ADVERTISEMENT

ಆಳಂದ|ಹೆಚ್ಚು ತೆರಿಗೆ ಸಂಗ್ರಹಿಸಿದರೆ ಟ್ರಾಲಿ,ವಾಚ್:ಗ್ರಾ.ಪಂ.ಗಳಲ್ಲಿ ವಿನೂತನ ಕ್ರಮ

ತೆರಿಗೆ ಸಂಗ್ರಹ ಹೆಚ್ಚಿಸಲು ವಿನೂತನ ಕ್ರಮ: ಬೆಳಿಗ್ಗೆ 5.30ರಿಂದಲೇ ಕಾರ್ಯಾಚರಣೆ

ಮನೋಜ ಕುಮಾರ್ ಗುದ್ದಿ
Published 6 ಡಿಸೆಂಬರ್ 2025, 23:30 IST
Last Updated 6 ಡಿಸೆಂಬರ್ 2025, 23:30 IST
ಆಳಂದ ತಾಲ್ಲೂಕಿನಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದ ಗ್ರಾ.ಪಂ. ಪಿಡಿಒ ಅವರಿಗೆ ತಾ.ಪಂ. ಇಒ ಮಾನಪ್ಪ ಕಟ್ಟಿಮನಿ ಹಾಗೂ ಅಧಿಕಾರಿಗಳು ಟ್ರಾಲಿಯನ್ನು ಬಹುಮಾನವಾಗಿ ನೀಡಿದರು
ಆಳಂದ ತಾಲ್ಲೂಕಿನಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದ ಗ್ರಾ.ಪಂ. ಪಿಡಿಒ ಅವರಿಗೆ ತಾ.ಪಂ. ಇಒ ಮಾನಪ್ಪ ಕಟ್ಟಿಮನಿ ಹಾಗೂ ಅಧಿಕಾರಿಗಳು ಟ್ರಾಲಿಯನ್ನು ಬಹುಮಾನವಾಗಿ ನೀಡಿದರು   

ಕಲಬುರಗಿ: ದಶಕಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ಸಂಗ್ರಹಿಸಲು ಜಿಲ್ಲೆಯ ಆಳಂದ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳು ವಿನೂತನ ಕ್ರಮಕ್ಕೆ ಮುಂದಾಗಿವೆ. ಜನರು ಹೊಲಗಳಿಗೆ ಹೋಗುವ ಮೊದಲೇ ಬೆಳಿಗ್ಗೆ 5.30ಕ್ಕೆ ಮನೆ ಮುಂದೆ ಹಾಜರಾಗುತ್ತಿದ್ದಾರೆ. ಸಂಜೆಯ ಬಳಿಕವೂ ಮನೆಗಳಿಗೆ ತೆರಳಿ ತೆರಿಗೆ ಬಾಕಿ ಸಂಗ್ರಹ ಮಾಡುತ್ತಿದ್ದಾರೆ.

ಈ ಕ್ರಮಕ್ಕೆ ತಾಲ್ಲೂಕಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಒಂದೇ ದಿನ ₹ 69 ಲಕ್ಷ ತೆರಿಗೆ ಸಂಗ್ರಹವಾಗಿದೆ. ಕಲಬುರಗಿ ಜಿಲ್ಲೆಯಲ್ಲಿಯೇ ಆಳಂದ ತಾಲ್ಲೂಕು ಅತಿ ಹೆಚ್ಚು (42) ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ. ಹೆಚ್ಚಿನ ತೆರಿಗೆ ಸಂಗ್ರಹಕ್ಕಾಗಿ ಪಣತೊಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಬಿಲ್ ಕಲೆಕ್ಟರ್ ಹಾಗೂ ಕಂಪ್ಯೂಟರ್ ಆಪರೇಟರ್‌ಗಳು ತೆರಿಗೆ ಸಂಗ್ರಹ ಅಭಿಯಾನಕ್ಕೆ ಮೂರು ದಿನ ಮೊದಲೇ ಮನೆಗಳಿಗೆ ತೆರಳಿ ನೋಟಿಸ್‌ ನೀಡಿದ್ದರು. ಇಂಥ ದಿನ ಬರುವುದಾಗಿ ತಿಳಿದು ಅಂದು ಹಣ ಹೊಂದಿಸಿಕೊಳ್ಳುವಂತೆಯೂ ತಿಳಿಸಿದ್ದರು.

ನಿಗದಿತ ದಿನದಂದು ಬೆಳಿಗ್ಗೆ 5.30ರಿಂದಲೇ ತೆರಿಗೆ ಕಾರ್ಯಾಚರಣೆ ಶುರು ಮಾಡಿದರು. ಮುಂಚೆಯೇ ಆಸ್ತಿ ತೆರಿಗೆಯ ನೋಟಿಸ್ ಸಿಕ್ಕಿದ್ದರಿಂದ ಆಸ್ತಿಗಳ ಮಾಲೀಕರು ದುಡ್ಡನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಸ್ಥಳದಲ್ಲೇ ತೆರಿಗೆ ಹಣ ಪಾವತಿಸಿದರು. ಬೆಳಿಗ್ಗೆಯಿಂದ ಮಧ್ಯಾಹ್ನ 12ರವರೆಗೆ, ಸಂಜೆ 4ರಿಂದ 6 ಗಂಟೆಯವರೆಗೆ, ಬಾಕಿ ಉಳಿಸಿಕೊಂಡಿರುವವರ ಮನೆಗಳಿಗೆ ತೆರಳಿ ಆಸ್ತಿ ತೆರಿಗೆ ಸಂಗ್ರಹಿಸಲಾಯಿತು. ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ADVERTISEMENT

ತೆರಿಗೆ ಸಂಗ್ರಹಕ್ಕೆ ಹೋದರೆ ಜನರು ಮೂಲಸೌಕರ್ಯಗಳನ್ನು ಕಲ್ಪಿಸದಿರುವ ಬಗ್ಗೆ ಪ್ರಶ್ನಿಸಿ ತೆರಿಗೆ ಕೊಡಲಿಕ್ಕಿಲ್ಲ ಎಂದು ಭಾವಿಸಿ ಹಿಂಜರಿಕೆಯಿಂದಲೇ ಮನೆಗಳಿಗೆ ತೆರಳಿದ ಪಿಡಿಒ ಒಬ್ಬರಿಗೆ ಜನರು ಸ್ವಾಗತಿಸಿ ಬಾಕಿ ತೆರಿಗೆ ಪಾವತಿಸಿದ್ದಾರೆ. ತಮ್ಮ 24 ವರ್ಷಗಳ ವೃತ್ತಿ ಜೀವನದಲ್ಲಿ ಇಷ್ಟೊಂದು ತೆರಿಗೆ ಸಂಗ್ರಹವಾಗಿರಲಿಲ್ಲ ಎಂದು ತಿಳಿಸಿದ್ದಾರೆ. ತೆರಿಗೆ ಸಂಗ್ರಹವಾದಷ್ಟೂ ಹೆಚ್ಚಿನ ಮೂಲಸೌಕರ್ಯ ಕಲ್ಪಿಸಲು ನೆರವಾಗಲಿದೆ ಎಂಬುದನ್ನು ಗ್ರಾಮಸ್ಥರಿಗೆ ತಿಳಿಸಿದ್ದೇವೆ ಎನ್ನುತ್ತಾರೆ ಆಳಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ.

‘ಹೆಚ್ಚು ತೆರಿಗೆ ಸಂಗ್ರಹಿಸಿದ ಪಂಚಾಯಿತಿಗಳ ಪಿಡಿಒ, ಬಿಲ್ ಕಲೆಕ್ಟರ್ ಹಾಗೂ ಕಂಪ್ಯೂಟರ್ ಆಪರೇಟರ್‌ಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹೆಚ್ಚು ಸಾಧನೆ ಮಾಡಿದ ಮೂವರು ಪಿಡಿಒಗಳಿಗೆ ಟ್ರಾಲಿ, ಆರು ಜನ ಬಿಲ್ ಕಲೆಕ್ಟರ್ ಹಾಗೂ ಕಂಪ್ಯೂಟರ್‌ ಆಪರೇಟರ್‌ಗಳಿಗೆ ಟೈಟನ್ ವಾಚ್‌ಗಳನ್ನು ವೈಯಕ್ತಿಕವಾಗಿ ಖರೀದಿಸಿ ವಿತರಿಸಿದ್ದೇನೆ’ ಎಂದು ಮಾನಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆಸ್ತಿ ತೆರಿಗೆ ಸಂಗ್ರಹಿಸಲು ಆಳಂದ ತಾಲ್ಲೂಕಿನಲ್ಲಿ ವಿಶೇಷ ಅಭಿಯಾನ ನಡೆದಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಉಳಿದ ತಾಲ್ಲೂಕುಗಳಲ್ಲಿಯೂ ಬಾಕಿ ತೆರಿಗೆ ಸಂಗ್ರಹಿಸಿ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಾಗುವುದು
– ಭಂವರ್ ಸಿಂಗ್ ಮೀನಾ ಜಿ.ಪಂ. ಸಿಇಒ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.