಸೇರಿ ಪ್ರತಿನಿಧಿಗಳು ಹಾಗೂ ಎಲ್ಲ ನೌಕರರು ಜನರ ಸೇವಕರಾಗಿಯೇ ಕೆಲಸ ಮಾಡಬೇಕು. ಇಚ್ಛೆಪಟ್ಟು ಈ ಹುದ್ದೆಗಳಿಗೆ ಬಂದಾಗ ಜನರ ಏಳಿಗೆಗೆ ಶ್ರಮಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಕರ್ನಾಟಕ ಸರ್ಕಾರಿ ನೌಕರರ ಸಂಘದ ಸಂಯುಕ್ತಾಶ್ರಯದಲ್ಲಿ 2025ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ 2023, 2024, 2025ನೇ ವರ್ಷದ ರಾಜ್ಯ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಳಹಂತದಲ್ಲಿ ನೌಕರರೇ ಸರ್ಕಾರ. ಸಾರ್ವಜನಿಕರಿಗೆ ಹಾಗೂ ಸರ್ಕಾರಕ್ಕೆ ನೌಕರರು ಸೇತುವೆಯಾಗಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ನೌಕರರು ಮಾಡುತ್ತಿದ್ದಾರೆ. ಆದರೆ ತಾಳ್ಮೆ, ಸಮರ್ಪಣಾ ಮನೋಭಾವ, ಕರ್ತವ್ಯ ನಿಷ್ಠೆ, ಹೊಣೆಗಾರಿಕೆಯನ್ನು ಮೈಗೂಡಿಸಿಕೊಳ್ಳಬೇಕು. ಸರ್ಕಾರಿ ‌ನೌಕರರು ಬುನಾದಿಯಂತೆ. ಬುನಾದಿ ಭದ್ರವಾಗಿದ್ದರೆ ಕಟ್ಟಡವೂ ಕೂಡಾ ಸುಭದ್ರವಾಗಿರುತ್ತದೆ’ ಎಂದರು.

ADVERTISEMENT

‘ಸಾರ್ವಜನಿಕರನ್ನು ಸರ್ಕಾರಿ ಕಚೇರಿಗೆ ಪದೇ ಪದೇ ಅಲೆದಾಡದಂತೆ ಕೆಲಸ ಮಾಡಿಕೊಡಿ. ಕೆಲಸ ಆಗುವುದಿದ್ದರೆ ಆಗುತ್ತೆ, ಇಲ್ಲವಾದರೆ ಇಲ್ಲ ಅಂತ ಹೇಳಿ. ಸುಳ್ಳು ಹೇಳಿ ಸಾರ್ವಜನಿಕರಿಗೆ ಅಲೆದಾಡಿಸಬೇಡಿ. ಸರ್ಕಾರಿ ಕೆಲಸ ದೇವರ ಕೆಲಸ ಅಂತ ಹೇಳಿ ದೇವರ ಮೇಲೆ ಹಾಕುವುದು ಬೇಡ. ಕಾಯಕ‌ ಹಾಗೂ ದಾಸೋಹ ತತ್ವದಲ್ಲಿ ಸಾರ್ವಜನಿಕರ ಹಿತ ಅಡಗಿದೆ. ಹಾಗಾಗಿ ನೌಕರರು‌ ಬಸವತತ್ವವನ್ನು ಅಳವಡಿಸಿಕೊಳ್ಳಬೇಕು. ಪರಿಣಾಮಕಾರಿ ಕೆಲಸ ಮಾಡಿದರೆ ಸಮಾಜದ ಮೇಲೆ‌ ಪ್ರಭಾವ ಬೀರುತ್ತದೆ’ ಎಂದರು.

ವಿಧಾನಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ‘ರಾಜ್ಯ ಸರ್ಕಾರಿ ನೌಕರರು ಆರ್‌ಎಸ್‌ಎಸ್ ಪಥಸಂಚಲನದಿಂದ ದೂರ ಉಳಿಯಬೇಕು. ಅಂದು ಬಸವಣ್ಣನವರಿಗೆ ತೊಂದರೆ‌‌ ಕೊಟ್ಟವರೇ ಇಂದು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತೊಂದರೆ‌ ಕೊಡುತ್ತಿದ್ದಾರೆ. ಆದರೆ ರಾಜ್ಯದ ಹಾಗೂ ದೇಶದ ಎಲ್ಲ ವರ್ಗದವರೂ ಸಚಿವರೊಂದಿಗೆ ಇದ್ದಾರೆ’ ಎಂದರು.

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ಅವರು 371(ಜೆ) ನಿಯಮಾವಳಿಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಹಲವು ವಿಷಯಗಳನ್ನು ಮಂಡಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಜಾಗದ ವಿಚಾರ ಹಾಗೂ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯ ಹಾಗೂ ಬಡ್ತಿಯಲ್ಲಿನ ಅನ್ಯಾಯಗಳ ಬಗ್ಗೆ ಸಚಿವರ ಗಮನಕ್ಕೆ ತಂದರು.

ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್‌, ಜೆಸ್ಕಾಂ ಅಧ್ಯಕ್ಷ ಪ್ರವೀಣ ಹರವಾಳ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್‌ ಪಾಟೀಲ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿಂಗ್ ಮೀನಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಹಿರಿಯ ಉಪಾಧ್ಯಕ್ಷರಾದ ಎಂ.ಬಿ. ಪಾಟೀಲ, ಸುರೇಶ ವಗ್ಗೆ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಶಂಕರಯ್ಯ ಮಠಪತಿ, ಸಿದ್ದಲಿಂಗಯ್ಯ ಮಠಪತಿ, ಖಜಾಂಚಿ ಶ್ರೀಮಂತ ಪಟ್ಟೇದಾರ ಸೇರಿ ಸಂಘದ ಜಿಲ್ಲೆ ಹಾಗೂ ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು.

ಸಂಘದ ಪದಾಧಿಕಾರಿ ಸುನಿಲಕುಮಾರ್ ಚಾಂದೆ ಪ್ರಾರ್ಥಿಸಿದರು. ಕಾರ್ಯಾಧ್ಯಕ್ಷ ಚಂದ್ರಕಾಂತ ಏರಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಮಹೇಶ ಹೂಗಾರ ನಿರೂಪಿಸಿದರು. 

ವಾರದಲ್ಲಿ ಐದು ದಿನ ಕೆಲಸ: ಸರ್ಕಾರಕ್ಕೆ ಒತ್ತಾಯ

‘ಸ್ವಾತಂತ್ರ್ಯ ದಿನಾಚರಣೆ ಹಾಗೂ ಪ್ರಜಾತಂತ್ರ ದಿನಾಚರಣೆ ಸಂದರ್ಭ ಹೊರತುಪಡಿಸಿ ಬೇರೆ ಸಂದರ್ಭದಲ್ಲಿ ಸರ್ಕಾರಿ ರಜೆ ನೀಡಬಾರದು ಎನ್ನುವುದು ನನ್ನ ವೈಯಕ್ತಿಕ ವಿಚಾರ. ಈ ವಿಚಾರದ ಹಿಂದೆ ಜೀವನದ ಗುಣಮಟ್ಟ ಸುಧಾರಣೆಯಾಗಬೇಕು ಎನ್ನುವ ನಿರ್ಧಾರವಿದೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು. ‘ನೌಕರರು ತಮ್ಮ ಕುಟುಂಬದ ಜೊತೆ ಕಾಲ ಕಳೆಯುವುದು ಸೇರಿದಂತೆ ಕೆಲ ವಿಚಾರದಲ್ಲಿ ನಾನು ವಿದೇಶದ ನೀತಿ ನಿಯಮಾವಳಿಯಂತೆ ಐದು ಕೆಲಸದ ದಿನಗಳನ್ನಾಗಿ ಮಾಡಿ ಉಳಿದ ದಿನಗಳಲ್ಲಿ ಒಂದೊಂದು ತಾಸು ಕೆಲಸದ ಅವಧಿ ವಿಸ್ತರಿಸುವಂತೆ ಸಚಿವ ಸಂಪುಟದಲ್ಲಿ ಚರ್ಚಿಸಿದ್ದೆ. ಈಗಲೂ ಐದು ದಿನದ ಕೆಲಸದ ಅವಧಿ ನಿಗದಿಪಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವೆ’ ಎಂದರು.

ಮೂವತ್ತು ಜನರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ 

2023ನೇ ಸಾಲಿನ ವಿಜೇತರು: ಶಶಿಧರ ಬಾಳೆ (ಬ್ಲಾಕ್ ಆರೋಗ್ಯ ಶಿಕ್ಷಣ ಅಧಿಕಾರಿ) ಚಾಮರಾಜ ದೊಡ್ಡಮನಿ (ಸಹಾಯಕ ಪ್ರಲೋಭಕ) ಜ್ಯೋತಿ (ಪ್ರಾಥಮಿಕ ಆರೋಗ್ಯ ಅಧಿಕಾರಿ) ಗಾಯತ್ರಿ ವಿದ್ಯಾಧರ (ವಾರ್ಡನ್‌) ಲಲಿತಾ (ಕಿರಿಯ ತರಬೇತಿ ಅಧಿಕಾರಿ) ನಾಗೂಬಾಯಿ ಸೂರ್ಯವಂಶಿ (ಗ್ರೇಡ್‌–2 ಪ್ರಾಚಾರ್ಯೆ) ಡಾ.ಶಿವಶರಣ ಉಕ್ಕಲಿ (ಹಿರಿಯ ಪಶುವೈದ್ಯಾಧಿಕಾರಿ) ಶಿವಪುತ್ರ (ತಹಶೀಲ್ದಾರ್) ಮುಹಮ್ಮದ್ ರಫೀಕ್ (ಶಿರಸ್ತೇದಾರ). 2024ನೇ ಸಾಲಿನ ವಿಜೇತರು: ಡಾ.ರವಿಕಾಂತಿ ಕ್ಯಾತನಾಳ (ಡಿಟಿಸಿ ಪ್ರಾಚಾರ್ಯೆ) ಡಾ.ವೈಜನಾಥ ಮಮ್ಮಣ್ಣಿ (ಮುಖ್ಯ ಪಶುವೈದ್ಯಾಧಿಕಾರಿ) ಡಾ.ಶಾಂತಾಬಾಯಿ ಬಿರಾದಾರ (ಕ್ಷೇತ್ರ ಸಮನ್ವಯ ಅಧಿಕಾರಿ) ಸಂಗೀತಾ (ಭೂಮಾಪಕ) ಸುಧಾ ಮದನಕರ್ (ಬೆರಳಚ್ಚುಗಾರ್ತಿ) ರಾಜಶೇಖರ ಉದನೂರ (ವಾರ್ಡನ್‌) ವಿಜಯಕುಮಾರ ಸೋಮನೂರ (ಹಿರಿಯ ಪಶು ವೈದ್ಯಕೀಯ ಪರೀಕ್ಷಕ) ಬಿ.ಪಿ.ಕಾಳಿಂಗ (ಎಸ್‌ಡಿಎ) ಸುನಿಲಕುಮಾರ (ಹಿರಿಯ ಶಿರಸ್ತೇದಾರ) ಗೀತಾಬಾಯಿ ಬಾಬುರಾವ್ (ಪ್ರಾಥಮಿಕ ಸುರಕ್ಷಾ ಅಧಿಕಾರಿ). 2025 ಸಾಲಿನ ವಿಜೇತರು: ಡಾ.ಶಂಕರ ಕಣ್ಣಿ (ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಮಲ್ಲಿಕಾರ್ಜುನ (ಸಹಾಯಕ ನೋಂದಣಾಧಿಕಾರಿ) ರಾಜಕುಮಾರ ರಾಠೋಡ (ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ) ಶಿವಶಂಕರಯ್ಯ (ವಾರ್ಡನ್‌) ಲಕ್ಷ್ಮಿ (ಹಿರಿಯ ಪಶುವೈದ್ಯಕೀಯ ಪರೀಕ್ಷಕಿ) ರವಿಶಂಕರ (ನೇತ್ರ ಅಧಿಕಾರಿ) ಡಾ.ವಿಜಯಕುಮಾರ (ಗ್ರಂಥಪಾಲಕ) ದಮಯಂತಿ (ಜ್ಯೂನಿಯರ್ ಲ್ಯಾಬ್‌ ಟೆಕ್ನಿಕಲ್‌ ಅಧಿಕಾರಿ) ಗಂಗಾಬಾಯಿ (ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ) ಬಸಪ್ಪ (ಡಿ–ಗ್ರೂಪ್‌ ನೌಕರ) ಅವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಜತೆಗೆ ತಲಾ ₹ 25 ಸಾವಿರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.