ADVERTISEMENT

‘ಜಾತಿ ವಿಷಬೀಜ ಬಿತ್ತುವ ಎನ್‌ಇಪಿ’

ವಾಡಿ: ಹೊಸ ಶಿಕ್ಷಣ ನೀತಿ ಖಂಡಿಸಿ ಪ್ರತಿಭಟನೆ, ವಾಪಸ್ ಪಡೆಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜುಲೈ 2022, 5:38 IST
Last Updated 30 ಜುಲೈ 2022, 5:38 IST
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಮುಖಂಡರು ವಾಡಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಖಂಡಿಸಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಮುಖಂಡರು ವಾಡಿಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ವಾಡಿ: ‘ಸಮಾಜವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ವೈಜ್ಞಾನಿಕ ಶಿಕ್ಷಣವನ್ನು ಧಿಕ್ಕರಿಸಿ ಅಜ್ಞಾನ, ಅಂಧಶ್ರದ್ದೆ, ಜಾತಿ ವಿಷಬೀಜ ಬಿತ್ತುವ ಹೊಸ ಶಿಕ್ಷಣ ನೀತಿ ಜಾರಿಗೆ ತರುವ ಕ್ರಮ ದೇಶಕ್ಕೆ ಅತ್ಯಂತ ಮಾರಕ. ಕೂಡಲೇ ನೀತಿ ವಾಪಸ್ಸು ಪಡೆಯಬೇಕು’ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಮೌಲಾನ ಅಬುಲ್ ಕಲಾಂ ವೃತ್ತದಲ್ಲಿ ಜಮಾಯಿಸಿದ ಮುಖಂಡರು ‘ದೇಶದಲ್ಲಿಯೇ ನಾವೇ ಮೊದಲು’ ಎಂಬ ಹುಸಿ ಹೆಗ್ಗಳಿಕೆಗೆ ಹಾಗೂ ಕೇಂದ್ರ ಸರ್ಕಾರದ ನೇತಾರರನ್ನು ಮೆಚ್ಚಿಸುವುದಕ್ಕಾಗಿ ರಾಜ್ಯ ಸರ್ಕಾರ ಹಾಗೂ ಉನ್ನತ ಶಿಕ್ಷಣ ಸಚಿವರು ಯಾವುದೇ ಚರ್ಚೆ, ಸಂವಾದಗಳನ್ನು ಮಾಡದೇ, ಅನುಷ್ಠಾನದ ರೂಪುರೇಷೆಗಳನ್ನು ರೂಪಿಸದೇ ಮತ್ತು ಪೂರ್ವ ತಯಾರಿಯಿಲ್ಲದೇ ಕೋವಿಡ್ ಸಂಕಷ್ಟ ಕಾಲದಲ್ಲಿ ಏಕಾಏಕಿ ಎನ್.ಇ.ಪಿ ಜಾರಿಗೊಳಿಸಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ರಾಜ್ಯ ಉಪಾಧ್ಯಕ್ಷ ವೀರಭದ್ರಪ್ಪ ಆರ್. ಕೆ ಮಾತನಾಡಿ, 'ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ ನೆಪದಲ್ಲಿ ಸತ್ಯಗಳನ್ನು ತಿರುಚಿ, ಪ್ರಗತಿವಿರೋಧಿ ಚಿಂತನೆಯನ್ನು ಪಠ್ಯಪುಸ್ತಕದ ಮೂಲಕ ಪ್ರಚಾರ ಮಾಡಲು ಪ್ರಯತ್ನಿಸುತ್ತಿದೆ. ಮಕ್ಕಳಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಯನ್ನು ಕುಂಠಿತಗೊಳಿಸಿ ಕೋಮುದ್ವೇಷದ ವಿಷಬೀಜಗಳನ್ನು ಬಿತ್ತಲು, ಏಕತೆ ಮತ್ತು ಕೋಮು ಸೌಹಾರ್ದತೆ ಹಾಳು ಮಾಡುವುದೇ ಸರ್ಕಾರದ ಉದ್ದೇಶವಾಗಿದೆ’ ಎಂದರು.

ADVERTISEMENT

ನಮ್ಮ ದೇಶದ ಮಹಾನ್ ನೇತಾರರು ದೇಶದ ಮುನ್ನೆಡೆಗೆ ವೈಜ್ಞಾನಿಕ ಸತ್ಯ ಹೇಳುವ ಶಿಕ್ಷಣ ಬೇಕು ಎನ್ನುವ ಐತಿಹಾಸಿಕ ಸತ್ಯ ಎತ್ತಿ ಹಿಡಿದಿದ್ದರು. ಅದಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸಿದ್ದರು. ಹೊಸ ಶಿಕ್ಷಣ ಜಾರಿ ನೆಪದಲ್ಲಿ ಮಹಾನ್ ವ್ಯಕ್ತಿಗಳ ಆಶೋತ್ತರಗಳಿಗೆ ಕೊಡಲಿ ಏಟು ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ಜಿಲ್ಲಾ ಸಮಿತಿ ಸದಸ್ಯೆ ಪದ್ಮರೇಖಾ ಆರ್. ಕೆ ಮಾತನಾಡಿ, ಸರ್ಕಾರಿ ಶಾಲೆಗಳ ವಿಲೀನ ಮಾಡುವುದರ ಮೂಲಕ ರಾಜ್ಯದ 13800 ಪ್ರಾಥಮಿಕ ಶಾಲೆಗಳ ಮುಚ್ಚುವಿಕೆಗೆ ಷಡ್ಯಂತ್ರ ರೂಪಿಸಲಾಗಿದೆ. ಶಿಕ್ಷಣದಲ್ಲಿ ಶುಲ್ಕ ಹೆಚ್ಚಳ, ಮೂಲಭೂತ ಸೌಲಭ್ಯಗಳ ಕೊರತೆ, ಕೊಠಡಿ, ಬೋಧಕ ಸಿಬ್ಬಂದಿ, ಗ್ರಂಥಾಲಯ, ಪ್ರಯೋಗಾಲಯಗಳು ಇಲ್ಲ. ಇಂಥ ಕನಿಷ್ಠ ಸಮಸ್ಯೆಗಳನ್ನು ಬಗೆ ಹರಿಸುವುದನ್ನು ಬಿಟ್ಟು ಅನಾವಶ್ಯಕ ಹೊಸ ನೀತಿ ಜಾರಿಗೊಳಿಸುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ಸ್ಥಳೀಯ ಸಮಿತಿ ಸಂಚಾಲಕ ರಮೇಶ ಮಾಶಾಳ, ಶರಣಕುಮಾರ ದೋಶೆಟ್ಟಿ ಮಾತನಾಡಿದರು.

ಈರಣ್ಣ ಇಂಗಳಗಿ, ಶಿಕ್ಷಕರಾದ ಅಮೀರ್ ಪಟೇಲ, ಸೀತಾಬಾಯಿ ಹೆರೂರು, ಶಿವಲೀಲಾ ಮಾಶಾಳಕರ, ಸುಜಾತ ಸರಡಗಿ, ಸುನೀಲ ರಾಠೋಡ, ಲಕ್ಷ್ಮೀ, ಜಯಶ್ರೀ ವಿಠ್ಠಲ್ ರಾಠೋಡ, ಜ್ಯೋತಿ ಒಡೆಯರ್, ಸಿದ್ದಮ್ಮ ಬುಕ್ಕಾ, ಶರಣಮ್ಮ ಪಾಟೀಲ್, ಭಾಗ್ಯಶ್ರೀ ಅಲ್ಲಿಪುರ
ಸೇರಿದಂತೆ ಕಾರ್ಯಕರ್ತರು
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.