ADVERTISEMENT

ಮಠಾಧೀಶರಿಂದ ಸ್ವಜನ ಪಕ್ಷಪಾತ: ಪ್ರೊ.ಪೋತೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 12:30 IST
Last Updated 20 ಸೆಪ್ಟೆಂಬರ್ 2019, 12:30 IST
ಪ್ರೊ.ಎಚ್.ಟಿ.ಪೋತೆ
ಪ್ರೊ.ಎಚ್.ಟಿ.ಪೋತೆ   

ಕಲಬುರ್ಗಿ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಯಾರಾದರೂ ಮುಟ್ಟಿದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಕಲ್ಯಾಣ ಕರ್ನಾಟಕ ಭಾಗದ ಮಠಾಧೀಶರು ಹೇಳುತ್ತಾರೆ. ಹಾಗಾದರೆ, ಯಾವ ಪುರುಷಾರ್ಥಕ್ಕೆ ಇವರು ‘ಕಲ್ಯಾಣ’ ಎಂದು ನಾಮಕರಣ ಮಾಡಿದ್ದಾರೆ? ಇವರಿಗೆ ನೈತಿಕತೆ ಇದೆಯೇ?’ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಟಿ.ಪೋತೆ ಪ್ರಶ್ನಿಸಿದರು.

ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಮೈಸೂರಿನ ಡಾ.ಎಲ್.ಬಸವರಾಜು ಜನ್ಮಶತಮಾನೋತ್ಸವ ಆಚರಣಾ ಸಮಿತಿ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸ್ವಜಾತಿ ಪಕ್ಷಪಾತಕ್ಕಾಗಿ ಮಠಗಳನ್ನು ಕಟ್ಟಿಕೊಂಡ ಮಠಾಧೀಶರು ಸಮಾಜದ ಸಮಾನತೆಯ ಮಾತೇ ಆಡುವುದಿಲ್ಲ. ಬೇಷರತ್‌ ಆಗಿ ಒಬ್ಬ ರಾಜಕಾರಣಿಗೆ ಬೆನ್ನಿಗೆ ನಿಲ್ಲುವುದು ಸರಿಯೇ?ಈ ಭಾಗದಲ್ಲಿ ಅಸಹಿಷ್ಣುತೆ, ಅಸ್ಪೃಶ್ಯತೆ ಇನ್ನೂ ಜೀವಂತ ಇದೆ. ಇದರ ಬಗ್ಗೆ ಮಠಾಧೀಶರ ನಿಲುವೇನು? ರಾಜಕಾರಣಿಗಳು ಕೊಡುವ ದುಡ್ಡಿನ ಆಸೆಗೆ ಈ ರೀತಿ ಅಂಟಿಕೊಳ್ಳುವ ಮಠಾಧೀಶರಿಗೆ ನೈತಿಕತೆ ಇದೇಯೇ?’ ಎಂದೂ ಕೇಳಿದರು.

ADVERTISEMENT

‘ಪ್ರಧಾನಿ ಭಾವಚಿತ್ರ ಹಾಕಿಕೊಂಡು ಯಾವುದೋ ಮಗು ಕೇಕ್‌ ಕಟ್‌ ಮಾಡಿದರೂ ಅದನ್ನು ಮನ್‌ ಕಿ ಬಾತ್‌ನಲ್ಲಿ ದೊಡ್ಡದಾಗಿ ಹೇಳುತ್ತಾರೆ. ಆದರೆ, ಒಬ್ಬ ದಲಿತ ಸಂಸದ ಎ.ನಾರಾಯಣಸ್ವಾಮಿ ಅವರನ್ನೇ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಹೋಗದಂತೆ ದಲಿತರೇ ತಡೆಯುತ್ತಾರೆ. ಈ ಬಗ್ಗೆ ಮನ್‌ ಕಿ ಬಾತ್‌ನಲ್ಲಿ ಏನನ್ನೂ ಹೇಳುವುದಿಲ್ಲವೇಕೆ?’ ಎಂದು ಕುಟುಕಿದರು.

‘ದಲಿತರೇ ದಲಿತರನ್ನು ಶೋಷಣೆ ಮಾಡುವಂಥ ಪರಿಸ್ಥಿತಿಯನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಲಾಗುತ್ತಿದೆ. ಮೈಸೂರಿನಲ್ಲಿ ನೆರೆ ಸಂತ್ರಸ್ತರಿಗೆ ನಿರ್ಮಿಸಿದ ಪರಿಹಾರ ಕೇಂದ್ರದಲ್ಲೂ ದಲಿತರು ಬಳಸಿದ ಶೌಚಾಲಯಗಳನ್ನು ಬಳಸಲು ಬ್ರಾಹ್ಮಣರು ನಿರಾಕರಿಸುತ್ತಾರೆ. ಅವರೊದಿಗೆ ಕುಳಿತು ಊಟ ಮಾಡಲು ಹಿಂಜರಿಯುತ್ತಾರೆ. ಇಂಥ ವ್ಯವಸ್ಥೆ ಬಗ್ಗೆ ಹೇಳಲು ಪ್ರಧಾನಿಗೆ ನಾಲಿಗೆ ಇಲ್ಲವೇ?’ ಎಂದೂ ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.