ADVERTISEMENT

ಕಲಬುರಗಿ | ಮಗನಿಂದ ಜೀವ ಬೆದರಿಕೆ: ಪೊಲೀಸರ ಮೊರೆ ಹೋದ ತಂದೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 7:59 IST
Last Updated 11 ಡಿಸೆಂಬರ್ 2025, 7:59 IST
   

ಕಲಬುರಗಿ: ‘ಆಸ್ತಿಗಾಗಿ ಅಣ್ಣನನ್ನೇ ಕೊಂದಿರುವ ಶ್ರೀಕಾಂತ ಸಿಂಗೆ ನನಗೂ ಕೊಲೆ ಬೆದರಿಕೆ ಹಾಕಿದ್ದು, ಕೂಡಲೇ ಅವನನ್ನು ಬಂಧಿಸಬೇಕು ಹಾಗೂ ನನಗೆ ಪೊಲೀಸರು ರಕ್ಷಣೆ ಕೊಡಬೇಕು’ ಎಂದು ನೊಂದ ತಂದೆ ಮರೆಪ್ಪ ಸಿಂಗೆ ಪೊಲೀಸರ ಮೊರೆ ಹೋಗಿದ್ದಾರೆ.

ಈ ಕುರಿತು ಡಿ.4ರಂದು ನಗರ ಪೊಲೀಸ್‌ ಕಮಿಷನರ್‌ಗೆ ದೂರು ಸಲ್ಲಿಸಿರುವ ಕುರಿತು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಕಲಬುರಗಿ ತಾಲ್ಲೂಕಿನ ಕಲ್ಲಬೆನೂರ ನಿವಾಸಿಯಾಗಿರುವ ನನಗೆ ಮಿನೇಶಕುಮಾರ ಮತ್ತು ಶ್ರೀಕಾಂತ ಇಬ್ಬರು ಮಕ್ಕಳಿದ್ದರು. ಪತ್ನಿ ಕಾಶಿಬಾಯಿ ಶ್ರೀಕಾಂತನನ್ನು ಕರೆದುಕೊಂಡು ತವರೂರಾದ ಕಮಕನೂರ ಗ್ರಾಮದಲ್ಲಿ ಕಳೆದ 25 ವರ್ಷಗಳಿಂದ ವಾಸವಾಗಿದ್ದಾರೆ. 3 ಎಕರೆ ಜಮೀನು ತಮ್ಮದಾಗಿಸಿಕೊಳ್ಳಲು ಹೆಂಡತಿ ಮತ್ತು ಕಿರಿಯ ಮಗ ಶ್ರೀಕಾಂತ ಇಬ್ಬರೂ ಜಗಳ ತೆಗೆಯುತ್ತಿದ್ದರು’ ಎಂದು ತಿಳಿಸಿದರು.

‘5-6 ತಿಂಗಳ ನಂತರ ಇಬ್ಬರು ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ, ಎಲ್ಲಾ ಆಸ್ತಿ ಹಿರಿಯ ಮಗನಿಗೆ ಮಾಡಬಹುದು ಎಂದು ಭಾವಿಸಿ ಶ್ರೀಕಾಂತ ಕಳೆದ ನ.22ರಂದು ಕಲ್ಲಬೆನೂರ ಗ್ರಾಮಕ್ಕೆ ಬಂದು ಮಿನೇಶಕುಮಾರನ ಮೇಲೆ ಕಲ್ಲು ಎತ್ತಿ ಹಾಕಿದ್ದಾನೆ. ಹಿರಿಯ ಮಗ ಚಿಕಿತ್ಸೆಗೆ ಸ್ಪಂದಿಸದೇ ನ.30ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈ ಕುರಿತು ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆಗೆ ದೂರು ನೀಡಿದ್ದರೂ ಆರೋಪಿಯನ್ನು ಬಂಧಿಸಿಲ್ಲ’ ಎಂದು ದೂರಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ದಶರಥ ಸಿಂಗೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.