ಕಲಬುರಗಿ: ‘ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ನೀಡಿದ್ದ ಬೇಡಿಕೆಯಷ್ಟು ಯೂರಿಯಾ ರಸಗೊಬ್ಬರ ಪೂರೈಸಿಲ್ಲ. ಇದರಿಂದ ಕೆಲವೆಡೆ ಸಮಸ್ಯೆಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸಲ ಕೇಂದ್ರ ಸರ್ಕಾರ ನಮಗೆ ಅಗತ್ಯವಿರುವಷ್ಟು ರಸಗೊಬ್ಬರ ಸರಬರಾಜು ಮಾಡಿಲ್ಲ. ರಾಜ್ಯದಲ್ಲಿರುವ ದಾಸ್ತಾನು ಅನ್ನು (ಓಪನಿಂಗ್ ಬ್ಯಾಲನ್ಸ್) ಪ್ರಸಕ್ತ ವರ್ಷದ ಬೇಡಿಕೆಯಲ್ಲಿ ಕಡಿತಗೊಳಿಸಿ ಮಿಕ್ಕುಳಿದ ಪ್ರಮಾಣದ ರಸಗೊಬ್ಬರ ಮಾತ್ರವೇ ಸರಬರಾಜು ಮಾಡಿದೆ. ಇದರಿಂದ ಕೆಲವೆಡೆ ಸಮಸ್ಯೆಯಾಗಿದೆ. ಹೀಗಾಗಿ ರಸಗೊಬ್ಬರ ವಿಚಾರದಲ್ಲಿ ಪ್ರತಿಭಟಿಸುವುದಿದ್ದರೆ, ಬಿಜೆಪಿಗರು ದೆಹಲಿಯಲ್ಲಿ ಪ್ರತಿಭಟನೆ ಮಾಡಿ ರಾಜ್ಯಕ್ಕೆ ರಸಗೊಬ್ಬರ ತರಿಸಿ ಕೊಡಲಿ’ ಎಂದು ವ್ಯಂಗ್ಯವಾಡಿದರು.
‘ಇನ್ನು, ಜಿಲ್ಲೆಯಲ್ಲಿ ಬಿತ್ತನೆ ಕಾರ್ಯ ಬಹುತೇಕ ಮುಗಿದಿದೆ. ಜಿಲ್ಲೆಗೆ ಸದ್ಯ 500 ಟನ್ ಯೂರಿಯಾ ರಸಗೊಬ್ಬರದ ಬೇಡಿಕೆ ಇದ್ದು, 200 ಟನ್ ಯೂರಿಯಾವನ್ನು ಬಾಗಲಕೋಟೆಯಿಂದ ತರಿಸಲಾಗುತ್ತಿದೆ. ಉಳಿದ 300 ಟನ್ ರಸಗೊಬ್ಬರವನ್ನು ಆದಷ್ಟು ಬೇಗ ತರಿಸಲಾಗುವುದು’ ಎಂದರು.
ಕೊಡುಗೆ ಕೊಟ್ಟು ಮಾತನಾಡಲಿ:
‘ಪ್ರಧಾನಿ ಮೋದಿ ಅವರ ಮನದ ಮಾತು ಕೇಳಿ–ಕೇಳಿ ಸಾಕಾಗಿದೆ. ಏನಾದರೂ ಮಾತನಾಡಬೇಕಾದರೆ ನಿಮ್ಮ ಶ್ರಮ, ಅನುದಾನ, ಕೊಡುಗೆ ಇರಬೇಕು. ಹಿಂದೆ ಕಲಬುರಗಿ ರೊಟ್ಟಿ ಬಗ್ಗೆ ಮಾತನಾಡಿದರು. ಅದಕ್ಕೆ ಅವರ ಕೊಡುಗೆ ಏನು? ಈಗ ಕಲಬುರಗಿ ಕೋಟೆ ಬಗ್ಗೆ ಮಾತನಾಡಿದ್ದಾರೆ. ಕೋಟೆ ಅಭಿವೃದ್ಧಿಗೆ ಅವರ ಕೊಡುಗೆ ಏನು? ಶೂನ್ಯ. ಬೇರೆಯವರು ಪಟ್ಟ ಶ್ರಮಕ್ಕೆ ಕ್ರೆಡಿಟ್ ತೆಗೆದುಕೊಳ್ಳುವುದರಲ್ಲಿ ಅವರು ನಿಸ್ಸಿಮರು’ ಎಂದು ವ್ಯಂಗ್ಯವಾಡಿದರು.
‘ಕೇಂದ್ರೀಯ ವಿ.ವಿಗಳು ಆರ್‌ಎಸ್‌ಎಸ್ ಶಾಖೆ’:
‘ಶೈಕ್ಷಣಿಕ ಪ್ರಗತಿಯ ದೃಷ್ಟಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಗೆ ಕೇಂದ್ರೀಯ ವಿವಿ ತಂದರು. ಆದರೆ, ಕೇಂದ್ರೀಯ ವಿಶ್ವವಿದ್ಯಾಲಯಗಳು ಆರ್‌ಎಸ್‌ಎಸ್ ಶಾಖೆಗಳಾಂತಾಗಿವೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮವನ್ನೇ ನಡೆಸಲು ನಮಗೆ ಅನುಮತಿ ನಿರಾಕರಿಸಲಾಗಿದೆ’ ಎಂದು ಸಚಿವರು ದೂರಿದರು.
ಅರ್ಧ ಕೆಲಸ ಮಾಡಿ ತೋರಿಸಲಿ:
‘ನರೇಂದ್ರ ಮೋದಿ ಹೆಚ್ಚಿನ ಅವಧಿಗೆ ಪ್ರಧಾನಿಯಾಗುವ ಮೂಲಕ ಇಂದಿರಾ ಗಾಂಧಿ ದಾಖಲೆ ಮೀರಿದ್ದಾರಲ್ಲ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್, ‘ದಾಖಲೆಗಳನ್ನು ಮುರಿದಿರಬಹುದು, ಆದರೆ ಅವರ ಸಾಧನೆ ಏನಿದೆ? ಇಂದಿರಾ ಗಾಂಧಿ ಅವರು ಮಾಡಿದ ಅರ್ಧದಷ್ಟಾದರೂ ಕೆಲಸ ಮಾಡಿ ತೋರಿಸಲಿ’ ಎಂದು ಸವಾಲು ಹಾಕಿದರು.
‘ಇಂದಿರಾ ಗಾಂಧಿ ಅವರು ಪಾಕಿಸ್ತಾನವನ್ನು ಇಬ್ಭಾಗ ಮಾಡಿದ್ದರು. ಇಂದಿರಾ 44 ಪತ್ರಿಕಾಗೋಷ್ಠಿ ನಡೆಸಿದ್ದರು, ಇವರೇನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಶಾಸಕ ಅಲ್ಲಮಪ್ರಭು ಪಾಟೀಲ, ಕುಡಾ ಅಧ್ಯಕ್ಷ ಮಜರ್ ಆಲಂಖಾನ್ ಇದ್ದರು.
‘ಸಂಪುಟ ನಿರ್ಣಯ: ಶೀಘ್ರವೇ ಮಾಹಿತಿ’
‘ಕಲಬುರಗಿಯಲ್ಲಿ ಕಳೆದ ವರ್ಷ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಜಾರಿ ಬಗ್ಗೆ ಸದ್ಯದಲ್ಲೇ ಸಮಗ್ರ ಮಾಹಿತಿ ನೀಡಲಾಗುವುದು. ಯಾವೆಲ್ಲ ಯೋಜನೆಗಳು ಘೋಷಣೆಗಳು ಯಾವ ಹಂತದಲ್ಲಿವೆ ಎಂಬುದನ್ನು ತಿಳಿಸಲಾಗುವುದು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.