ADVERTISEMENT

ಅಗ್ನಿಪಥ್: ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಬೇಡ- ಪ್ರಿಯಾಂಕ್ ಖರ್ಗೆ

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2022, 12:26 IST
Last Updated 19 ಜೂನ್ 2022, 12:26 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: ‘ಪ್ರಧಾನಿ ನರೇಂದ್ರ ಮೋದಿಯವರ ಹೊಸ ಕಾರ್ಯಕ್ರಮ ಅಗ್ನಿಪಥ್ ಕಾರ್ಯಕ್ರಮದಿಂದಾಗಿ ತಾತ್ಕಾಲಿಕವಾಗಿ ಸೈನ್ಯಕ್ಕೆ ಯುವಕರನ್ನು ನೇಮಿಸಿಕೊಳ್ಳುವುದರಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಒದಗುವ ಸಾಧ್ಯತೆ ಇದೆ. ಆದ್ದರಿಂದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಬಾರದು’ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದರು.

ಈ‌ ಯೋಜನೆ ಪ್ರಕಾರ ಹೊಸ ಸೈನಿಕರನ್ನ ಆರು‌ ತಿಂಗಳ‌ ತರಬೇತಿ‌ ನೀಡಿ ಅಗ್ನಿವೀರರ ಹೆಸರಿನಲ್ಲಿ‌ಅವರನ್ನು‌ ನೌಕಾದಳ, ಭೂದಳ ಹಾಗೂ‌ ವಾಯುದಳದ ಸೈನಿಕರನ್ನಾಗಿ‌ 64 ಸಾವಿರ ಸೈನಿಕರನ್ನು ನೇಮಕ ಮಾಡಿ‌ ನಾಲ್ಕು ವರ್ಷದ ನಂತರ ಅವರನ್ನು ಸೇವೆಯಿಂದ‌ ಬಿಡುಗಡೆ ಮಾಡುತ್ತಾರೆ. ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವ ಮುನ್ನ ಪ್ರಾಯೋಗಿಕ ನೆಲೆಯಲ್ಲಿ ನೇಮಕ ನಡೆಸಬೇಕಿತ್ತು. ಏಕೆಂದರೆ ಪಾಕಿಸ್ತಾನ, ಚೀನಾ ಹಾಗೂ ನೇಪಾಳದಂತ ದೇಶಗಳ ಗಡಿಯನ್ನು ಭಾರತ ಹಂಚಿಕೊಂಡಿದೆ. ಚೀನಾ ಈಗಾಗಲೇ ಭಾರತದ ಗಡಿ ಒಳಗೆ ಬಂದು ಗ್ರಾಮಗಳನ್ನೇ ನಿರ್ಮಿಸಿಕೊಂಡಿದೆ. ಹೀಗಿರುವಾಗ ಒಪ್ಪಂದ‌ದ ಮೇಲೆ ಸೈನಿಕರನ್ನು ನೇಮಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.

ಸೈನಿಕರಿಗೆ ಆರು ತಿಂಗಳು ತರಬೇತಿ ಸಾಕಾಗುತ್ತದೆಯೇ? ತಜ್ಞರ ಪ್ರಕಾರ 6–7 ವರ್ಷದ ತರಬೇತಿ ನಂತರ ಒಬ್ಬ ಸೈನಿಕ‌ ಯುದ್ದ‌ಭೂಮಿಗೆ ಹೋಗಲು ತಯಾರಾಗುತ್ತಾನೆ. ಹೀಗಿರುವಾಗ ಕೇವಲ ಅರು ತಿಂಗಳ ತರಬೇತಿ‌ ಹೊಂದಿ ಕೇವಲ ನಾಲ್ಕು ವರ್ಷ ಮಾತ್ರ ಸೈನ್ಯದಲ್ಲಿ‌ ಇರಬೇಕಾದರೆ ಸೈನಿಕ‌ ಹೋರಾಟದ ಮನೋಭಾವನೆಯಿಂದ‌ ಕೆಲಸ ಮಾಡಲು ಆಗುತ್ತದೆಯೇ? ಇಂಥವರು ಯುದ್ದದಲ್ಲಿ ನಾಯಕತ್ವದ ಗುಣ ತೋರಿಸುವುದು ಅಸಾಧ್ಯ ಎಂದರು.

ADVERTISEMENT

ಅಗ್ನಿಪಥ್ ಯೋಜನೆ ಘೋಷಣೆಯಾದ ಬಳಿಕ ದೇಶ ಹೊತ್ತಿ‌ ಉರಿಯುತ್ತಿದೆ. 200 ರೈಲುಗಳು ಬಂದ್ ಆಗಿವೆ.‌ ಹಲವಾರು ರೈಲುಗಳು ಬೆಂಕಿಗೆ ಆಹುತಿಯಾಗಿವೆ. ರಾಜ್ಯದಲ್ಲಿಯೂ ಪ್ರತಿಭಟನೆ‌ ನಡೆಯುತ್ತಿದೆ. ಯುವಕರು ರಸ್ತೆಗಿಳಿದು‌ ಹೋರಾಟ ನಡೆಸುತ್ತಿದ್ದಾರೆ. ಆದ್ದರಿಂದ ಯುವಕರ ಭಾವನೆಗಳನ್ನು ಅರ್ಥ ಮಾಡಿಕೊಂಡು ಈ ಯೋಜನೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.

ಪ್ರಸಕ್ತ ಬಜೆಟ್‌ನಲ್ಲಿ ಒಟ್ಟಾರೆ ರಕ್ಷಣಾ ಇಲಾಖೆಗೆ ₹ 5.25 ಲಕ್ಷ ಕೋಟಿಯನ್ನು ಹಂಚಿಕೆ ಮಾಡಲಾಗಿದೆ. ಅದರಲ್ಲಿ ₹ 1.20 ಲಕ್ಷ ಕೋಟಿ ಹಣ ಮಾಜಿ ಸೈನಿಕರ ಪಿಂಚಣಿಗೇ ಹೋಗುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಸೈನ್ಯದಲ್ಲಿ ಗುತ್ತಿಗೆ ಪದ್ಧತಿಯನ್ನು ಜಾರಿಗೊಳಿಸಿದೆ ಎಂದರು.

ಶಾಸಕ ಎಂ.ವೈ. ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡ ಶಿವಾನಂದ ಪಾಟೀಲ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.