ADVERTISEMENT

ಚಿಂಚೋಳಿ: ಚೆಟ್ಟಿನಾಡ್ ಕಂಪನಿ ಗಣಿಗಾರಿಕೆಯಿಂದ ಹಾನಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 7:02 IST
Last Updated 16 ಜುಲೈ 2021, 7:02 IST
ಚಿಂಚೋಳಿ ತಾಲ್ಲೂಕು ಕಲ್ಲೂರು ರೋಡ್ ಗ್ರಾಮದ ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಮಹಾದ್ವಾರದ ಎದುರು ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡ ಸಂಜೀವನ ಯಾಕಾಪುರ ಮಾತನಾಡಿದರು
ಚಿಂಚೋಳಿ ತಾಲ್ಲೂಕು ಕಲ್ಲೂರು ರೋಡ್ ಗ್ರಾಮದ ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಮಹಾದ್ವಾರದ ಎದುರು ಗುರುವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಜೆಡಿಎಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡ ಸಂಜೀವನ ಯಾಕಾಪುರ ಮಾತನಾಡಿದರು   

ಚಿಂಚೋಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದ ಚೆಟ್ಟಿನಾಡ್ ಸಿಮೆಂಟ್ ಕಂಪನಿ ಎದುರು ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಕಂಪನಿಯ ಸಂತ್ರಸ್ತರು ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಮುಖಂಡ ಸಂಜೀವನ ಯಾಕಾಪುರ, ಚೆಟ್ಟಿನಾಡ್ ಸಿಮೆಂಟ್ ಕಂಪನಿಯ ಅವೈಜ್ಞಾನಿಕ ಗಣಿಗಾರಿಕೆಯಿಂದ ಕಲ್ಲೂರು ರೋಡ್ ಮತ್ತು ಭಕ್ತಂಪಳ್ಳಿ ಗ್ರಾಮದಲ್ಲಿ ಹಲವಾರು ಮನೆಗಳ ಗೋಡೆಗಳು ಬಿರುಕು ಬಿಡುತ್ತಿವೆ. ಆದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕಂಡೂ ಕಾಣದಂತೆ ಜಾಣ ಕುರುಡು ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಅವೈಜ್ಞಾನಿಕ ಗಣಿಗಾರಿಕೆ ಮತ್ತು ಭಾರಿ ಪ್ರಮಾಣದ ಸ್ಫೋಟಕಗಳ ಬಳಕೆಯಿಂದ ಎರಡೂ ಗ್ರಾಮಗಳು ಬಡ ಜನರು ಭೀತಿಯಲ್ಲಿಯೇ ದಿನದೂಡುತ್ತಿದ್ದಾರೆ. ಎರಡೂ ಗ್ರಾಮಗಳಲ್ಲಿ ಹಾನಿಗೊಳಗಾದ ಮನೆಗಳನ್ನು ಹೊಸದಾಗಿ ನಿರ್ಮಿಸಿಕೊಡಬೇಕು, ಕಂಪನಿಗೆ ಜಮೀನು ನೀಡಿದ ಎಲ್ಲರಿಗೂ ಉದ್ಯೋಗ ಮತ್ತು ಅಂದಿನಿಂದ ಇಂದಿನವರೆಗೆ ವೇತನ ನೀಡಬೇಕು, ಕಂಪನಿಯಿಂದ ಸ್ಥಳೀಯ ವ್ಯಾಪಾರಸ್ಥರಿಗೆ ವ್ಯವಹಾರ ನೀಡಬೇಕು, ಮಾಲಿನ್ಯನಿಂದ ಬೆಳೆ ಹಾನಿ ಸಂಭವಿಸುತ್ತಿದ್ದು ಸುತ್ತಲಿನ ರೈತರಿಗೆ ಪರಿಹಾರ ಕೊಡಬೇಕು, ಕಲ್ಲೂರು ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆವಿಭಜಕ ನಿರ್ಮಿಸಿ ವಿದ್ಯುದ್ದಿಕರಣ ಕೈಗೊಳ್ಳಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ADVERTISEMENT

ಉಪವಿಭಾಗಾಧಿಕಾರಿ ಕಚೇರಿಯ ಅಧಿಕಾರಿಗಳು ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ರವಿಶಂಕರರೆಡ್ಡಿ ಮುತ್ತಂಗಿ, ವಿಷ್ಣುಕಾಂತ ಮೂಲಗೆ, ಹಣಮಂತ ಪೂಜಾರಿ, ರಾಹುಲ್ ಯಾಕಾಪುರ, ಸಿದ್ದು ಬುಬಲಿ, ಅಂಜ್ಜಪ್ಪ ಪೂಜಾರಿ, ರಘು ದೇಸಾಯಿ, ಎಸ್.ಕೆ ಮುಕ್ತಾರ್, ಓಮನರಾವ್ ಕೊರವಿ, ಬಕ್ಕಪ್ರಭುಗೌಡ, ನೀಲಕಂಠ ಐನೋಳ್ಳಿ, ಕಿರಣ ಶಾದಿಪುರ, ಸುರೇಂದ್ರ ಶಿವರೆಡ್ಡಿಪಳ್ಳಿ, ಹಣಮಂತರೆಡ್ಡಿ ದೋಟಿಕೊಳ, ಹಣಮಂತರಾವ್ ದೇಶಪಾಂಡೆ, ನಾಗಯ್ಯಸ್ವಾಮಿ, ಗೌತಮ ಹೂಡದಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.